ಕವಿ-ಕಾವ್ಯಗಳ ಅಧ್ಯಯನದಲ್ಲಿ ಕಾವ್ಯದ ಕಲಾವಿಚಾರಗಳು ಹೊರಗುಳಿಯುವ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಕಾವ್ಯಗಳಲ್ಲಿನ ಸಂಗೀತ ಭಾಗಗಳನ್ನು ಅಧ್ಯಯನಕ್ಕೊಳಪಡಿಸಿ ಪ್ರತೀ ಕನ್ನಡ ಕವಿಯ ಸಂಗೀತ ಪ್ರೇಮವನ್ನು ಬೆಳಕಿಗೆ ತರುವ ಪ್ರಯತ್ನವನ್ನು ಲೇಖಕಿ ಶ್ಯಾಮಲಾ ಪ್ರಕಾಶ್ ಅವರು ತಮ್ಮ ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯ’ ಕೃತಿಯ ಮೂಲಕ ಮಾಡಿದ್ದಾರೆ. ಸಂಗೀತ ಮತ್ತು ಸಂಗೀತದಲ್ಲಿ ಕಾಣಿಸಿಕೊಳ್ಳುವ ಪದಗಳ ಬಗ್ಗೆ ಭರತ, ಭಾಮಹ, ಅಭಿನವಗುಪ್ತ, ಸಾರಂಗದೇವನೂ ಸೇರಿದಂತೆ ಅನೇಕರು ಬಹಳ ಮಹತ್ವದ ಚರ್ಚೆಗಳನ್ನು ನಡೆಸಿದ್ದಾರೆ. 19 ಮತ್ತು 20ನೆಯ ಶತಮಾನದ ಮುಖ್ಯ ಲೇಖಕರಾದ ಬ್ಲೇಕ್, ಕೀಟ್ಸ್, ಟೆನ್ನಿಸನ್, ಯೇಟ್ಸ್, ರವೀಂದ್ರನಾಥ್ ಟ್ಯಾಗೋರ್, ಕುವೆಂಪು, ಬೇಂದ್ರೆ ಮೊದಲಾದವರೆಲ್ಲ ನಾದ, ವರ್ಣ, ಪದ, ಸಂಕೇತ, ಅಲಂಕಾರ, ಧ್ವನಿ, ವಾಕ್ಯ ಮತ್ತು ದೈನಂದಿನ ವ್ಯವಹಾರಗಳ ನಡುವಣ ಸಂಬಂಧಗಳ ಬಗ್ಗೆ ಸಾಕಷ್ಟು ಬೆಳಕುಚೆಲ್ಲಿದ್ದಾರೆ ಎನ್ನುತ್ತದೆ ಈ ಕೃತಿ. ಹಳಗನ್ನಡಕ್ಕೆ ಪ್ರಧಾನ ಕೊಡುಗೆಯನ್ನು ನೀಡಿದವರು ಜೈನರೇ ಹೌದಾದರೂ ಶ್ಯಾಮಲಾ ಅವರ ವಿಶ್ಲೇಷಣೆಗಳು ವೇದ ಕಾಲ ಮತ್ತು ವೇದ ಪೂರ್ವ ಕಾಲ ಎಂಬ ಚೌಕಟ್ಟಿನಲ್ಲಿ ವೈದಿಕ ಸಂಗೀತವನ್ನೇ ತನ್ನ ಕೇಂದ್ರದಲ್ಲಿರಿಸಿಕೊಂಡಿದೆ. ನಡುಗನ್ನಡಕ್ಕೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ವಚನಗಳು ಮತ್ತು ದಾಸ ಸಾಹಿತ್ಯದ ಸಂಗೀತ ಸಾಹಚರ್ಯವನ್ನು ಪ್ರಬುದ್ಧವಾಗಿ ವಿಶ್ಲೇಷಿಸಲಾಗಿದೆ. ದೇಸೀ ಛಂದೋಪ್ರಕಾರಗಳಾದ ತ್ರಿಪದಿ, ಸಾಂಗತ್ಯ, ಷಟ್ಪದಿಗಳು ಕನ್ನಡ ಕಾವ್ಯಗಳಿಗೆ ತಂದುಕೊಟ್ಟ ವಿಸ್ತಾರಗಳನ್ನು ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಲಾಗಿದೆ. ಕೃತಿಯ ಅಧ್ಯಾಯಗಳಾದ ನಾಲ್ಕು ಮತ್ತು ಐದನೇ ಘಟ್ಟ ಪ್ರಮುಖ ವಿಚಾರಗಳನ್ನು ಒಳಗೊಂಡಿದೆ.
©2024 Book Brahma Private Limited.