‘ಸರ್ಪ ಸಂಕುಲ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಹಾವುಗಳ ಇತಿಹಾಸ ಹಾಗೂ ಜೀವನಶೈಲಿ ಕುರಿತ ಅಧ್ಯಯನ ಕೃತಿಯಾಗಿದೆ. ಕೃತಿಯು 12 ಅಧ್ಯಯಗಳನ್ನು ಒಳಗೊಂಡಿದೆ. ಸರ್ಪಸತ್ಯ, ತಪ್ಪು ಕಲ್ಪನೆಗಳು, ನಾಗರಹಾವು, ಹಾವಿನ ಹಾವಲಿ, ನಾಗರಪಂಚಮಿ, ಕಾಳಿಂಗ ಸರ್ಪ, ಸರ್ಪವಿಷ, ಹೆಬ್ಬಾವು, ಸರ್ಪ ಸಹವಾಸ, ಮಂಡಲದ ಹಾವು, ಕಲೆಯಲ್ಲಿ ಸರ್ಪ, ಇನ್ನಷ್ಟು ಮಾಹಿತಿಯನ್ನು ಒಳಗೊಂಡಿದೆ.
ಕೃತಿಯ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳು ಹೀಗೆ ಪ್ರಸ್ತಾಪಿಸಲ್ಪಟ್ಟಿದೆ : ಶತಮಾನಗಳಿಂದ ಬೀಡು ಮಾಡಿಕೊಂಡಿರುವ ರೂಢ ಅಥವಾ ಮೂಢ ನಂಬಿಕೆಗಳನ್ನು ಹೋಗಲಾಡಿಸಿಕೊಂಡು, ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳದೇ ನಾವು ಆಧುನಿಕರು ಅನಿಸಿಕೊಳ್ಳುವುದು ಅಸಾಧ್ಯ! ಇತ್ತೀಚೆಗೆ ಮುಕ್ತಾಯಗೊಂಡ ಇಪ್ಪತ್ತನೆಯ ಶತಮಾನ ಒಂದರಲ್ಲಿಯೇ ವಿಶ್ವವು ಸಾಧಿಸಿದ ವೈಜ್ಞಾನಿಕ ಮುನ್ನಡೆ, ಸಹಸ್ರಾರು ವರ್ಷಗಳಲ್ಲಿ ಕೈಗೂಡಿರಲಿಲ್ಲ. ಬಹುಸಂಖ್ಯಾತ ಭಾರತೀಯರು ಈ ವಿಜ್ಞಾನ ಪ್ರಗತಿಯ ಸಂಪೂರ್ಣ ಲಾಭವನ್ನು ಪಡೆಯುತ್ತಿದ್ದರೂ, ದುರ್ದೈವದಿಂದ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಎಳ್ಳಷ್ಟೂ ಯತ್ನಿಸಲಿಲ್ಲ. ಸೀರೆ-ಧೋತರದ ಸ್ಥಾನವನ್ನು ಆಧುನಿಕ ಉಡುಪುಗಳು ಆಕ್ರಮಿಸಿವೆ. ಒಲೆಗಳನ್ನು ತ್ಯಜಿಸಿ ಮೈಕ್ರೋವೇವ್ ಬರಮಾಡಿಕೊಂಡವರಿದ್ದಾರೆ. ಅಂಚೆಸೇವೆಯನ್ನು ಕಡೆಗಣಿಸಿ ಫೋನನ್ನು ಬಳಸುತ್ತಾರೆ. ಚಲನಚಿತ್ರಗಳನ್ನು ಅಲಕ್ಷಿಸಿ ಇಂಟರ್‌ನೆಟ್ ವೀಕ್ಷಿಸುತ್ತಿದ್ದಾರೆ. ಇಷ್ಟಾದರೂ ಬಾದರಾಯಣ ಕಾಲದ ಕುರುಡು ನಂಬಿಕೆಗಳನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದಾರೆ: ಕಪ್ಪೆಯ ಸ್ಪರ್ಶದಿಂದ ಕಜ್ಜಿಯಾಗುತ್ತದೆ. ಕಾಗೆ ಕರ್ಕಶವಾಗಿ ಕೂಗಿದರೆ ಅನಾಹುತ ಕಟ್ಟಿಟ್ಟದ್ದು. ಬೆಕ್ಕು ಅಡ್ಡ ಬಂದರೆ ಅಪಶಕುನ. ಹಲ್ಲಿಯು ಅತ್ಯಂತ ವಿಷಕಾರಿ, ಸರ್ಪಗಳು ಒಂದಾದುದನ್ನು ನೋಡಿದರೆ ಶಾಪ ತಟ್ಟುತ್ತದೆ ಇತ್ಯಾದಿ. ಸರ್ಪಗಳ ಜೀವನ ಕುರಿತು ನಮ್ಮಲ್ಲಿರುವ ಅಜ್ಞಾನ ಹೇಳತೀರದು. ಈ ಹಿನ್ನೆಲೆಯಲ್ಲಿ 'ಪ್ರಿಸಮ್' ಪ್ರಕಾಶನದವರು ಹಾವುಗಳ ಜೀವನ ಕುರಿತು ಕಿರು ಹೊತ್ತಗೆಯೊಂದನ್ನು ಬರೆದುಕೊಡಲು ಸೂಚಿಸಿದಾಗ, ಆ ಕುರಿತು ಆಳವಾದ ಅಭ್ಯಾಸವನ್ನು ಮಾಡಲೇ ಬೇಕಾಯಿತು. ಮಲೆನಾಡಿನ ಅಂಚಿನಲ್ಲಿರುವ ನಿತ್ಯಹರಿದ್ವರ್ಣ ಕಾಡುಗಳು ಆವರಿಸಿದ ಕರಾವಳಿಯ ಜಿಲ್ಲೆಯಲ್ಲಿ ಹುಟ್ಟಿ ಬೆಳೆದದ್ದರಿಂದ ಹಾವುಗಳ ನಿಕಟ ಪರಿಚಯ ಬಾಲ್ಯದಿಂದಲೇ ಕೂಡಿ ಬಂದಿತ್ತು. ಇದು ದೊಡ್ಡ ಅನುಕೂಲವಾಗಿ ಪರಿಣಮಿಸಿತು. ಇಲ್ಲಿ ಸರ್ಪಗಳ ಕುರಿತು ಸಕಲ ಮಾಹಿತಿ ಸೇರಿಸಲು ಯತ್ನಿಸುವ ಬದಲಾಗಿ ಅವುಗಳ ಕುರಿತಾದ ತಪ್ಪುಕಲ್ಪನೆಗಳನ್ನು ತೋರಿಸಿಕೊಟ್ಟು, ವೈಜ್ಞಾನಿಕ ಸತ್ಯಗಳನ್ನು ಮಂಡಿಸಲಾಯಿತು’ ಎಂದು ವಿವರಿಸಿದ್ದಾರೆ.
©2024 Book Brahma Private Limited.