ಲೇಖಕ ಟಿ.ಎನ್.ವಾಸುದೇವಮೂರ್ತಿ ಅವರ ‘ಕಾಳಿದಾಸನ ಮೇಘದೂತ’ ಕೃತಿಯು ಒಂದು ತೌಲನಿಕ ವಿಶ್ಲೇಷಣೆಯಾಗಿದೆ. ಕಾಳಿದಾಸನ ಮೇಘದೂತ ಶಾಪಗ್ರಸ್ತನಾದ ಒಬ್ಬ ಯಕ್ಷ ತನ್ನ ಮಡದಿಯಿಂದ ದೂರವಾಗಿ ಅವಳ ನೆನಪನ್ನು ನಿವೇದಿಸಿಕೊಳ್ಳುವ ಮತ್ತು ಮೇಘದ ಮೂಲಕ ಅವಳಿಗೆ ಸಂದೇಶವನ್ನು ಕಳುಹಿಸುವ ಒಂದು ಶೃಂಗಾರ ಕಾವ್ಯವಾಗಿದೆ. ಈ ಪ್ರಸಂಗವನ್ನು ತಮ್ಮ ಕನ್ನಡ ಮೇಘದೂತದಲ್ಲಿ ಒಂದು ರೂಪಕವನ್ನಾಗಿ ಬಳಸಿಕೊಳ್ಳುವ ಬೇಂದ್ರೆ ಇದಕ್ಕೊಂದು ಅಧ್ಯಾತ್ಮಿಕ ಆಯಾಮವನ್ನು ನೀಡಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಂಗದ ಆನಂದದಿಂದ, ತನ್ನ ನಿಜಸ್ವರೂಪದಿಂದ ದೂರವಾಗಿ ದುಃಖಿಯಾಗಿದ್ದಾನೆ. ಯಕ್ಷ ತನ್ನ ಇನಿಯಳನ್ನು ಕೂಡಲು ಬಯಸುವಂತೆ ಪ್ರತಿಯೊಬ್ಬ ಮನುಷ್ಯನೂ ತನ್ನ ಅಂತರಾತ್ಮನಲ್ಲಿ, ತನ್ನ ನಿಜಸ್ವರೂಪದಲ್ಲಿ ಒಂದಾಗಲು ಹಾತೊರೆಯುತ್ತಿದ್ದಾನೆ. ಮನುಷ್ಯನಷ್ಟೇ ಅಲ್ಲ, ಸೃಷ್ಟಿಯಲ್ಲಿ ಸಕಲ ಚರಾಚರ ವಸ್ತುಗಳೂ, ಸಕಲ ಜೀವರಾಶಿಗಳೂ ಪರಮಾತ್ಮನಲ್ಲಿ ಒಂದಾಗಲು ಹಾತೊರೆಯುತ್ತಿವೆ ಎಂಬ ಧ್ವನಿ ಬೇಂದ್ರೆಯವರ ಕನ್ನಡ ಮೇಘದೂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮೇಘದೂತ ಕೇವಲ ಒಂದು ಅನುವಾದವಲ್ಲ, ಕಾಳಿದಾಸನ ಅನುಸೃಷ್ಟಿಯೂ ಅಲ್ಲ. ಇದು ಕನ್ನಡದ ನುಡಿಯಲ್ಲಿ ಕಾಳಿದಾಸನಿಗೆ ಮರುಜನ್ಮವನ್ನು ದಯಪಾಲಿಸುವ, ಹೊಸ ಧ್ವನಿಯನ್ನು ನೀಡುವ ಪ್ರಯತ್ನವಾಗಿದೆ.
©2024 Book Brahma Private Limited.