‘ಪ್ರೇಯಸಿಗೆ ಪತ್ರಗಳು’ ಕೃತಿಯು ಕೃಷ್ಣಾನಂದ ಕಾಮತ್ ಅವರು ತಮ್ಮ ಮಡದಿಗೆ ಬರೆದ ಪತ್ರಗಳ ಸಂಕಲನವಾಗಿದೆ. ಈ ಕೃತಿಯು 34 ಶೀರ್ಷಿಕೆಗಳನ್ನು ಒಳಗೊಂಡಿದೆ. ವಧುವಿಗೆ, ಪರಿಚಯ, ರೂಪಲಾವಣ್ಯ, ಮೇಘದೂತ, ಜನಾಭಿಪ್ರಾಯ, ಸಲಹೆಗಳು, ಶುಭವಾರ್ತೆ, ಪರಿವರ್ತನೆ, ಚಿಕ್ಕಡಿಯ ಸವಾರಿ, ಬಯಕೆಯೂಟ, ಪ್ರಕಾಶಕರ ಪತ್ರ, ತಿರುಗಾಟದ ತೀಟೆ, ಅತಿಥಿಗಳು, ಸತ್ವಪರೀಕ್ಷೆ, ಪ್ರವಾಸದಲ್ಲಿ, ಮುರುಕಲು ಮನೆ ಮೇಲು, ಬೆಂಗಳೂರ ದರ್ಶನ, ಮಹಿಳಾ ಮಂಡಲಿ, ಬಡ ಬಂಗಾಲಿಗಳು, ಭಯ್ಯಾರ ರಾಜ್ಯದಲ್ಲಿ, ಸೌಂದರ್ಯಭರಿತ ಪ್ಲಾಸಿ, ಮುದ್ದುಮಣಿ, ಪಿತರಿಗೆ ಪತ್ರ, ನೆರವು, ವಿಧೇಯಕ ಪತಿ, ಪತ್ರ ಸ್ನೇಹಿತೆಯರು, ಪುತ್ರನ ಪಾಲನೆ, ಕುರುಡಲ್ಲದ ಕಾಂಚಾಣ, ಹೆಣ್ಣಾಳು, ಅಭಿಮಾನಿ, ಅನಿರೀಕ್ಷಿತ ಯಶ, ಪರದೇಶಕ್ಕಾಗಿ ಪರದಾಟ, ಶಿಕ್ಷಣದ ಗುರಿ ಇವೆಲ್ಲವನ್ನು ಒಳಗೊಂಡಿದೆ.
ಕೃತಿಗೆ ಮುನ್ನುಡಿ ಬರೆದಿರುವ ಜ್ಯೋತ್ಸ್ನಾ ಕಾಮತ್ ಅವರು,ಕಾಮತರು, 'ಪ್ರೇಯಸಿಗೆ ಪತ್ರಗಳು’ ಪುಸ್ತಕಕ್ಕೆ ಪತ್ನಿಯಿಂದಲೇ ಮುನ್ನುಡಿಯನ್ನು ಬರೆಯಿಸುವ ನಿರ್ಧಾರವನ್ನು ಕೈಕೊಂಡದ್ದು ಅರಿತು ಉಬ್ಬಿಹೋದೆ. ಈ ಅಪೂರ್ವವಾದ ಗೌರವವನ್ನು ಅದೆಷ್ಟು ಸಮರ್ಪಕವಾಗಿ ನಿರ್ವಹಿಸಿದ್ದೇನೆಂದು ಇನ್ನಿತರರು ನಿರ್ಣಯಿಸಬೇಕು. ಹೀಗೆ ಮಾಡಲು ನನಗಿರುವ ಒಂದೇ ಒಂದು ಅಧಿಕಾರವೆಂದರೆ, ಇವೆಲ್ಲ ಪತ್ರಗಳು, ನನಗೇ ಸಂಬೋಧಿಸಿದವುಗಳು. ಅಲ್ಲದೇ, ಆಗೊಮ್ಮೆ ಈಗೊಮ್ಮೆ ಇಲ್ಲಸಲ್ಲದ ಪ್ರಶ್ನೆಗಳನ್ನು ಪತ್ರಮುಖೇನ ಕೇಳಿ, ಕೆಣಕಿ ಪರಿಪಕ್ವವಾದ ಉತ್ತರಗಳನ್ನು ದೊರಕಿಸಿದ್ದು! ಇಷ್ಟೊಂದು ವರ್ಷ ನನ್ನ ವೈಯಕ್ತಿಕ ಆಸ್ತಿಯಾಗಿದ್ದ ಈ ಪತ್ರಗಳನ್ನು ಪ್ರೀತಿಯ ಓದುಗರೊಂದಿಗೆ ಹಂಚಿಕೊಳ್ಳಲು ಸಾಧ್ಯವಾದದ್ದಕ್ಕೆ ತುಂಬ ಸಂತೋಷವಾಗಿದೆ. ಪತ್ರಲೇಖನದ ತಮ್ಮ ಹವ್ಯಾಸದ ಕುರಿತು ‘ಸ್ನೇಹಿತೆಯರು' ಪತ್ರದಲ್ಲಿ ಕಾಮತರು ಮುಕ್ತಮನಸ್ಸಿನಿಂದ ಬರೆದುಕೊಂಡಿದ್ದಾರೆ. ಬರೆದ ಪ್ರತಿ ಪತ್ರದಲ್ಲಿಯೂ ಅಚ್ಚುಕಟ್ಟುತನ ಶಿಸ್ತುಗಳು ಒಡೆದು ಕಾಣುತ್ತಿದ್ದವು. ತ್ವರಿತ ಅಂಚೆ', ಸಂಪೂರ್ಣ ವಿಳಾಸ, ಅಂಚೆಯ ನಂಬರು, (ಪಿನ್‌ಕೋಡ್) ತಪ್ಪದೆ ಬರೆಯುತ್ತಾರಲ್ಲದೇ ಮೊಟಕು ಮಾಡಲು ಯತ್ನಿಸುವುದೇ ಇಲ್ಲ. ಬರೆದ ಪತ್ರಗಳು ಅಂಚೆಯಲ್ಲಿ ಕಳೆದು ಹೋದರೆ, ಕೂಡಲೇ ತಿಳಿಯಬೇಕೆಂದು, ಅನುಕ್ರಮ ನಂಬರುಗಳನ್ನು ಸೇರಿಸಿರುತ್ತಾರೆ. ಕಾಣೆಯಾದ ಪತ್ರಗಳನ್ನು ಇನ್ನೊಮ್ಮೆ ಶಬ್ದಶಃ ಬರೆಯುವಂಥ ಅಗಾಧ ಸ್ಮರಣಶಕ್ತಿ ಅವರದು. ಬಂದ ಪತ್ರಗಳನ್ನು ಅಷ್ಟಾವಕ್ರವಾಗಿ ಹರಿಯಬಾರದು, ನೀಟಾಗಿ ಕತ್ತರಿಸಲು ಆಜ್ಞೆಯಿತ್ತರಲ್ಲದೇ ಕತ್ತರಿಯೊಂದನ್ನು ಇದಕ್ಕಾಗಿಯೇ ಖರೀದಿಸಿ ಕಾಣಿಕೆಯಾಗಿ ಇತ್ತರು. ದಿನದ ಕೆಲಸದಿಂದ ಎಷ್ಟೇ ದಣಿಯಲಿ, ಮ್ಲಾನಳಾಗಿರಲಿ, ಕಾಯುತ್ತಿದ್ದ ನನ್ನವರ ಪತ್ರ ಕಂಡೊಡನೆ ಪುಳಕಿತಳಾಗುತ್ತಿದ್ದೆ. ಅವುಗಳನ್ನು ಆಗಾಗ ಓದುತ್ತಿರುವದು ಸಾಮಾನ್ಯವಾಗಿತ್ತು ’ ಎಂದು ಅವರು ವಿವರಿಸುತ್ತಾರೆ.
©2024 Book Brahma Private Limited.