ಈ ಕ್ಷಣದ ಶಕ್ತಿ ಮನಮಗ್ನತೆ

Author : ಎಸ್. ನಟರಾಜ ಬೂದಾಳು

Pages 60

₹ 60.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

 ಧ್ಯಾನದಲ್ಲಿರುವುದು ಎಂದರೆ ಏನು? ನಾವು ನಮ್ಮೊಡನೆ ಮತ್ತು ಲೋಕದೊಡನೆ ಸಂಬಂಧ ಸಾಧಿಸಲು ನಮ್ಮ ಇಂದ್ರಿಯಗಳನ್ನು ಮತ್ತು ಭಾಷೆಯನ್ನು ಬಳಸುತ್ತೇವೆ. ಇವುಗಳನ್ನು ಮಾತ್ರ ಸಂವಹನ ಮಾಧ್ಯಮಗಳು ಎಂದು ತಿಳಿದಿದ್ದೇವೆ. ಬುದ್ಧಗುರು ಮತ್ತೊಂದು ಶಕ್ತ ಮಾಧ್ಯಮವನ್ನು ತೋರಿಸಿಕೊಟ್ಟಿದ್ದಾನೆ. ನಾವು ಲೋಕದೊಡನೆ ಮತ್ತು ನಮ್ಮೊಡನೆ ಮಾತನಾಡಲು ಧ್ಯಾನವೂ ಒಂದು ಮಾಧ್ಯಮ. ಭಾಷೆಯನ್ನು ಕಲಿತು ಬಳಸುವಂತೆ ಧ್ಯಾನವನ್ನೂ ಕಲಿತು ಬಳಸಬೇಕು. ಮನಮಗ್ನತೆ ಮತ್ತು ಧ್ಯಾನ ಒಂದು ಹಂತದವರೆಗೆ ಸಮಾನ ಪದಗಳು. ಧ್ಯಾನಕ್ಕೆ ಸಮಾಧಿ, ನಂತರದ ಜ್ಞಾನೋದಯದವರೆಗೆ ಅನೇಕ ವಿಸ್ತರಣೆಗಳಿವೆ. ಮನಮಗ್ನತೆ ಆ ದಾರಿಯ ಆರಂಭಿಕ ಹಂತ.

ಈ ಪುಟ್ಟ ಪುಸ್ತಕದಲ್ಲಿ ಮನಮಗ್ನತೆಯ ವಿವಿಧ ಆಯಾಮಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಮನಮಗ್ನತೆಯ ಸಾಧನೆಯು ಹೊರಗಿನಿಂದ ಹೊಸ ಜ್ಞಾನವನ್ನು ಪಡೆದುಕೊಳ್ಳುವ ಸಾಧನೆಯಲ್ಲ; ಬದಲಿಗೆ ನಮ್ಮಲ್ಲಿಯೇ ಇರುವ ಬುದ್ಧಸತ್ವವನ್ನು ಕಂಡುಕೊಳ್ಳುವ ಸಾಧನೆ. ನಮ್ಮನ್ನು ಕವಿದುಕೊಂಡಿರುವ ಸುಳ್ಳು ಆವರಣಗಳನ್ನು ಬಯಲುಗೊಳಿಸುವ ಮೂಲಕ ಪ್ರಜ್ಞೆಯನ್ನು ಮುಕ್ತಗೊಳಿಸುವ ಕ್ರಮ. ಅಜ್ಞಾನವನ್ನು ತೊಡೆದುಹಾಕಿದರೆ ಅದೇ ಜ್ಞಾನ. ಮನಮಗ್ನತೆಯಿಂದ ಏನು ಸಾಧ್ಯವಾಗುತ್ತದೆ ಎನ್ನುವುದು ಆ ದಾರಿಯಲ್ಲಿ ಎಷ್ಟು ದೂರ ಹೋಗುತ್ತೇವೆ ಎನ್ನುವುದನ್ನು ಅವಲಂಬಿಸಿದೆ.

