ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಚಿರಪರಿಚಿತ ಹೆಸರಾದ ವಿದ್ವಾನ್ ಟಿ ಎಂ ಕೃಷ್ಣ ಅವರು ಸಂಗೀತದ ಪ್ರಸ್ತುತಿಯಲ್ಲಿ ತಮ್ಮದೇ ಜಾಡು ಕಂಡುಕೊಂಡವರು. ಇವರ ಸಂಗೀತ ನಿರೂಪಣೆ ಸಾಂಪ್ರದಾಯಿಕವಾದರೂ ಅದರಲ್ಲಿ ಅಚ್ಚರಿಯಾಗುವಷ್ಟು ಹೊಸತನಗೋಚರವಾಗುತ್ತದೆ. ಸಂಗೀತದ ಮೂಲಕ ರಸಿಕರನ್ನು ಮೋಡಿಗೊಳಿಸುವುದಕ್ಕೆ ಮಾತ್ರ ಅವರು ಸೀಮಿತವಾಗಿಲ್ಲ. ಮನಸ್ಸು ಬಿಚ್ಚಿ ಮಾತನಾಡುವ ಕಾರಣದಿಂದಲೂ ಅವರು ಪ್ರಸಿದ್ಧರು. ಅವರ ಬರವಣಿಗೆ ತೀರಾ ಮೊನಚು. ಬಹುಶಃ ನೈತಿಕ ಆಕ್ರೋಶವಿಲ್ಲದೇ ಹೋದಲ್ಲಿ ಸ್ಥಗಿತವಾಗಿರುವ ಸಮಾಜದಲ್ಲಿ ಯಾವುದೇ ಚಲನೆಯು ಸಾಧ್ಯವಿಲ್ಲ ಅನ್ನಿಸುತ್ತದೆ. ಸಂಗೀತ ಎನ್ನುವುದು ಇವರಿಗೆ ಬದುಕನ್ನು ಅರ್ಥಮಾಡಿಕೊಳ್ಳುವ ಕ್ರಮ. ತಮ್ಮ ಬರಹಗಳ ಮೂಲಕ ಕರ್ನಾಟಕ ಸಂಗೀತದ ಹಿಂದಿರುವ ದರ್ಶನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂಗೀತದ ಕಲಾತ್ಮಕತೆಯ ಬಗ್ಗೆ ಗಂಭೀರವಾಗಿ ಬರೆಯುತ್ತಿದ್ದಾರೆ. ಇವರ ಆಲೋಚನೆ ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್, ರಾಜಕೀಯ, ಸಿನಿಮಾ,...... ಹೀಗೆ ಇವರ ಆಸಕ್ತಿಯ ವಿಷಯಗಳು ಹಲವು. ಕೃಷ್ಣ ಅವರ ಸಂಗೀತವನ್ನು ಕುರಿತ ಕೆಲವು ಲೇಖನಗಳನ್ನು ಇಲ್ಲಿ ಸಂಗ್ರಹಿಸಿ, ಅನುವಾದಿಸಿ ಕೊಡಲಾಗಿದೆ
©2024 Book Brahma Private Limited.