‘ಪಶು ಪಕ್ಷಿ ಪ್ರಪಂಚ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಸಂಪಾದಿತ ಪ್ರಾಣಿ- ಪಕ್ಷಿಗಳ ಕುರಿತ ಜೀವನ ಹಾಗೂ ಹವ್ಯಾಸದ ಲೇಖನಗಳ ಸಂಕಲನವಾಗಿದೆ. 1990 ರಲ್ಲಿ ಈ ಕೃತಿಯು ಮೊದಲನೇ ಮುದ್ರಣವನ್ನು ಕಂಡಿತ್ತು. ಕೃತಿಯು 19 ಅಧ್ಯಾಯಗಳನ್ನು ಒಳಗೊಂಡಿದೆ. ಕಣ್ತೆರೆದು ನೋಡಿದಾಗ, ನಮ್ಮ ಕಾಗೆಯ ಕತೆ, ಹಕ್ಕಿಯಾಗಿ ಹಾರಿದರೊ ಬುದ್ದಿಜೀವಿಯಾಗಲಿಲ್ಲ, ಪ್ರಾಣಿಗಳಲ್ಲಿ ನಗು- ಅಳು, ಹಗಲಲ್ಲಿ ಕಾಣುವ ಇರುಳು ಕಬ್ಬಾರೆ, ಕವಡೆಗಳ ಕಥೆ, ಸಂಗ್ರಹಾಲಯದ ಪ್ರಾಣಿಗಳು, ಲಾಂಗೂಲ ಮಹಾತ್ಮೆ, ಇಂಥ ವರ ಬೇಕು, ನಮ್ಮ ಆಪ್ತ ಗೊರಿಲ್ಲಾ, ಅಕ್ಕಾ ಭಾವಾ ಬಂದ್ರು, ಪ್ರಾಣಿ ಪ್ರಪಂಚದ ರಾಸಾಯನಿಕ ಅಸ್ತ್ರಗಳು, ಕೊಕ್ಕರೆ ರಾಯನ ಸಂಸಾರ, ಬಿಳಿ ಹುಲಿ, ಬೆಳ್ಳಕ್ಕಿಗಳು ಎಲ್ಲಿಗೆ ಪಯಣ? ಎಲ್ಲಿ ನೆಲೆ? ಕಾಗೆಯ ಕಾಯಕ, ಮೀನು ತೋಟ, ಕಣ್ಮರೆಯಾಗುತ್ತಿರುವ ಕಾಡಾನೆಗಳು, ನಮ್ಮ ಪಕ್ಷಿಗಳು ಇವೆಲ್ಲವನ್ನೂ ಒಳಗೊಂಡಿದೆ.
ಕೃತಿಯ ಹಿನ್ನೆಲೆಯಲ್ಲಿ ಲೇಖಕರು ಕೆಲವೊಂದು ವಿಚಾರಗಳನ್ನು ಹೀಗೆ ವಿವರಿಸಿದ್ದಾರೆ : ಯಾವುದೇ ದೇಶದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಪ್ರಜೆಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವದು ಅತ್ಯವಶ್ಯ. ಅಂತೆಯೇ ಪಾಶ್ಚಿಮಾತ್ಯರು ಜನಸಾಮಾನ್ಯರೂ ಅರಿಯುವಂತಹ ಸುಲಭ ಭಾಷೆಯಲ್ಲಿ ವೈಜ್ಞಾನಿಕ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ರೇಡಿಯೋ, ಟೆಲಿವಿಜನ್ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ. ನಮ್ಮ ದೇಶದಲ್ಲಿ ಬಹು ಸಂಖ್ಯಾತರಿಗೆ ವಿಜ್ಞಾನ ಕರಗಿಸಿಕೊಳ್ಳಲಾಗದ ಕಡಲೆಕಾಯಿಯಾಗಿಯೇ ಉಳಿದಿದೆ. ಪ್ರಾಣಿ ಪ್ರಪಂಚದಲ್ಲಿ ಆಸಕ್ತಿ ಹುಟ್ಟಿಸಲೆಂದು 'ಪ್ರಾಣಿ ಪರಿಸರ' ಗ್ರಂಥ ಪ್ರಕಟಿಸಿದೆ. ಅದು ಅಪಾರ ಜನಪ್ರಿಯವಾಯಿತಲ್ಲದೆ, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತವಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಪಠ್ಯ ಪುಸ್ತಕವೆಂದು ಅಂಗೀಕರಿಸಿತು. ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಮರು ಮುದ್ರಣವಾಗಿ ಸಕಲರಿಗೂ ಎಟಕುವ ಬೆಲೆಗೆ ಮಾರಲಾಯಿತು. ಇದರಿಂದ ಕ್ಲಿಷ್ಟವಾದ ವೈಜ್ಞಾನಿಕ ವಿಚಾರಗಳನ್ನು ಕಥೆ, ಕಾದಂಬರಿಗಳಷ್ಟೇ ಸುಲಭ, ಸರಳವಾಗಿ ಬರೆದರೆ ನಮ್ಮವರೂ ಸ್ವಾಗತಿಸುತ್ತಾರೆಂದು ಅರಿತು, ಹೆಚ್ಚಿನ ಪ್ರಮಾಣದಲ್ಲಿ ಓದುಗರಿಗೆ ತಲುಪುವಂತೆ 'ಕಸ್ತೂರಿ', 'ಕರ್ಮವೀರ', ಸುಧಾ, ತರಂಗ ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ. ಆಕಾಶವಾಣಿಯವರೂ ಕೆಲವು ಭಾಷಣಗಳನ್ನು ಬಿತ್ತರಿಸಿದರು. ಅವುಗಳಲ್ಲಿ ಪ್ರಾಣಿಗಳನ್ನು ಕುರಿತಾದುವುಗಳನ್ನು ಮಾತ್ರ ಈ ಗ್ರಂಥದಲ್ಲಿ ಸೇರಿಸಲಾಗಿದೆ. ಪತ್ರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಬರೆದಿದ್ದುದರಿಂದ ಈ ಲೇಖನಗಳಲ್ಲಿ ಏಕಸೂತ್ರತೆ ಇಲ್ಲದಿರುವುದು ಸಹಜವಾಗಿದೆ ಎಂದಿದ್ದಾರೆ.
©2024 Book Brahma Private Limited.