‘ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ’ ಡಾ. ಬಸಯ್ಯ ಸ್ವಾಮಿ ಅವರ ಮಹಾಪ್ರಬಂಧ. ಈ ಕೃತಿಗೆ ಡಾ.ಮಹಾಂತೇಶ ಪಾಟೀಲ ಅವರು ಪ್ರವೇಶಿಕೆಯನ್ನು ಬರೆದಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ ಸದ್ಯದ ಕನ್ನಡ ಸಂಶೋಧನೆಯು ಅಂತರ್ ಶಿಸ್ತೀಯ ಅಧ್ಯಯನಗಳ ಕಡೆಗೆ ಹೆಚ್ಚು ಆಸಕ್ತವಾದಂತಿದೆ. ನವಚಾರಿತ್ರಿಕವಾದ, ನಿರಚನಾವಾದ, ಪರಿಸರವಾದ, ಮನಶ್ಶಾಸ್ತ್ರೀಯವಾದ, ಸಮಾಜವಾದ, ಮೂಲವಿಜ್ಞಾನದ ಜ್ಞಾನಶಿಸ್ತುಗಳು ಸಾಹಿತ್ಯ ಅಧ್ಯಯನದೊಳಗೆ ಪ್ರವೇಶ ಪಡೆಯುತ್ತಿವೆ. ಈ ಬಗೆಯ ಸಂಶೋಧನಾತ್ಮಕ ಅಧ್ಯಯನಗಳಿಗೆ ಬಸಯ್ಯಸ್ವಾಮಿಯವರ ‘ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ’ ಒಂದು ಹೊಸ ಸೇರ್ಪಡೆ ಎಂದಿದ್ದಾರೆ. ಅದೊಂದು ಪರಿಕಲ್ಪನಾತ್ಮಕ ಸಂಶೋಧನೆ. ಈ ಸಂಶೋಧನೆಯು ಸಾಹಿತ್ಯ ರೂಪವಾದ ‘ಕಾದಂಬರಿ’, ‘ವಲಸೆ’ ಎನ್ನುವುದು ಸಮಾಜಶಾಸ್ತ್ರದ ಪರಿಭಾಷೆ. ಅವೆರಡನ್ನು ಗಮನಿಸಿದಾಗ ಪ್ರಸ್ತುತ ಅಧ್ಯಯನವು ‘ಅಂತರ್ ಶಿಸ್ತೀಯ ಸಂಶೋಧನೆ’ ಎನಿಸುತ್ತದೆ. ಜೊತೆಗ ವಲಸೆ ಪ್ರಜ್ಞೆಯನ್ನು ವಿಶ್ಲೇಷಿಸುವಾಗ ಮನಶ್ಶಾಸ್ತ್ರ (ವಲಸೆ=ಅಸ್ತಿತ್ವ ಪ್ರಜ್ಞೆ, ಸ್ಮೃತಿ-ವಿಸ್ಮೃತಿ), ಸಂಸ್ಕೃತಿ ಅಧ್ಯಯನ (ದೇವರು, ಧರ್ಮ, ಸಂಪ್ರಾದಯ, ನಂಬಿಕೆಗಳು), ಮಹಿಳಾ ಅಧ್ಯಯನ (ಮಹಿಳಾ ನೆಲೆಗಳು) ಹಲವು ಜ್ಞಾನಶಿಸ್ತುಗಳ ತಿಳುವಳಿಕೆಯನ್ನು ಕಾದಂಬರಿಗಳ ವಿಶ್ಲೇಷಣೆಯಲ್ಲಿ ಬಳಸಲಾಗಿದೆ. ಹಾಗಾಗಿ ಇಲ್ಲಿ ಬಹುಶಿಸ್ತೀಯ ಸಂಶೋಧನೆಯ ಕೆಲವು ಸ್ವರೂಪಗಳು ಕಾಣಿಸುತ್ತವೆ. ಪ್ರಸ್ತುತ ಸಂಶೋಧನೆಗೆ ಒಟ್ಟು ಏಳು ಅಧ್ಯಾಯಗಳನ್ನು ವಿಷಯದ ವಿವೇಚನೆಗಾಗಿ ಹಾಕಿಕೊಳ್ಳಲಾಗಿದೆ. ಬಸಯ್ಯಸ್ವಾಮಿಯವರ ಸಂಶೋಧನೆಯ ಬರವಣಿಗೆಯು ಸಂಕ್ಷಿಪ್ತತೆ, ಸಾರಸಂಗ್ರಹ ಮತ್ತು ತಾತ್ವಿಕ ವಿಶ್ಲೇಷಣೆ ಕ್ರಮವನ್ನು ಅನುಸರಿಸಿದ್ದಾರೆ. ಗಾತ್ರದ ದೃಷ್ಟಿಯಿಂದ ವಿಸ್ತೃತ ಮಾದರಿಯಿಂದ ಹೊರತಾದುದು. ‘ಕಿರಿದರೊಳ್ ಪಿರಿದರ್ಥ’ದ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಅಧ್ಯಯನವನ್ನು ಹತ್ತು ಕಾದಂಬರಿಗಳ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ. ಅವುಗಳೆಂದರೆ ಚಿಗುರಿದ ಕನಸು, ಮರಳಿ ಮಣ್ಣಿಗೆ, ಸುಬ್ಬಣ್ಣ, ಓಂ ಣಮೋ, ಬೀಜ, ಮತ್ತೊಬ್ಬನ ಆತ್ಮಕಥೆ, ಹಳ್ಳ ಬಂತು ಹಳ್ಳ, ಸ್ವಪ್ನ ಸಾರಸ್ವತ, ಹವನ, ಹಿಜಾಬ್- ಕಾದಂಬರಿಗಳನ್ನು ಅಧ್ಯಯನಕ್ಕೆ ಒಳಗು ಮಾಡಲಾಗಿದೆ. ಇಲ್ಲಿ ನವೋದಯ, ನವ್ಯ, ದಲಿತ-ಬಂಡಾಯೋತ್ತರ ಕಾದಂಬರಿಗಳಿವೆ. ಈ ಪಟ್ಟಿಯಲ್ಲಿ ಮಹಿಳಾ ಕಾದಂಬರಿ, ದಲಿತ-ಬಂಡಾಯ ಕಾದಂಬರಿಗಳನ್ನು ಪ್ರಾತಿನಿಧಿಕವಾಗಿ ಸಂಶೋಧನೆಗೆ ಒಳಪಡಿಸದಿರುವುದು ಅಚ್ಚರಿದಾಯಕ ಎಂದಿದ್ದಾರೆ.
©2024 Book Brahma Private Limited.