‘ದಾಸ್ತವುಸ್ಕಿ ಜೊತೆಗಿನ ಜೀವನ’ ಜಗತ್ ಪ್ರಸಿದ್ಧ ಚಿಂತಕ, ಸಾಹಿತಿ ದಾಸ್ತೊವಸ್ಕಿ ಅವರ ಪತ್ನಿ ಅನ್ನಾ ಗ್ರಿಗರಿಯೆವ್ನಾ ಅವರು ತಮ್ಮ ಪತಿಯ ಬದುಕಿನ ಕುರಿತು ಬರೆದ ಕೃತಿ. ದಾಸ್ತವುಸ್ಕಿ ಸ್ಮರಣಿಕೆಯ ಈ ಕೃತಿಯನ್ನು ಹಿರಿಯ ಲೇಖಕ ಟಿ.ಎಸ್. ರಘುನಾಥ್ ಕನ್ನಡೀಕರಿಸಿದ್ದಾರೆ. ಜಾಗತಿಕ ಸಾಹಿತ್ಯ ಲೋಕದ ಸಾರ್ವಕಾಲಿಕ ಸಾಹಿತ್ಯ ದೈತ್ಯರಲ್ಲೊಬ್ಬರಾದ ಫ್ಯೂಡಾರ್ ಮೈಕೆಲೋವಿಚ್ ದಾಸ್ತೊವುಸ್ಕಿ(1821-1881) ಬದುಕಿದ್ದು ಅರವತ್ತು ವರ್ಷಗಳ ಕಾಲ. ತನ್ನ ವೈಯಕ್ತಿಕ ಬದುಕು ಹಾಗೂ ರಷ್ಯಾದ ಸುತ್ತಮುತ್ತಲಿನ ಬದುಕಿನ ಬಗ್ಗೆ ಸಂತನೊಬ್ಬನಂತೆ ಚಿಂತಿಸಿದವನು ಬಾಲ್ಯದಿಂದಲೂ ಕಷ್ಟಕಾರ್ಪಣ್ಯ ನೋವು-ಯಾತನೆಗಳಲ್ಲೇ ಬದುಕು ಸಾಗಿಸಿದವನು. ಟರ್ಗೆನೀವ್, ಟಾಲ್ ಸ್ಟಾಯ್, ಚಕೊವ್, ಗಾರ್ಕಿ ಇವರೆಲ್ಲಾ ರಷ್ಯಾದ ಸಮಕಾಲೀನ ಸಾಹಿತಿಗಳು. ಸಾಹಿತ್ಯ ಲೋಕದಲ್ಲಿ ಇವರೆಲ್ಲರೂ ಒಂದೊಂದು ರೀತಿ ವಿಶಿಷ್ಟರು. ಆದರೆ ವೈಯಕ್ತಿಕ ಬದುಕುಗಳಿಗೆ ಸಂಬಂಧಿಸಿ ಹೇಳುವುದಾದರೆ ಟರ್ಗೆನಿವ್, ಟಾಲ್ ಸ್ಟಾಯ್ ಶ್ರೀಮಂತ ವಾತಾವರಣದಲ್ಲಿ ಬದುಕುತ್ತಾ, ವ್ಯಕ್ತಿ ಬದುಕಿವ ಎಲ್ಲ ಸುಖ-ಸಂತೋಷಗಳನ್ನು ಪಡೆಯುತ್ತಲೇ ಸಾಹಿತ್ಯ ರಚನೆಗೆ ತೊಡಗಿಸಿಕೊಂಡವರು. ಚೆಕೊವ್ ಹಾಗೂ ಗಾರ್ಕಿ ಬಡತನದ ರುಚಿಯನ್ನು ಕಂಡವರು. ಆದರೆ ದಾಸ್ತೊವುಸ್ಕಿ ಅಪಾರವಾದ ಸಾಲದ ಹೊರೆಗಳಿಗೆ ಸಿಕ್ಕಿ ನರಳಿದವನು ಅವನು ಮಧ್ಯವಯಸ್ಸಿನವರೆಗೆ ಅನ್ನಾ ಗ್ರಿಗರಿಯೆವ್ನಾ ಪತ್ನಿಯಾಗಿ ಬರುವವರೆಗೆ ಆತನ ಬದುಕು ಅಪಾರ ಯಾತನಮಯ, ತಳಮಳದಿಂದ ಕೂಡಿದ್ದು, ಯಾವುದರ ಬಗ್ಗೆ ನಂಬಿಕೆಯೇ ಇಲ್ಲದಂತಹ ಸ್ಥಿತಿಯಲ್ಲಿದ್ದವನು. ಅಂತಹ ದಾರುಣ ಸ್ಥಿತಿಯಲ್ಲಿ ಅವನ ಬದುಕನ್ನು ಪುನರುಜ್ಜೀವನಗೊಳಿಸಿದವಳು ಅನ್ನಾ ಗ್ರಿಗರಿಯೆವ್ನಾ. ಅದರ ಪ್ರಾರಂಭ ಅವಸ್ಥೆಯನ್ನು ಈ ಸ್ಮರಣ ಸಂಚಿಕೆಯಲ್ಲಿ ಕಾಣಬಹುದು.
©2024 Book Brahma Private Limited.