‘ಆಡಳಿತದಲ್ಲಿ ನೈತಿಕತೆ’ ಎಲ್ಲ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಪಠ್ಯ ಕೃತಿಯನ್ನು ವೈ.ಜಿ. ಮುರಳೀಧರ ಅವರು ರಚಿಸಿದ್ದಾರೆ. ಕೃತಿಯ ಬಗ್ಗೆ ವಿವರಿಸುತ್ತಾ ‘ಒಂದು ದೇಶದ ಸಾರ್ವಜನಿಕ ಆಳ್ವಿಕೆಯ ಗುಣಮಟ್ಟ ಮತ್ತು ದಕ್ಷತೆ ಅಲ್ಲಿನ ಜನಪ್ರತಿನಿಧಿಗಳು, ಮತ್ತು ಸಾರ್ವಜನಿಕ ಸೇವಕರಲ್ಲಿರುವ (ಪಬ್ಲಿಕ್ ಸರ್ವೆಂಟ್ಸ್) ನೈತಿಕ ಮೌಲ್ಯವನ್ನು ಅವಲಂಬಿಸಿರುತ್ತದೆ. ಕಾನೂನು, ನೀತಿ, ನಿಯಮ ಇತ್ಯಾದಿ ಎಷ್ಟೇ ಪ್ರಬಲವಾಗಿದ್ದರೂ, ಅದನ್ನು ಅನುಷ್ಠಾನಗೊಳಿಸುವವರು ನೈತಿಕವಾಗಿ ವರ್ತಿಸದಿದ್ದಲ್ಲಿ ಆಡಳಿತ ಉತ್ತಮವಾಗಿರುವುದಿಲ್ಲ. ಆಡಳಿತದಲ್ಲಿ 'ನೈತಿಕತೆ' ಇಲ್ಲದಿದ್ದರೆ ಅರಾಜಕತೆ ಕಾಣಿಸಿಕೊಳ್ಳುತ್ತದೆ. ಆಡಳಿತ ಬೀಳುತ್ತದೆ. ನಾಗರಿಕರು ಆಡಳಿತದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಲೋಪದೋಷ ಕಂಡುಬರುತ್ತದೆ. ಇದರ ಪರಿಣಾಮ ಸರ್ಕಾರದ ಯೋಜನೆಗಳು ಉದ್ದೇಶಿತ ಸಮುದಾಯವನ್ನು ತಲುಪುವುದಿಲ್ಲ. ಸಾರ್ವಜನಿಕ ಹಣ ಮತ್ತು ಸಂಪನ್ಮೂಲ ಕೆಲವೇ ಜನರ ಪಾಲಾಗುತ್ತದೆ. ಈ ದುಷ್ಪರಿಣಾಮವನ್ನು ತಡೆಗಟ್ಟಬೇಕಾದರೆ, ಸಾರ್ವಜನಿಕ ಸೇವೆಗೆ ಸೇರಲಿಚ್ಚಿಸುವವರಲ್ಲಿ 'ನೈತಿಕ ಮೌಲ್ಯ'ಗಳನ್ನು ಬಿತ್ತಿ ಅದನ್ನು ಬಲಿಷ್ಠಗೊಳಿಸುವುದು ಅಗತ್ಯ’ ಎಂದಿದ್ದಾರೆ ಮುರಳೀಧರನ್.
ಹಾಗೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸಬೇಕಾದರೆ ಅಭ್ಯರ್ಥಿಗಳು ತಮ್ಮ ಅಧ್ಯಯನವನ್ನು ಕೇವಲ ಮೂಲ ಪಠ್ಯಕ್ಕೆ ಸೀಮಿತಗೊಳಿಸಬಾರದು. ಅಭ್ಯರ್ಥಿಗಳ ಜ್ಞಾನ ವ್ಯಾಪ್ತಿ ವಿಶಾಲವಾಗಿರಬೇಕಲ್ಲದೆ ವಿಷಯವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ವಿಶ್ಲೇಷಿಸುವುದನ್ನು ಕಲಿಯಬೇಕು. ವಿಷಯಕ್ಕೆ ಸಂಬಂಧಪಟ್ಟ ಪಠ್ಯದ ಜೊತೆಗೆ ವಿಷಯವನ್ನು ವಿವಿಧ ಆಯಾಮಗಳಲ್ಲಿ ಚರ್ಚಿಸಿರುವ ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಅಭ್ಯಾಸ ಮಾಡಬೇಕೆಂಬ ಕಾರಣಕ್ಕೆ ಪೂರಕ ಪಠ್ಯಗಳ ಪಟ್ಟಿ ಹಾಗು ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಮೌಲ್ಯಾಧಾರಿತ ಸಮಾಜವನ್ನು ನೈತಿಕ ಅಡಿಪಾಯದ ಮೇಲೆ ಕಟ್ಟಲು ಈ ಪುಸ್ತಕ ಕೈದೀವಿಗೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ಶಿಕ್ಷಣ, ಸಮಾಜ, ಆಡಳಿತ ಮತ್ತು ರಾಜಕಾರಣದಲ್ಲಿ ಆಸಕ್ತರಾದ ಎಲ್ಲರಿಗೂ ಈ ಪುಸ್ತಕದ ಓದು ಮಾದರಿಯಾಗಬಲ್ಲದೆಂಬ ವಿಶ್ವಾಸ ನಮ್ಮದು ಎಂದಿದ್ದಾರೆ.
©2024 Book Brahma Private Limited.