'ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ' ಲೇಖಕ ಮಧು ವೈ.ಎನ್ ಅವರ ತಂತ್ರಜ್ಞಾನದ ಕುರಿತ ವಿಚಾರವನ್ನೊಳಗೊಂಡ ಕೃತಿಯಾಗಿದೆ. 29 ಅಧ್ಯಾಯಗಳ ದಟ್ಟ ಪುಸ್ತಕದ ಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು ಮೊದಲ ಭಾಗ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಎರಡನೆಯ ಭಾಗ ಇನ್ನಿತರ ತಂತ್ರಜ್ಞಾನ(ವಿಪಿಎನ್, ಫಿಂಗರ್ ಪ್ರಿಂಟ್, ಸ್ಯಾಟಲೈಟ್ ಫೋನ್, ಇ-ಸಿಮ್ ..) ಮತ್ತು ಮೂರನೆಯ ಭಾಗದಲ್ಲಿ ಸಾಫ್ಟ್ ವೇರಿನಲ್ಲಿ ಎದುರಿಸುವ ಆಸಕ್ತಿಕರ ಆರ್ಕಿಟೆಕ್ಚರಲ್ ಸಮಸ್ಯೆಗಳ(ಛಿದ್ರ ಮೆದುಳಿನ ಪ್ರಾಬ್ಲಂ, ಖೈದಿಗಳ ಗೊಂದಲ, ಸೈನ್ಯಾಧಿಕಾರಿಗಳ ಪ್ರಾಬ್ಲಂ...) ವಿವರಣೆಗಳನ್ನು ಒಳಗೊಂಡಿದೆ.
ಕೃತಿಯನ್ನು ಯಾಕೆ ಓದಬೇಕೆಂದರೆ, ಬಹುಪಾಲು ಮಂದಿಗೆ ತಂತ್ರಜ್ಞಾನವೆಂದರೆ ದೂರದ ಬೆಟ್ಟದಂತೆ. ಕೆಲವರಿಗೆ ನುಣ್ಣಗೆ, ಕೆಲವರಿಗೆ ಕರಿಗತ್ತಲ ಘೇಂಡಾಮೃಗ. ಅದು ನುಣ್ಣಗೂ ಇಲ್ಲ, ಘೇಂಡಾಮೃಗವೂ ಅಲ್ಲವೆಂಬ ಅರಿವು ಮೂಡಿಸುವ ಪ್ರಯತ್ನ ಈ ಪುಸ್ತಕದ್ದು. ಕ್ಲಿಷ್ಟವಾದ ತಂತ್ರಜ್ಞಾನ ಸಂಗತಿಗಳನ್ನು ಸುಲಿದ ಬಾಳೆಹಣ್ಣಿನಂತೆ ಪ್ರಸ್ತುತಪಡಿಸಿ ಅದರೆಡೆ ಒಲವು ಮೂಡಿಸುವ ಪ್ರಯತ್ನ. ಹಗಲಿಡೀ ಮೈಮುರಿದು ದುಡಿದು ಇಳಿಸಂಜೆ ಊರ ಮುಂದಿನ ಅರಳಿಕಟ್ಟೆಯ ಮೇಲೆ ವಿರಾಮದಿಂದ ಕುಳಿತಾಗ ಮೂಡುವ ಲೋಕಜ್ಞಾನದ ಸಂವಾದ.
ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಹಿರಿಯರು, ಕಿರಿಯರು, ಟೆಕ್ಕಿಗಳೂ ಕೂಡ ಓದಬೇಕಾದ ಪುಸ್ತಕವಿದು. ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವೆಂದರೆ ಬೆನ್ನು ತೋರಿಸಿ ಓಡುವರೆಲ್ಲರೂ ಓದಲೇಬೇಕು.
©2024 Book Brahma Private Limited.