’ಸಂಗೀತಲೋಕದ ಬಂಡಾಯಗಾರ’ ಎಂದು ಗುರುತಿಸಲಾಗುತ್ತಿದ್ದ ಕುಮಾರ ಗಂಧರ್ವರು ಹಿಂದೂಸ್ತಾನಿ ಸಂಗೀತ ಜಗತ್ತು ಕಂಡ ಅಪ್ರತಿಮ ಗಾಯಕ- ಕಲಾವಿದ. ಬೆಳಗಾವಿ ಜಿಲ್ಲೆಯ ಸೂಳೆಭಾವಿ ಗ್ರಾಮದಲ್ಲಿ ಜನಿಸಿದ ಶಿವಪುತ್ರಯ್ಯ ಕೋಮಕಾಳಿಮಠ ಬಾಲಕನಾಗಿದ್ದಾಗಲೇ ಸಂಗೀತಕ್ಕೆ ಮನಸೋತರು. ಕೇವಲ ೧೧ನೇ ವಯಸ್ಸಿನಲ್ಲಿಯೇ ಭಾರತದ ಪ್ರಮುಖ ಸಂಗೀತ ಕಚೇರಿಗಳಲ್ಲಿ ಗಾಯನ ಪ್ರಸ್ತುತ ಪಡಿಸಿದ ಶಿವಪುತ್ರ ’ಕುಮಾರ ಗಂಧರ್ವ’ ಆಗಿ ಬೆಳೆದದ್ದು- ಬದುಕಿದ್ದು ಪವಾಡ ಸದೃಶ್ಯವಾದದ್ದು. ಕಬೀರ್ ದಾಸರ ನಿರ್ಗುಣ ಭಜನೆ ಹಾಗೂ ಲೋಕಸಂಗೀತ ಮತ್ತು ಶಾಸ್ತ್ರೀಯ ಗಾಯನಗಳೆರಡ ಹದವಾದ ಮಿಶ್ರಣ ನೀಡುತ್ತಿದ್ದ ಕುಮಾರ ಗಂಧರ್ವರು ಬದುಕಿದ್ದಾಗಲೇ ದಂತಕತೆಯಾಗಿದ್ದರು. ಕಬೀರ್, ಮೀರಾ, ತುಕಾರಾಂ, ತುಳಸಿದಾಸರಂತಹ ಮಧ್ಯಕಾಲೀನ ಸಂತರ ರಚನೆಗಳಿಗೆ ಸಂಗೀತದ ಮೂಲಕ ಹೊಸ ಅರ್ಥ- ಆಯಾಮ ಕಲ್ಪಿಸಿದ ಗಂಧರ್ವರು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಂಡಿದ್ದರು. ಬಾಲಗಂಧರ್ವ ಮತ್ತು ಋತು ಸರಣಿಯಲ್ಲಿ ಅದ್ಭುತ ಎನ್ನುವಂತಹ ಗಾಯನ ಪ್ರಸ್ತುತ ಪಡಿಸಿದರು. ಕುಮಾರ ಗಂಧರ್ವರ ಸಂಗೀತಯಾನ ವನ್ನ ಶಿರೀಷ ಜೋಶಿ ಅವರು ಸೊಗಸಾಗಿ ಈ ಗ್ರಂಥದಲ್ಲಿ ಕಟ್ಟಿಕೊಟ್ಟಿದ್ದಾರೆ. ಸುಮಾರು ಒಂದು ದಶಕದ ಹಿಂದೆ ಕುಮಾರ ಗಂಧರ್ವರ ಬಗ್ಗೆ ಗದುಗಿನ ತೋಂಟದಾರ್ಯ ಮಠದಿಂದ ಜೀವನ ಚರಿತ್ರೆ ಪ್ರಕಟಿಸಿದ್ದ ಶಿರೀಷ್ ಅವರು ನಂತರ ’ಹಾರಿ ಹೋದ ಹಂಸ ಏಕಾಂಗಿ’ ಎಂಬ ನಾಟಕವನ್ನು ರಚಿಸಿದ್ದರು.
ಕುಮಾರ ಸಂಗೀತ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಜೀವನ- ಸಾಧನೆಯ ಕುರಿತು ವಿವರಗಳಿರುವುದು ಒಂದು ಭಾಗವಾದರೆ ಎರಡನೆ ಭಾಗದಲ್ಲಿ ಕುಮಾರರ ಸಂಗೀತದ ಬಗ್ಗೆ ವಿಶೇಷವಾಗಿ ಒತ್ತು ನೀಡಿ ಬರೆಯಲಾಗಿದೆ. ಈ ರೀತಿಯಲ್ಲಿ ಸಂಗೀತದ ಬಗ್ಗೆ ಕನ್ನಡದಲ್ಲಿ ನಡೆದ ಮೊದಲ ಪ್ರಯತ್ನ. ರಾಗ ನಿರ್ಮಾಣ, ಕುಮಾರನೆಂಬ ಕವಿ, ವ್ಯಾಖ್ಯಾನಕಾರ ಕುಮಾರ, ಹೊಸಬಗೆಯ ಹಾಡುಗಾರ, ನಿರ್ಗುಣಿ ಕುಮಾರ, ಕುಮಾರ ಪರಂಪರೆ, ಕುಮಾರ ದರ್ಶನ, ಹಂಸೆ ಹಾರಿತು.
ಕೊನೆಯಲ್ಲಿ ಪೂರಕ ಟಿಪ್ಪಣಿ, ಅನುಬಂಧ- ಗ್ರಂಥ ಋಣ ನೀಡಿರುವುದು ಉಪಯುಕ್ತವಾಗಿದೆ.
©2024 Book Brahma Private Limited.