ಬಸವಾದಿ ಶಿವಶರಣರ ಮಾರ್ಗವು ಜೀವಪರ ಕಲ್ಯಾಣ ಕೇಂದ್ರಿತವಾಗಿದ್ದು, ಮನುಷ್ಯ ಮನುಷ್ಯರ ನಡುವೆ ಇರುವಂತಹ ಪಾರಂಪರಿಕ ಭೇದಭಾವಗಳನ್ನು ಅಳಿಸಿ ಕಲ್ಯಾಣ ಮಹೋತ್ಸವ ಜರುಗಿಸಿತು. ಅದರ ಪಾರಂಪರಿಕ ಭೌಗೋಳಿಕ ಹಿನ್ನೆಲೆ, ಸಾಂಸ್ಕೃತಿಕ ಪರಿಸರವನ್ನು ಮನವರಿಕೆ ಮಾಡಿಕೊಡುವ ದಿಶೆಯಲ್ಲಿ ಪ್ರಕಟವಾದ ಹಲವು ಕೃತಿಗಳ ಪೈಕಿ ‘ಕಲ್ಯಾಣ ಮಾರ್ಗ’ ಒಂದು. .ಸಂಪಾದಕರು: ಪ್ರೊ. ಕಲ್ಯಾಣರಾವ ಜಿ. ಪಾಟೀಲ, ಸಹ ಸಂಪಾದಕರು: ಲಕ್ಷ್ಮೀಕಾಂತ ಸಿ. ಪಂಚಾಳ ಹಾಗೂ ಕಾಮೇಶ ಎನ್. ಧಾಮಾ.
ಕಲಬುರ್ಗಿಯ ವೈವಿಧ್ಯಮಯ ವಸ್ತು ವಿಷಯಗಳನ್ನು ದಾಖಲಿಸುವ ಸದುದ್ದೇಶದಿಂದ ರೂಪಿಸಲಾದ ವೈಶಿಷ್ಟ್ಯಪೂರ್ಣ ಸಂಪುಟವಾಗಿದೆ. ಕಲಬುರ್ಗಿ ತಾಲ್ಲೂಕಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ 2014ರಲ್ಲಿ ಪ್ರಕಟವಾದ ಈ ಸಂಪುಟವು ಕಲಬುರ್ಗಿ ತಾಲೂಕಿನ ಸಾಂಸ್ಕೃತಿಕ ಲೋಕದ ಕೈದೀವಿಗೆಯಾಗಿದೆ. ಕಲಬುರ್ಗಿ ಪರಂಪರೆಯ ದರ್ಶನವನ್ನು ಮಾಡಿಕೊಡುವ ಮೊದಲನೆಯ ಭಾಗದಲ್ಲಿ ಜಿಲ್ಲೆಯ ಇತಿಹಾಸ, ಶರಣರ ಸ್ಮಾರಕಗಳು, ಪ್ರೇಕ್ಷಣೀಯ ಸ್ಥಳಗಳ ಅವಲೋಕನ, ಮಠ ಮಂದಿರಗಳ ಕೊಡುಗೆ, ಐತಿಹ್ಯಗಳ ವಿವೇಚನೆ, ಶೈಕ್ಷಣಿಕ ಸ್ಥಿತಿಗತಿಯನ್ನು ವಸ್ತುನಿಷ್ಠವಾಗಿ ದಾಖಲಿಸಿದ ಮಹತ್ವದ ಲೇಖನಗಳಿವೆ.
ಪರಿಸರದ ಪ್ರಾತಃಸ್ಮರಣೀಯರ ದರ್ಶನ ಎಂಬ 2ನೇ ಭಾಗದಲ್ಲಿ ಕಮಲಾಪುರ ಪರಿಸರದ ಪ್ರಾತಃಸ್ಮರಣೀಯರು, ತತ್ತ್ವಪದಕಾರರು, ಆದರ್ಶ ಶಿಕ್ಷಕರು ಕುರಿತ ಲೇಖನಗಳು ಗಮನಾರ್ಹ. ಇವುಗಳ ಜೊತೆಗೆ ಡಾ. ಮಾಯಾದೇವಿ ಮಾಲಿಪಾಟೀಲರ ಅಂಬಲಿಗೆಯ ಶ್ರೀ ಚೆನ್ನಮಲ್ಲಿಕವಿ, ಪ್ರೊ. ಕಲ್ಯಾಣರಾವ ಜಿ. ಪಾಟೀಲರ ಐನೂಲಿ ಕರಿಬಸವಾರ್ಯ, ಡಾ. ಚಿತ್ಕಳಾ ಮಠಪತಿಯವರ ಕವಿತಿಲಕ ಗುರುಲಿಂಗಸಿದ್ಧ ಕವಿ ಮತ್ತು ಕುಮಾರಿ ರೇಷ್ಮಾ ವಿ. ದೋಶೆಟ್ಟಿಯವರ ಮಹಾಗಾಂವದ ಶ್ರೀ ಚಂದ್ರಶೇಖರ ಪಾಟೀಲರ ಕುರಿತಾದ ಲೇಖನಗಳು ಸಾಂದರ್ಭಿಕವಾಗಿವೆ. ಇವೆಲ್ಲ ಸಾಹಿತ್ಯಕ ಸೌರಭವನ್ನು ಮನನ ಮಾಡಿಕೊಡುವ, ಮತೀಯ ಗಲಭೆ ಸಂದರ್ಭದಲ್ಲಿ ವ್ಯಕ್ತವಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ತಮ್ಮತನ ಕಾಯ್ದಿಟ್ಟುಕೊಳ್ಳುವ ಸಾಂದರ್ಭಿಕ ಚಿಂತನೆಗಳಾಗಿವೆ.
