ಕರ್ನಾಟಕ ಶಾಸ್ತೀಯ ಸಂಗೀತ ಗಾಯಕಿ ವಿದುಷಿ ಶ್ಯಾಮಲಾ ಪ್ರಕಾಶ್ ಹಾಸನ ಜಿಲ್ಲೆಯ, ಅರಕಲಗೂಡಿನವರು. ಜಿ.ಕೆ. ಮಂಜುನಾಥ್ ಮತ್ತು ಸೀತಾಲಕ್ಷ್ಮಿ ದಂಪತಿಗಳ ಪುತ್ರಿಯಾಗಿರುವ ಇವರು ಎಂ.ಆರ್. ರಾಮಮೂರ್ತಿ ಅವರಿಂದ ಆರಂಭಿಕ ಸಂಗೀತಪಾಠವನ್ನು ಅಭ್ಯಸಿಸಿದರು. ಬಳಿಕ ಸುಕನ್ಯಾ ಪ್ರಭಾಕರ್, ಟಿ.ಆರ್. ಬಾಲಾಮಣಿ, ಪಲ್ಲವಿ ವಿಜಯನಾಥನ್ ಅವರಿಂದ ಉನ್ನತ ಸಂಗೀತ ಅಭ್ಯಾಸವನ್ನು ಪಡೆದರು. ಗುಬ್ಬಿವೀರಣ್ಣನವರ ನಾಟಕ ಕಂಪೆನಿಯಲ್ಲಿ ಶ್ಯಾಮಲಾರ ಅಜ್ಜ ಕೃಷ್ಣಪ್ಪ ಅವರು ನಟ ಜೊತೆಗೆ ಹಾಡುಗಾರರೂ ಆಗಿದ್ದರಿಂದ ಮನೆಯಲ್ಲಿ ಸಂಗೀತದ ವಾತಾವರಣದಿಂದ ಬೆಳೆದು ಅದರಲ್ಲೇ ಇಂದು ಗುರುತಿಸಿಕೊಂಡಿದ್ದಾರೆ. ಇವರು ಅನೇಕ ಕನ್ನಡ ಹಾಗೂ ತುಳು ಭಾಷೆಯ ನಾಟಕಗಳಿಗೆ ಸಂಗೀತ ನಿರ್ದೇಶಿಸುತ್ತಾ ಕನ್ನಡ ಸಾಹಿತ್ಯ, ಹಾಗೂ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಾಸಸಾಹಿತ್ಯದಲ್ಲಿ ಹೆಚ್ಚಿನ ಒಲವನ್ನು ನೆಟ್ಟಿದ್ದ ಇವರು, ಸೀನಿಯರ್ ಗ್ರೇಡ್‌ನಲ್ಲಿ ರಾಜ್ಯಕ್ಕೇ ಎರಡನೇ ರ್ಯಾಂಕ್ ಪಡೆದು ಸಂಸ್ಕೃತ ಭಾಷೆಯಲ್ಲಿ ʻಕಾವ್ಯಸಾಹಿತ್ಯ ಪದವಿʼಯನ್ನು ಪಡೆದರು. ಜೊತೆಗೆ ʻಕಾಜಾಣ ಪಾರೀಣʼ ಪದವಿಯನ್ನೂ ಪಡೆದುಕೊಂಡಿದ್ದಾರೆ. ಮುಂಬಯಿ-ಕರ್ನಾಟಕ ಸಂಘದ ’ಸ್ನೇಹ ಸಂಬಂಧ’ ಎಂಬ ಮಾಸಿಕ ಪತ್ರಿಕೆಯಲ್ಲಿ ʻನಾದೋಪಾಸನʼ ಶೀರ್ಷಿಕೆಯಡಿ ದೇಶದ ಶ್ರೇಷ್ಠ ಸಂಗೀತ ಶಾಸ್ತ್ರಜ್ಞರ ಬಗ್ಗೆ, ಸಂಗೀತ ಕ್ಷೇತ್ರದ ಕುರಿತಾದ ಹಲವಾರು ಕೃತಿಗಳ ಬಗ್ಗೆ ಅಭ್ಯಾಸ ಮಾಡಿ ಅಂಕಣಗಳನ್ನು ಬರೆಯುತ್ತಾ ಬಂದಿದ್ದಾರೆ. ಹೀಗೆ ಬರೆದ ಲೇಖನಗಳಿಂದ ಆಯ್ದ ಕೃತಿಗಳನ್ನು ಒಳಗೊಂಡ ಚೊಚ್ಚಲ ಪುಸ್ತಕವನ್ನು ಶ್ಯಾಮಲಾ ಅವರು ರಚಿಸಿದ್ದಾರೆ.
ಕೃತಿಗಳು: ʻಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯʼ, 'ನಾದೋಪಾಸನʼ.