‘ಬಯಲಬೆಳಗು’ ಮಲೆಯೂರು ಗುರುಸ್ವಾಮಿ ಅವರು ಸಂಪಾದಿಸಿರುವ ಎಚ್. ತಿಪ್ಪೇರುದ್ರಸ್ವಾಮಿ 85ನೇ ನೆನಪಿನ ಸಂಪುಟವಾಗಿದೆ. ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ಅವರು ನಂತರ ಮೈಸೂರು ಮಾನಸ ಗಂಗೋತ್ರಿಯ ಅಂಚೆ ತೆರಪಿನ ಶಿಕ್ಷಣದ ನಿರ್ದೇಶಕರಾಗಿದ್ದರು. ಶಿವಮೊಗ್ಗ ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅವರು ನಂತರ ಗಂಗೋತ್ರಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ 85ನೇ ನೆನಪಿನ ಸ್ಮರಣೆ ಸಲುವಾಗಿ ಮಲೆಯೂರು ಗುರುಸ್ವಾಮಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.