‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ’ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಕಟವಾಗಿರುವ ಕೈಪಿಡಿ. ಈ ಕೃತಿಯ ಪ್ರಧಾನ ಸಂಪಾದಕರು ಟಿ.ಎಸ್. ನಾಗಾಭರಣ, ಸಂಪಾದಕರು ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷ. ಕನ್ನಡ ಭಾಷೆಯನ್ನು ಬಲಪಡಿಸಬೇಕಾದ ಇನ್ನೊಂದು ಕ್ಷೇತ್ರವೆಂದರೆ ವಿಜ್ಞಾನ ಸಾಹಿತ್ಯ. ಇದರಲ್ಲಿ ಬೇಕಾದಷ್ಟು ಕೆಲಸ ಆಗಿದೆ. ಆದರೆ ಹೆಚ್ಚಿನವು ಈ ವರೆಗೆ ಆಗಿರುವ ವಿಜ್ಞಾನ ಸಾಹಿತ್ಯದ ಐತಿಹಾಸಿಕ ಸಮೀಕ್ಷೆಗಳು, ವಿಮರ್ಶೆಗಳು ದಾಖಲೆಗಳ ಸಂಗ್ರಹ ಆಗಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಕೆಲವು ಖಾಸಗಿ ಪ್ರಕಾಶಕರು ಎಲ್ಲಾ ವರ್ಗದ ಓದುಗರಿಗಾಗಿ ನೂರಾರು ಸಂಖ್ಯೆಯಲ್ಲಿ ವಿಜ್ಞಾನ ಪುಸ್ತಕಗಳನ್ನು ತಂದಿದ್ದಾರೆ. ಕ.ರಾ.ವಿ.ಪ ವಿಜ್ಞಾನ ಲೇಖಕರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಜ್ಞಾನ ಬರವಣಿಗೆಯನ್ನು ಒಂದು ಕೌಶಲವಾಗಿ ಪರಿಗಣಿಸಿ ಅದರಲ್ಲಿ ಮಾರ್ಗದರ್ಶನವನ್ನು ನೀಡುವಂಥ ಹೆಚ್ಚು ಕೆಲಸಗಳು ಆಗಬೇಕಾಗಿದೆ. ಇಂಥ ಒಂದು ನೇರ ಉದ್ದೇಶದ ಕೃತಿಗಳ ಕೊರತೆ ಕನ್ನಡದಲ್ಲಿದ್ದು ಆ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಈ ಕೃತಿ ಪ್ರಕಟವಾಗಿದೆ. ವಿಜ್ಞಾನ ಸಾಹಿತ್ಯ ಕುರಿತಾದ ಮಾರ್ಗದರ್ಶನವನ್ನು ತನ್ನೊಡಲಲ್ಲಿ ಹೊತ್ತಿದೆ. ವಿಜ್ಞಾನ ಸಾಹಿತ್ಯ ನಿರ್ಮಾಣದ ಕ್ಷೇತ್ರದಲ್ಲಿ ಪದಾರ್ಪಣ ಮಾಡುವವರಿಗಂತೂ ಉತ್ತಮ ಮಾರ್ಗದರ್ಶಿ ಕೈಪಿಡಿಯಾಗಿದೆ. ಈಗಾಗಲೇ ವಿಜ್ಞಾನ ಸಾಹಿತ್ಯ ಕೃಷಿ ಮಾಡುತ್ತಿರುವವರಿಗೂ ಮತ್ತು ಹೆಚ್ಚು ಅನುಭವ ಇರುವ ಲೇಖಕರ ಪರಿಣತಿಯ ನೆರವು ಸಿಗುತ್ತದೆ.
©2024 Book Brahma Private Limited.