‘ಬೆವರು ನನ್ನ ದೇವರು’ ಕೃತಿಯು ಬರಗೂರು ರಾಮಚಂದ್ರಪ್ಪ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಕೈಪಿಡಿಯಾಗಿದೆ. ಬರಗೂರು ರಾಮಚಂದ್ರಪ್ಪ ಕನ್ನಡ ಸಾಂಸ್ಕೃತಿಕ ಲೋಕದ ಸಾಧಕ. ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅನ್ಯ ಸೃಷ್ಟಿ ಮಾಡಿದ ಸಾಮಾಜಿಕ ರೂಪಕ. ಲೇಖಕ ಬರಗೂರು ರಾಮಚಂದ್ರಪ್ಪ ನವರು ತಮ್ಮ ಮಾತುಗಳಲ್ಲಿ ‘‘ಬೆವರು’ ಎನ್ನುವುದು ನನಗಿಲ್ಲಿ ಒಂದು ರೂಪಕ; ಸಮಾಜ ಮತ್ತು ಸಂಸ್ಕೃತಿಗಳನ್ನು ರೂಪಿಸಿದ ಪ್ರೇರಕ. ನನ್ನ ಒಟ್ಟು ಸಾಹಿತ್ಯ ಸೃಷ್ಟಿಯ ಮೂಲ ಬೇರು ಇರುವುದು ‘ಬೆವರು’ ಎಂಬ ತವರು ಮನದಲ್ಲಿಯೇ ಎಂಬ ಕಾರಣದಿಂದ ಈ ಸಂಪುಟಗಳಿಗೆ ‘ಬೆವರು ನನ್ನ ದೇವರು’ ಎಂಬ ಹೆಸರಿಟ್ಟಿದ್ದೇನೆ’ ಎನ್ನುತ್ತಾರೆ.
ದೇವರ ನಂಬಿಕೆಯಿಲ್ಲದ ದೇಶವಿಲ್ಲ. ಹೀಗೆಂದ ಕೂಡಲೇ ಕಮ್ಯುನಿಸ್ಟ್ ದೇಶಗಳಲ್ಲಿ ದೇವರ ನಂಬಿಕೆ ಇದೆಯೆ ಎಂದು ಹುಬ್ಬೇರಬಹುದು. ಕಮ್ಯುನಿಸ್ಟ್ ಸರ್ಕಾರಗಳನ್ನು ಹೊಂದಿದ ದೇಶಗಳು ನಾಸ್ತಿಕವಾದವನ್ನು ಪ್ರತಿಪಾದಿಸಿದರೂ ಜನರ ದೇವರ ನಂಬಿಕೆಯನ್ನು ಸಂಪೂರ್ಣ ನಿಷೇಧಿಸಿಲ್ಲ. ಕ್ರಾಂತಿಕಾರಿ ಲೆನಿನ್ ತಮ್ಮ ಪಕ್ಷದಲ್ಲಿ ಧಾರ್ಮಿಕ ನಂಬಿಕೆಯುಳ್ಳವರಿಗೂ ಅವಕಾಶ ನೀಡಿದ್ದರು. ಮುಂದೆ ಬ್ರೆಜ್ನೇವ್ , ಕ್ರುಶ್ಚೋವ್ ಕಾಲದಲ್ಲಿ ಜನರು ಅವರವರ ನಂಬಿಕೆಯಲ್ಲಿ ಬದುಕುವ ಆಶಯ ಮತ್ತು ಅವಕಾಶಗಳು ವಿಸ್ತರಣೆಗೊಂಡವು . ಚೀನಾದಲ್ಲಿ ಅಂಗೀಕರಿಸಿದ 1971 ರ ಸಂವಿಧಾನದಲ್ಲಿ ‘ಧಾರ್ಮಿಕ ಸ್ವಾತಂತ್ಯ್ರವನ್ನು ಕೊಡಲಾಗಿದೆ. ಆದರೆ ಕಮ್ಯುನಿಸ್ಟ್ ಸರ್ಕಾರಗಳು ನೇರವಾಗಿ ಧರ್ಮ, ದೇವರುಗಳನ್ನು ಪ್ರೋತ್ಸಾಹಿಸುವುದಿಲ್ಲ. ಅಂದರೆ, ಧರ್ಮ ದೇವರುಗಳು ನಂಬುಗೆಯ ಖಾಸಗಿಯಷ್ಟೇ. ಈ ವಿವರಣೆಯ ಮೂಲಕ ನಾವು ಅರ್ಥ ಮಾಡಿಕೊಳ್ಳಬೇಕಾದ ವಾಸ್ತವವೆಂದರೆ - ವಿಶ್ವದಲ್ಲಿ ಸಂಪೂರ್ಣ ನಾಸ್ತಿಕವಾಗಿರುವ ದೇಶಗಳಿಲ್ಲ ಎಂಬುದು. ಆದರೆ ಆಸ್ತಿಕವಾದೀ ನಂಬಿಕೆಯ ನೆಪದಲ್ಲಿ ದೇವರು ಮತ್ತು ಧರ್ಮಗಳನ್ನು ಜನರ ಶೋಷಣೆಗೆ ಸಾಧನವಾಗಿಸಿಕೊಳ್ಳುವುದು ಮತ್ತು ಓಟಿನ ಬ್ಯಾಂಕ್ ಆಗಿ ದುರುಪಯೋಗ ಮಾಡುವುದು ಅಕ್ಷಮ್ಯವಷ್ಟೇ ಅಲ್ಲ, ಜನರಲ್ಲಿರುವ ಧರ್ಮ ಮತ್ತು ದೇವರ ನಂಬಿಕೆಗೆ ಮಾಡುವ ಮೋಸ ಎಂದು ವಿಶ್ಲೇಷಿತವಾಗಿದೆ’ ಎಂದೂ ಅವರು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. .
©2024 Book Brahma Private Limited.