ಕಲ್ಯಾಣಮಾರ್ಗದ ಸಾಹಿತ್ಯ, ಸಂಸ್ಕೃತಿ ದರ್ಶನ ಮಾಡಿಸುವ ಮೂರನೆಯ ಭಾಗವು ಸಂಪಾದಕರ ಶ್ರಮಶೀಲತೆಯನ್ನು ದರ್ಶಿಸುತ್ತದೆ. ಡಾ. ನಾಗೇಂದ್ರ ಮಸೂತಿಯವರ ಕಲಬುರ್ಗಿ ಭಾಷೆ ಭಾಷಾಶಾಸ್ತ್ರದ ವೈಶಿಷ್ಟ್ಯಗಳನ್ನು ಕಟ್ಟಿಕೊಡುತ್ತದೆ. ಡಾ. ಮಹಾದೇವ ಬಡಿಗೇರರ ಲೇಖನವು ಕಲಬುರ್ಗಿ ಜಿಲ್ಲೆಯ ಶರಣ ಪರಂಪರೆಯ ವಚನ ಸಾಹಿತ್ಯವು ಆಧುನಿಕ ವಚನ ಸಾಹಿತ್ಯಕ್ಕೆ ಹೇಗೆ ಪೂರಕ ಮತ್ತು ಪೋಷಕವಾಗಿದೆ ಎಂಬ ಅಂಶವನ್ನು ವ್ಯಕ್ತಿಕೇಂದ್ರಿತ ನೆಲೆಗಳ ಹಿನ್ನೆಲೆಯಲ್ಲಿ ಆಲೋಚಿಸುತ್ತದೆ.
ಕಲಬುರ್ಗಿ ಜಿಲ್ಲೆಯ ತತ್ತಪದ ಸಾಹಿತ್ಯ, ಶರಣಬಸವರ ಕುರಿತಾದ ಪುರಾಣ ಹಾಗೂ ಸಂಶೋಧನೆ ಸಾಹಿತ್ಯವು ಕ್ಷೇತ್ರಕಾರ್ಯ ವ್ಯಕ್ತಿನಿಷ್ಠತೆಯನ್ನು ಪ್ರತಿಪಾದಿಸುತ್ತದೆ. ಡಾ. ಪ್ರೇಮಾ ಅಪಚಂದರ ಮಹಿಳಾ ಸಾಹಿತ್ಯವು ಹೊಸಗನ್ನಡ ಕವಿಯತ್ರಿ, ಚಿಂತಕಿಯರ ಸಾಹಿತ್ಯಶ್ರೀಯನ್ನು ಕಟ್ಟಿಕೊಡುತ್ತದೆ. ಮಹಿಳೆಯರ ಸಾಧನೆ, ಸಾಹಿತ್ಯಕ ಚಟುವಟಿಕೆಗಳನ್ನು ದಾಖಲಿಸಿದ ಈ ಲೇಖನ ಅರ್ಥಪೂರ್ಣವಾಗಿದೆ. ಸಮ್ಮೇಳನಾಧ್ಯಕ್ಷರ ಜೀವನ ಸಾಧನೆಗಳನ್ನು ದರ್ಶಿಸುವ ಲೇಖನ ಮತ್ತು ಸಮ್ಮೇಳನಾಧ್ಯಕ್ಷರ ಭಾಷಣವು ರಚನಾತ್ಮಕ ನೆಲೆಗಳನ್ನು ಪ್ರತಿಪಾದಿಸುತ್ತದೆ. ಈ ಹೊತ್ತಿಗೆ ಸಂಶೋಧನಾತ್ಮಕ ನೆಲೆಗಳನ್ನು, ವ್ಯಕ್ತಿಯ ಪ್ರತಿಭಾಶಕ್ತಿಯನ್ನು ದರ್ಶಿಸುವ ವಿಸ್ತೃತ ಆಯಾಮಗಳನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.