‘ಸಾಮಾನ್ಯರ ಅಸಾಮಾನ್ಯ ಅವ್ವ’ ಅವ್ವ ಪುಸ್ತಕ ಮಾಲೆಯ 7ನೇ ಕೃತಿ. ಈ ಕೃತಿಯನ್ನು ಲೇಖಕ ಚಂದ್ರಶೇಖರ ವಸ್ತ್ರದ ಅವರು ಸಂಪಾದಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತಾಯಿಯ ನೆನಪಿನಲ್ಲಿ ಪ್ರಕಟಗೊಂಡ ಈ ಕೃತಿಗೆ ಮೊದಲ ಮಾತುಗಳನ್ನು ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಬರೆದಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ ‘ಅವ್ವ ಪುಸ್ತಕಮಾಲೆಯ ಏಳನೆಯ ಕೃತಿ ಕುಸುಮ ಸಾಮಾನ್ಯರ ಅಸಾಮಾನ್ಯ ಅವ್ವ’ ಈ ಮಾಲೆಯ ಇತರ ಕೃತಿಗಳಿಗಿಂತ ಇದು ಭಿನ್ನವಾಗಿ ನಿಲ್ಲಲು ಕಾರಣ ಇಲ್ಲಿಯ ಬಹುತೇಕ ಲೇಖಕರು ಸಾಹಿತಿಗಳಲ್ಲ, ಗೃಹಣಿ, ಒಕ್ಕಲಿಗ, ದೇವದಾಸಿ, ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತ, ಕಾರ್ಯಾಲಯದ ಕರಣಿಕ, ಇಂಜನಿಯರ್, ಪೊಲೀಸ್ ಅಧಿಕಾರಿ, ಸೈನ್ಯಾಧಿಕಾರಿ ಇತ್ಯಾದಿಯಾಗಿ ವಿವಿಧ ಬಗೆಯ, ವಿವಿಧ ವೃತ್ತಿಯ, ವಿವಿಧ ಪ್ರದೇಶಗಳ ಜನರು ತಮ್ಮ ತಮ್ಮ ತಾಯಿಯ ಬಗ್ಗೆ ಬರೆದ ಹೃದ್ಯ ಲೇಖನಗಳ ಗುಚ್ಛವಿದು ಎಂದಿದ್ದಾರೆ. ಇಲ್ಲಿ ಚಿತ್ರಿತವಾದ ಬಹುತೇಕ ತಾಯಂದಿರು ಕಷ್ಟದ ಕುಲುಮೆಯಲ್ಲಿ ಬೆಂದವರು, ಅಪಮಾನದ ಅಗ್ನಿವರ್ಷದಲ್ಲಿ ಸಿಲುಕಿ ನೊಂದವರು. ಪತಿಯ ದೌರ್ಜನ್ಯಕ್ಕೆ ಒಳಗಾದ ಜೀವಗಳು ಕೆಲವು, ಕುಟುಂಬದ ಸದಸ್ಯರ ತಾತ್ಸಾರ-ಅವಹೇಳನಕ್ಕೆ ಸಿಲುಕಿದ ಅಭಾಗಿನಿಯರು ಇನ್ನು ಹಲವರು. ಆದರೆ ಪ್ರತಿಯೊಬ್ಬರೂ ನಂಜನ್ನುಣ್ಣುತ್ತಲೇ ನಲಿವನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಹಂಚುತ್ತ ಬದುಕಿದ ಅಮೃತ ಮಾತೆಯರು ಎಂದಿದ್ದಾರೆ.
©2025 Book Brahma Private Limited.