ಲೇಖಕಿ ಡಾ. ಕೆ. ಎಸ್. ಪವಿತ್ರ ಅವರ ಕೃತಿ ʼಮಹಿಳಾ ಮನೋಧರ್ಮʼ. ಸಮಾಜದಲ್ಲಿ ಮಹಿಳೆಯರ ಪಾತ್ರ ಹಾಗೂ ಅವರ ಮೇಲೆ ನಡೆಯುತ್ತಿರುವ ಶೋಷಣೆಗಳನ್ನು ಲೇಖಕಿ ಪುಸ್ತಕದಲ್ಲಿ ಹಲವು ಕಥನಗಳ ಮೂಲಕ ಹೇಳಿದ್ದಾರೆ. ಲೇಖಕಿ ಡಾ. ಹಾಲತಿ ಸೋಮಶೇಖರ್ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಈ ಕೃತಿಯು ಮಹಿಳೆಯರು ನಿರಂತರವಾಗಿ ಅನುಭವಿಸುವ ದೈಹಿಕ ಮತ್ತು ಮಾನಸಿಕ ಬೇನೆಯ ಕಥನಗಳ ಸಂಕಲನ. ಈ ಕಥನಗಳು ಹೆಣ್ಣಿನ ನೋವುಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಸಂಕ್ಷಿಪ್ತವಾಗಿ ನಮ್ಮ ಮುಂದಿಡುತ್ತದೆ. ಇದರ ಹಿಂದೆ ಲಿಂಗ ಸಮಾನತೆ ಸಾಧಿಸುವ ಸುಂದರ ಬದುಕಿನ ಕನಸುಗಳಿವೆ. ಸಾಮಾಜಿಕವಾಗಿ ಎರಡನೆಯ ಪ್ರಜೆಯಾಗಿರುವ ಹೆಣ್ಣು ಗಂಡಿನೊಂದಿಗೆ ಹೊಂದಿಕೊಳ್ಳುವುದು, ಗಂಡು ಪ್ರಧಾನ ಸಮಾಜದಲ್ಲಿನ ಗಂಡು ಹೆಣ್ಣಿನೊಂದಿಗೆ ಹೊಂದಿಕೊಂಡು ನಡೆಯುವುದು ಸವಾಲಿನಂತಾಗಿದೆ. ಈ ನೋವುಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ಸೋಲುತ್ತಿರುವುದೇ ಎಲ್ಲಾಅವಾಂತರಗಳನ್ನು ತಂದೊಡ್ಡಿದೆ. ಹೀಗಾಗಿ ಆಧುನಿಕ ಕುಟುಂಬ ವ್ಯವಸ್ಥೆಯಲ್ಲಿ ʼಸುಖ ದಾಂಪತ್ಯʼ ಎಂಬುದು ಒಂದು ಆದರ್ಶದ ಮಾತಾಗಿ ಕೇಳುತ್ತಿದೆ. ಹೆಣ್ಣು ಅನುಭವಿಸುವ ಜೀವಶಾಸ್ತ್ರೀಯ ಮತ್ತು ಸಾಮಾಜಿಕ ನೋವುಗಳನ್ನು ವಿವರಿಸುವ ಇಲ್ಲಿನ ಲೇಖನಗಳು ಆರೋಗ್ಯಕರವಾದ ಜೀವನ ಶೈಲಿಯ ಕಡೆಗೆ ನಮ್ಮನ್ನು ಚಲಿಸುವಂತೆ ಮಾಡುತ್ತವೆ. ಆ ಪ್ರಯತ್ನದಲ್ಲಿ ಡಾ. ಕೆ. ಎಸ್. ಪವಿತ್ರ ಅವರು ಮಹಿಳೆಯರ ಮನೋಧರ್ಮವನ್ನು ಪರಿಣಾಮಕಾರಿಯಾಗಿ ಮನೋವೈಜ್ಞಾನಿಕ ನೆಲೆಯಲ್ಲಿ ಚಿತ್ರಿಸಿದ್ದಾರೆ. ಆ ಮೂಲಕ ಪುರುಷರ ಮೋನೋಧರ್ಮ ಕೂಡಾ ಬದಲಾಗಬೇಕೆಂಬ ತಣ್ಣನೆಯ ಒತ್ತಾಯವಿದೆ ಎಂದು ಹೇಳಿದ್ದಾರೆ.
©2024 Book Brahma Private Limited.