ಮನಮಗ್ನತೆಯ ಸಾಧನೆಯಿಂದ ಲೋಕದ ನೇರ ಅನುಸಂಧಾನ ಸಾಧ್ಯವಾಗುತ್ತದೆ. ಅದು ಅದರ ಮೊದಲ ಪರಿಣಾಮ. ಈಗಾಗಲೇ ಗುಡ್ಡೆ ಹಾಕಿಕೊಂಡಿರುವ ಗೊಂದಲಗಳ ನಿವಾರಣೆಗೆ ಮೊದಲಾಗುತ್ತೆ. ಹಾಗಾದರೆ ಗೊಂದಲಗಳು ಉಂಟಾಗುವುದು ಯಾರಿಂದ? ಮನಸ್ಸಿನಿಂದ! ಎಲ್ಲ ಗೊಂದಲಗಳ ಮೂಲ ನಮ್ಮ ಮನಸ್ಸು. ಗೊಂದಲಗಳನ್ನು ಉಂಟು ಮಾಡಲಿಕ್ಕಾಗಿಯೆ ಮನಸ್ಸು ಇದೆಯೆ? ಇಲ್ಲ. ಆದರೆ ಮನಸ್ಸಿಗೊಂದು ರೀತಿಯ ಜಿಪುಣತನವಿದೆ. ಅದು ಒಳಕ್ಕೆ ಬಂದ ಎಲ್ಲ ಅನುಭವಗಳನ್ನು ಕಾಲ ಕಾಲಕ್ಕೆ ವಿಸರ್ಜಿಸದೆ ಗುಡ್ಡೆಹಾಕಿಕೊಳ್ಳುತ್ತದೆ. ರಾಶಿ ರಾಶಿ ಅನುಭವಗಳು ಅದರ ಮೇಲೆ ಕವುಚಿಕೊಳ್ಳುತ್ತವೆ. ಮುಂದಿನ ಅನುಭವಗಳನ್ನು ನಿರ್ವಹಿಸುವಾಗ ಹಳೆಯ ಅನುಭವಗಳ ರಾಶಿಯೇ ನಿರ್ಣಯ ತೆಗೆದುಕೊಳ್ಳುವಂತಾಗುವುದರಿಂದ ಸಹಜವಾಗಿ ಗೊಂದಲವುಂಟಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಗುಡ್ಡೆ ಹಾಕಿಕೊಂಡಿರುವ ರಾಶಿಯನ್ನು ಗುಡಿಸಿ ಹಾಕಿ ಮನಸ್ಸನ್ನು ತೆರವು ಮಾಡಿಕೊಳ್ಳಬೇಕು. ಮನಮಗ್ನತೆಯ ಸಾಧನೆಯೇ ಇದಕ್ಕಿರುವ ಉಪಾಯ.

