'ವಿದ್ಯುತ್ ಬಿಲ್' (ಸಮಸ್ಯೆ ಮತ್ತು ಪರಿಹಾರ) ವೈ.ಜಿ. ಮುರಳೀಧರನ್ ಅವರ ಕೃತಿಯಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ವಹಿಸಿಕೊಂಡು ನಾಗರಿಕರಿಗೆ ಉಚಿತ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಇದರಲ್ಲಿ ವಿದ್ಯುತ್ ಬಳಕೆದಾರರಿಗೆ `ಗೃಹಜ್ಯೋತಿ' ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳು 200ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆ ಜಾರಿಗೆ ಬಂದಾಗಿನಿಂದ ಸಾರ್ವಜನಿಕರಲ್ಲಿ ವಿದ್ಯುತ್ ಸೇವೆಯ ಬಗ್ಗೆ ಸಾಕಷ್ಟು ಆಸಕ್ತಿ ಜೊತೆಗೆ ಗೊಂದಲವೂ ಉಂಟಾಗಿದೆ. ಇದುವರೆಗೆ ಕೇವಲ ವಿದ್ಯುತ್ ಮೊತ್ತ, ಪಾವತಿಸಲು ಇರುವ ಕೊನೆಯ ದಿನಾಂಕದ ಬಗ್ಗೆ ಮಾತ್ರ ಆಸಕ್ತಿ ತೋರುತ್ತಿದ್ದ ಬಳಕೆದಾರರು ಈಗ ದಿಢೀರನೆ ನಿಗದಿತ ಠೇವಣಿ, ಹಿಂಬಾಕಿ, ಇಂಧನ ಹೊಂದಾಣಿಕೆ ಶುಲ್ಕ... ಇತ್ಯಾದಿ ಬಗ್ಗೆ ಆಸಕ್ತರಾಗಿರುವುದು ಸಂತೋಷದ ಸಂಗತಿ. ವಿದ್ಯುತ್ ವಲಯದಲ್ಲಿ ಬಳಕೆದಾರರು ಭಾಗವಹಿಸುವುದಕ್ಕೆ ಈ ಅರಿವು ಮೊದಲನೆಯ ಹೆಜ್ಜೆ. ವಿದ್ಯುತ್ ಸೇವೆಯಲ್ಲಿ ಉಂಟಾಗುವ ಕುಂದುಕೊರತೆಗಳನ್ನು ನಿವಾರಿಸಲು ವೇದಿಕೆಗಳನ್ನು ಸ್ಥಾಪಿಸಲಾಗಿದೆ. ಗ್ರಾಹಕರಿಗೆ ಸರಬರಾಜು ಮಾಡುವ ವಿದ್ಯುತ್ ಗುಣಮಟ್ಟಕ್ಕೆ ಮಾನದಂಡ ನಿಗದಿಪಡಿಸಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಪರಿಷ್ಕರಿಸುವ ಮುನ್ನ ಗ್ರಾಹಕರ ಅಭಿಪ್ರಾಯ ಕೇಳುವುದು ಕಡ್ಡಾಯವಾಗಿದೆ. ಆದರೆ, ಈ ಎಲ್ಲ ಸುಧಾರಣೆಗಳ ಫಲ ಗ್ರಾಹಕರನ್ನು ಮುಟ್ಟಬೇಕಾದಲ್ಲಿ ಅವರೂ ಸಹ ವಿದ್ಯುತ್ ವಲಯದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕಿದೆ. ಗ್ರಾಹಕರು ವಿದ್ಯುತ್ ವಲಯದ ಚಟುವಟಿಕೆಗಳಲ್ಲಿ ಭಾಗವಹಿಸ ಬೇಕಾದರೆ ಮಾಹಿತಿ ಅವಶ್ಯಕ. ಗ್ರಾಹಕರಲ್ಲಿ ವಿದ್ಯುತ್ ಸುಧಾರಣೆ ಮತ್ತು ವಿದ್ಯುತ್ ಬಳಕೆದಾರರ ಸಮಸ್ಯೆ-ಪರಿಹಾರದ ಬಗ್ಗೆ ಅರಿವು ಉಂಟುಮಾಡುವ ದೃಷ್ಟಿಯಿಂದ ಈ ಕಿರು ಪುಸ್ತಕವನ್ನು ಪ್ರಕಟಿಸಲಾಗಿದೆ.
©2024 Book Brahma Private Limited.