‘ನಾದದ ನವನೀತ’ ಲೇಖಕ ಎಸ್. ದಿವಾಕರ್ ಅವರು ಸಂಪಾದಿಸಿರುವ ಸಂಗೀತ ಕುರಿತ ಪ್ರಬಂಧಗಳ ಸಂಕಲನ. ಕನ್ನಡದಲ್ಲಿ ಸಂಗೀತವನ್ನು ಕುರಿತ ಶಾಸ್ತ್ರಗ್ರಂಥಗಳಂತೂ ಹೇರಳವಾಗಿವೆ. ಅವು ಸಂಗೀತಗಾರರಿಗಷ್ಟೇ ಗ್ರಾಹ್ಯವಾಗುವ, ಸಾಮಾನ್ಯ ಸಂಗೀತ ಪ್ರಿಯರು ಬಡಪೆಟ್ಟಿಗೆ ಗ್ರಹಿಸಲಾಗದ ಶಾಸ್ತ್ರಗ್ರಂಥಗಳು. ಇವುಗಳ ಜೊತೆಗೆ ಸಂಗೀತ ಪಾಠಗಳಿರುವ ಹಲವಾರು ಪಠ್ಯಪುಸ್ತಕಗಳೂ ಇವೆ. ಇವು ಗುರುಮುಖೇನ ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ನೆರವಾಗಬಲ್ಲ ಪುಸ್ತಕಗಳು. ಆದರೆ ಸಾಮಾನ್ಯರಿಗೆ ಸಂಗೀತ ಕಲೆಯನ್ನು, ಅದರ ವಿಕಾಸವನ್ನು, ಆದರ ನಾದವೈಭವವನ್ನು, ಅನುಭೂತಿಯನ್ನು, ಇತರ ಕಲೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವ ಆದರ ಅನನ್ಯತೆಯನ್ನು, ಮನಸ್ಸಿನ ಮೇಲೆ ಅದು ಉಂಟು ಮಾಡುವ ಪರಿಣಾಮವನ್ನು ಸಂಗೀತಗಾರರ ವೈಶಿಷ್ಟ್ಯ, ಮನೋಧರ್ಮಗಳನ್ನು ಸರಳವಾಗಿ ಮನಮುಟ್ಟುವಂತೆ ವಿವರಿಸುವ ಗ್ರಂಥಗಳು ಮಾತ್ರ ಕೆಲವೇ ಕೆಲವು. ಕನ್ನಡದಲ್ಲಿ ಕಳೆದ ಮುಕ್ಕಾಲು ಶತಮಾನದಲ್ಲಿ ಪ್ರಕಟವಾಗಿರುವ ಸೊಗಸಾದ ಪ್ರಬಂಧಗಳು ಈ ಸಂಕಲನದಲ್ಲಿವೆ. ವಿವಿಧ ಸಂದರ್ಭಗಳಲ್ಲಿ ಬರೆಯಲಾದ ಈ ಪ್ರಬಂಧಗಳಲ್ಲಿ ಶಾಸ್ತ್ರೀಯ ಸಂಗೀತದ ವಿವಿಧ ಆಯಾಮಗಳ ವಿಶ್ಲೇಷಣೆ ಇದೆ, ಮೇರುಸದೃಶ ಸಂಗೀತಗಾರರ ನುಡಿಚಿತ್ರಗಳಿವೆ, ಕೆಲವು ರಾಗಗಳ ಸ್ವರೂಪದರ್ಶನವಿದೆ, ಸುಗಮ ಸಂಗೀತ, ಸಿನಿಮಾ ಸಂಗೀತ, ಇತ್ಯಾದಿ ಪ್ರಕಾರಗಳ ಪರಿಚಯವಿದೆ. ಮುಖ್ಯವಾಗಿ ಸಂಗೀತದಲ್ಲಿ ಪರಿಶ್ರಮವೇನೂ ಇಲ್ಲದವರನ್ನು, ಸಾಹಿತ್ಯ ಹಾಗೂ ಇತರ ಕಲಾಪ್ರಕಾರಗಳಲ್ಲಿ ತೊಡಗಿರುವವರನ್ನು ಮತ್ತು ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿರುವ ಸಂಕಲನ ಇದು.
©2024 Book Brahma Private Limited.