ನಾವು ಹೊರಜಗತ್ತಿನ ಜೊತೆ ಹೆಚ್ಚು ಮಾತನಾಡುತ್ತೇವೆ. ನಮ್ಮೊಡನೆ ಮಾತನಾಡಿದ್ದು ಕಡಿಮೆ. ಇಂದ್ರಿಯಗಳ ಮೂಲಕ ಒಳಕ್ಕೆ ಬರುವ ಅನುಭವಗಳು ಮತ್ತು ಅವುಗಳಿಂದ ಸುತ್ತುವರಿದಿರುವ ಮನಸ್ಸನ್ನು ಮಾತ್ರ ಬಳಸಿ ವ್ಯವಹರಿಸಿ ನಮಗೆ ಅಭ್ಯಾಸವಾಗಿದೆ. ಪ್ರತಿಯೊಬ್ಬರಲ್ಲಿಯೂ ಮನಸ್ಸಿನಾಚೆಗೆ ಪ್ರಜ್ಞೆಯೆಂಬ ಮತ್ತೊಂದು ಹಂತವಿದೆ. ಅದು ಹಿಂದುಮುಂದುಗಳನ್ನೊಳಗೊಂಡ ಪ್ರವಾಹರೂಪಿಯಾದುದಾದರೂ ಆ ಕ್ಷಣದ ಸರಿತಪ್ಪುಗಳಿಗೆ ತಾಕ್ಷಣಿಕವಾಗಿ ಪ್ರತಿಕ್ರಿಯಿಸುತ್ತದೆ. ಅದು ನಮ್ಮ ನಡೆಗಳನ್ನು ವರ್ತಮಾನದ ನೆಲೆಯಿಂದ ತೂಗಿ ನೋಡುತ್ತದೆ. ನಮ್ಮೊಳಗಿನ ಪ್ರಜ್ಞೆಯನ್ನು ಸಂಪರ್ಕಿಸದೆ ನಮ್ಮ ಮಾತುಕತೆ ನಡೆಯುತ್ತಿರುತ್ತದೆ. ಅದರ ಮಾತನ್ನು ನಾವು ಕೇಳಿಸಿಕೊಳ್ಳಲಿ ಬಿಡಲಿ ಅದಂತೂ ತಾನು ಹೇಳಬೇಕಾದುದನ್ನು ಹೇಳುತ್ತೆ. ಆದರೆ ನಾವು ಅದರ ದನಿಯನ್ನು ಅಡಗಿಸಿಬಿಟ್ಟಿದ್ದೇವೆ ಅಥವಾ ತುಂಬಾ ಕ್ಷೀಣಗೊಳಿಸಿದ್ದೇವೆ. ಮನಸ್ಸು ಮತ್ತು ಮನಸ್ಸಿನಲ್ಲಿ ತುಂಬಿಕೊಂಡಿರುವ ರಾಶಿ ರಾಶಿ ಸಂಗ್ರಹ ನಮ್ಮ ಪ್ರಜ್ಞೆಯನ್ನು ಕವಿದುಕೊಂಡಿದೆ. ಇವುಗಳಿಂದ ಅದನ್ನು ಮುಕ್ತಗೊಳಿಸಿ ಹೊರಗೆ ತರಲು ಧ್ಯಾನ ಬೇಕಾಗಿದೆ. ಅದು ನಮ್ಮನ್ನು ಎಚ್ಚರದಲ್ಲಿರಿಸುತ್ತದೆ. ಎಚ್ಚತ್ತಿರುವವನೇ ಬುದ್ಧ. ಇವುಗಳ ಜೊತೆಗೆ ನಮ್ಮನ್ನು ನಿರಂತರ ವಿಸ್ಮೃತಿಗೆ ದೂಡುತ್ತಿರುವ ಹೊರಗಿನ ಮಿಥ್ಯಾದೃಷ್ಟಿಗಳು ನಮ್ಮನ್ನು ಎಚ್ಚರಗೊಳ್ಳದ ಹಾಗೆ ನೋಡಿಕೊಳ್ಳುತ್ತಿವೆ. ಇವುಗಳನ್ನು ನಿರ್ವಹಿಸಲು ಸಾಧ್ಯವಿರುವುದು ಪ್ರಜ್ಞೆಗೆ ಮಾತ್ರ. ಲೋಕದ ತುಂಬ ಕತ್ತಲಿದ್ದರೇನಂತೆ ಅಂಗೈಯ ಮೇಲೊಂದು ಬೆಳಗುವ ಜ್ಯೋತಿ ಇದ್ದರೆ ಸಾಕು, ಲೋಕದ ತುಂಬ ಕಲ್ಲುಮುಳ್ಳುಗಳಿದ್ದರೇನಂತೆ, ಕಾಲುಗಳಿಗೆ ಒಂದು ಜೊತೆ ಜೋಡುಗಳಿದ್ದರೆ ಸಾಕು. ಪ್ರಜ್ಞೆಯೆಂಬುದೇ ಇದನ್ನೇ ಮನಮಗ್ನತೆಯಿಂದ ಕೇಳಿಸಿಕೊಳ್ಳಬೇಕು. ಅದೊಂದು ಕೌಶಲ. ಅದಕ್ಕೆ ಅಗತ್ಯವಾಗಿರುವ ಮನಮಗ್ನತೆಯ ಪರಿಚಯ ನೀಡುವುದು ಈ ಪುಟ್ಟ ಹೊತ್ತಗೆಯ ಉದ್ದೇಶ. 

