ಲೇಖಕಿ ಎಚ್. ಎನ್. ಗೀತಾ ಅವರು ಅನುವಾದಿಸಿದ ಅನು ಬಂಡೋಪಾದ್ಯಾಯ ಅವರ ಮಹಾತ್ಮಾ ಗಾಂಧಿ ಜೀವನಚರಿತ್ರೆ ಕೃತಿ ʼಬಹುರೂಪಿ ಗಾಂಧಿʼ. ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರು ಮೂಲ ಪುಸ್ತಕದ ಮುನ್ನುಡಿಯಲ್ಲಿ, “ಇದು ಮಕ್ಕಳಿಗಾಗೆಂದೇ ಬರೆದ ಪುಸ್ತಕ. ಆದರೆ ಇದನ್ನು ಬಹಳಷ್ಟು ಜನ ದೊಡ್ಡವರು ಸಹ ಸಂತೋಷದಿಂದ ಓದುತ್ತಾರೆ. ಹಾಗೂ ಇದರ ಪ್ರಯೋಜನವನ್ನೂ ಪಡೆಯುತ್ತಾರೆ ಎಂಬುದು ನನಗೆ ಖಂಡಿತ ಗೊತ್ತು. ಈಗಾಗಲೇ ಗಾಂಧೀಜಿಯವರು ಒಂದು ದಂತಕಥೆಯಾಗಿದ್ದಾರೆ. ಅವರನ್ನು ನೋಡಿಲ್ಲದವರು, ಅದರಲ್ಲೂ ಇಂದಿನ ಮಕ್ಕಳು, ಅವರು ಅತ್ಯಂತ ಅಸಾಧಾರಣ ವ್ಯಕ್ತಿ, ಆದ್ಭುತ ಕೆಲಸಗಳನ್ನು ಮಾಡಿದ ಅಸಾಮಾನ್ಯ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಬೇಕು. ಆದ್ದರಿಂದ, ಗಾಂಧೀಜಿಯವರ ಜೀವನದ ಸಾಮಾನ್ಯ ಅಂಶಗಳನ್ನು, ಮಕ್ಕಳ ಮುಂದಿಡುವುದು ಅಪೇಕ್ಷಣೀಯವಾಗಿದೆ. ಈ ಪುಸ್ತಕ ಆ ಕೆಲಸವನ್ನು ಮಾಡುತ್ತಿದೆ. ಗಾಂಧೀಜಿಯವರು ಬಹಳಷ್ಟು ವಿಷಯಗಳಲ್ಲಿ ಅದು ಹೆಗೆ ಆಸಕ್ತಿ ತೋರುತ್ತಿದ್ದರು ಮತ್ತು ಆಸಕ್ತಿ ವಹಿಸಿದಾಗ, ಅಷ್ಟೇ ಚೆನ್ನಾಗಿ ನಿರ್ವಹಿಸುತ್ತಿದ್ದರು ಎಂಬುದೊಂದು ಅಸಾಮಾನ್ಯ ಸಂಗತಿ. ಜೀವನದಲ್ಲಿ ಸಣ್ಣಪುಟ್ಟ ಎಂದೆನ್ನಿಸುವ ಅಂಶಗಳನ್ನು ನಿರ್ವಹಿಸುವಾಗಲೂ ಸಹ ಅವರು ನೀಡುತ್ತಿದ್ದ ಸಂಪೂರ್ಣ ಗಮನವೇ ಪ್ರಾಯಶಃ ಅವರ ಮಾನವೀಯತೆಯನ್ನು ಎತ್ತಿಹಿಡಿದದ್ದು ಎಂದು ತೋರುತ್ತದೆ. ಅವರ ವ್ಯಕ್ತಿತ್ವಕ್ಕೆ ಅದೇ ಆಧಾರವಾಗಿತ್ತು. ಗಾಂಧೀಜಿ ರಾಜಕೀಯ ಮತ್ತು ಸಾರ್ವಜನಿಕ ರಂಗಗಳಿಗಿಂತ ಬಹಳ ಭಿನ್ನವಾಗಿ ವಿವಿಧ ಮಾರ್ಗಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ಈ ಪುಸ್ತಕ ನಮಗೆ ಹೇಳುತ್ತದೆ ಎಂಬುದಂತೂ ನನಗೆ ಸಂತೋಷದ ವಿಷಯ. ಅವರ ಬಗ್ಗೆ ಒಂದು ಒಳನೋಟವನ್ನು ಪ್ರಾಯಶಃ ಇದು ನಮಗೆ ಕೊಡುತ್ತದೆ” ಎಂದಿರುವುದು ಈ ಕೃತಿಯ ಮಹತ್ವವನ್ನು ತಿಳಿಸುತ್ತದೆ.
©2024 Book Brahma Private Limited.