ಹಿರಿಯ ಲೇಖಕ ರಾಮಚಂದ್ರ ಗುಹ ಅವರು ಮೂಲ ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು(ಸಂಪುಟ-2) ಹಿರಿಯ ಲೇಖಕ ಜಿ.ಎನ್ ರಂಗನಾಥ್ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ’ಗಾಂಧಿ ಮಹಾತ್ಮರಾದುದು’. ಮೋಹನ್ ದಾಸ್ ಕರಮ್ ಚಂದ್ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಪದಾರ್ಪಣ ಮಾಡಿದ್ದು 1893 ರಲ್ಲಿ. ಆನಂತರ ಅಲ್ಲಿ ಅವರು ಕಳೆದ ಎರಡು ದಶಕಗಳು ಗಾಂಧಿಯವರ ಬದುಕಿನ ಗುರಿಗಮ್ಯತೆಗಳನ್ನು ರೂಪಿಸಿದ ಪರ್ವ ಕಾಲವಾಗಿದೆ. 1915 ರಲ್ಲಿ ಭಾರತಕ್ಕೆ ಹಿಂದಿರುಗುವುದಕ್ಕೆ ಮೊದಲು ಗಾಂಧಿಯವರ ಆದರ್ಶ, ವಿಚಾರಧಾರೆಗಳೆಲ್ಲ ಮೂಲಭೂತವಾಗಿ ಹರಳುಗಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲೇ. ಸಾಮ್ರಾಜ್ಯಶಾಹಿ ಮತ್ತು ಜನಾಂಗೀಯ ಭೇದಭಾವಗಳು ಅವರಿಗೆ ಮನವರಿಕೆಯಾದದ್ದು ಇಲ್ಲೇ. ಬ್ರಿಟಿಷ್ ಸಾಮ್ರಾಜ್ಯವನ್ನು ನಿಕೃಷ್ಣಗೊಳಿಸುವ ಹಾಗೂ ಆಖೈರಾಗಿ ಅದನ್ನು ನಿರ್ನಾಮಗೊಳಿಸುವ ಅವರ ತತ್ತ್ವ ಸಿದ್ದಾಂತಗಳು, ಕಾರ್ಯತಂತ್ರಗಳು ರೂಪುಗೊಂಡಿದ್ದು ಈ ಅವಧಿಯಲ್ಲೇ ಎಂದು ಸಂಶೋಧನಾತ್ಮಕವಾಗಿ ಸಾಕ್ಷಾತ್ಕರಿಸುವ ರಾಮಚಂದ್ರ ಗುಹ ಅವರ ಈ ಗ್ರಂಥ, ನಾಲ್ಕು ಖಂಡಗಳ ಪತ್ರಾಗಾರಗಳಲ್ಲಿನ ಅಮೂಲ್ಯ ಸಾಕ್ಷ್ಯಾಧಾರಗಳಿಂದ ಪುಟಪುಟದಲ್ಲೂ ಓದುಗರ ಆಸಕ್ತಿಯನ್ನು ಕೆರಳಿಸುತ್ತದೆ. ತುಂಬಿ ತುಳುಕುವ ಸಿರಿಪ್ರದ ವಿವರಗಳಿಂದ ವಿಸ್ಮಯಗೊಳಿಸುತ್ತದೆ.
ಟಾಲ್ ಸ್ಟಾಯ್ ಅವರ ಜೀವನ ದರ್ಶನ, ಯೆಹೂದಿ ತೀವ್ರಗಾಮಿಗಳೊಡನೆ ಒಡನಾಟ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರೊಡನೆ ಸ್ನೇಹ- ಸಂವಾದಗಳು, ವೈರಿಗಳ ಆಕ್ರಮಣ- ಮೇಲಾಟಗಳು, ಗಂಡನಾಗಿ-ತಂದೆಯಾಗಿ ಕಂಡ ಏಳುಬೀಳುಗಳು, ಈ ಎಲ್ಲ ಕ್ರಿಯೆಪ್ರಕ್ರಿಯೆಗಳ ಅಗ್ನಿದಿವ್ಯದಲ್ಲಿ ಗಟ್ಟಿಗೊಳ್ಳುತ್ತ ಮಿಂಚುವ ಗಾಂಧಿಯವರ ವ್ಯಕ್ತಿತ್ವವನ್ನು ರಾಮಚಂದ್ರ ಗುಹ ಇಲ್ಲಿ ಸ್ಫಟಿಕ ಸದೃಶ್ಯವಾಗಿ ಕಡೆದಿರಿಸಿದ್ದಾರೆ.
©2024 Book Brahma Private Limited.