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Excerpt / E-Books

ನಾವೆಲ್ಲರೂ ಬಹುಪಾಲು ಮನಸ್ಸು ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೋ ಅಲ್ಲಿಗೆ ಹೋಗುವುದನ್ನು ರೂಢಿ ಯನ್ನಾಗಿ ಮಾಡಿಕೊಂಡಿದ್ದೇವೆ. ಭೂತ, ಭವಿಷ್ಯತ್ ಲೋಕಕ್ಕೆ ಕರೆದುಕೊಂಡು ಹೋಗಿ ನಮ್ಮನ್ನು ಚಿಂತಾಕ್ರಾಂತ ರನ್ನಾಗಿ ಮಾಡುವ, ಮತ್ತು ಭಾವನೆಗಳಿಗೆ ಬಲಿಯಾಗುವಂತೆ ಮಾಡುವ ಈ ಮನಸ್ಸಿನ ಶಕ್ತಿಯು ಬಹುಪಾಲು ನಮ್ಮನ್ನು ಎಡವಟ್ಟು ದಾರಿಗೆ ಕರೆದುಕೊಂಡು ಹೋಗುತ್ತದೆ. ಇದು ನಮಗೆ ಗೊತ್ತಾಗುವುದು ನಮ್ಮ ಸಕಲ ಆರೋಗ್ಯಗಳು ಕೆಟ್ಟು ಹೋದಾಗಲೇ. ಬಹುಪಾಲು ಜನ ಮನಸ್ಸಿನ ಈ ಆಟಕ್ಕೆ ಬಲಿಯಾಗುತ್ತಾರೆ. ಹೀಗಾಗದಂತೆ ಕೊಂಚ ಎಚ್ಚರ ವಹಿಸುವುದು ನಮ್ಮ ಬದುಕಿನಲ್ಲಿ ಅತ್ಯಂತ ಮುಖ್ಯವಾದ ಕೆಲಸ ಅಲ್ಲವೇ. ಇದು ಆಗಬೇಕಾದರೆ ಮನಸ್ಸಿನ ಜೊತೆಗೆ ಆಟವಾಡುವುದನ್ನು ಕಲಿಯಬೇಕು. ಮನಸ್ಸು ನಮ್ಮನ್ನು ಆಟವಾಡಿಸುವ ಬದಲು ನಾವು ಮನಸ್ಸನ್ನುಆಟವಾಡಿಸುವುದನ್ನುಕಲಿಯಬೇಕು. ನಟರಾಜ್ ಅವರ ಈ ಚಿಕ್ಕ ಪುಸ್ತಕ "ಮನಮಗ್ನತೆ' ಆಟವಾಡುವ ವಿವಿಧ ಬಗೆಯನ್ನು ನಮ್ಮ ಮುಂದೆ ಇಡುತ್ತದೆ. ಮನಮಗ್ನತೆ ಎಂದರೆ ಒಂದು ಎಚ್ಚರದ ಸ್ಥಿತಿ. ಸೂಕ್ಷ್ಮವಾಗಿ ನೋಡುವ ಒಂದು ಪ್ರಕ್ರಿಯೆ. ಮನಸ್ಸನ್ನು ದೂರ ಇಟ್ಟು ಅದರ ಚಲನವನ್ನು ನೋಡುವುದು, ಮನಸ್ಸನ್ನು ದೂರ ಇಟ್ಟು ವರ್ತಮಾನದ ಪ್ರಕ್ರಿಯೆಯಲ್ಲಿ ತೊಡಗುವುದು. ಮನಸ್ಸು ಕಟ್ಟಿಕೊಂಡ ಲೋಕವನ್ನು ಒಂದು ಎಚ್ಚರದ ಗ್ರಹಿಕೆಯಲ್ಲಿ ಸಂತೈಸುವುದು, ಇವೆಲ್ಲವೂ ಆಟದ ವಿವಿಧ ರೀತಿಗಳು. ಇವೆಲ್ಲವನ್ನೂ ಅಳವಡಿಸಿಕೊಂಡರೆ ಉಂಟಾಗುವ ಜೀವನದ ಪರಿವರ್ತನೆಯನ್ನು ಅನುಭವಿಸಿಯೇ ತಿಳಿಯಬೇಕು. ಲೇಖಕರೇ ಹೇಳುವಂತೆ ಇದು ಓದಿ ಇಡುವ ಪುಸ್ತಕವಲ್ಲ. ಬುದ್ಧ ಗುರು ಗಾಳಿಯಂತೆ ಇಲ್ಲಿ ಸುಳಿದಿರುವುದು ಆಕಸ್ಮಿಕವಲ್ಲ. ಇದು ಬಾಳಿನ ಬುತ್ತಿಗೆ ಅಗತ್ಯವಾದ ಅನ್ನ

-ಡಾ. ಬಸವರಾಜ ಕಲ್ಗುಡಿ 

Related Books