ರಿಯಾಜ್ ಪಾಷ ಅವರ 'ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು (ಲಾವಣಿ, ಕಥನ ಗೀತೆಗಳನ್ನು ಅನುಲಕ್ಷಿಸಿ)' ಶೈಕ್ಷಣಿಕ ಶಿಸ್ತು, ಅಧ್ಯಯನ ಪರಿಶ್ರಮ ಹಾಗೂ ವಿಶ್ಲೇಷಣಾ ಪ್ರವೃತ್ತಿಗಳಿಂದ ಕೂಡಿದ ಜಾನಪದ ಅಧ್ಯಯನ ಪ್ರೌಢ ಪ್ರಬಂಧವಾಗಿದೆ. ಜಾನಪದದಲ್ಲಿ ಎಲ್ಲಾ ಗ್ರಾಮೀಣ ವರ್ಗಗಳ ಅನುಭವಗಳು ಸೇರಿಕೊಂಡಿರುತ್ತವೆ ಎಂಬುದು ನಿಜ. ಆದರೆ ಆ ಅನುಭವಗಳನ್ನು ಮಂಡಿಸುವ ಕ್ರಮದಲ್ಲಿ ಒಂದು ವರ್ಗ ವ್ಯತ್ಯಾಸವಿರುತ್ತದೆ. ಅನುಭವಗಳೆಲ್ಲವಕ್ಕೆ ಗ್ರಾಮೀಣ ಎಂಬ ಒಂದು ಸಾಮಾನ್ಯ ಹೊರ ಕವಚವಿರುವುದು ನಿಜವಾದರೂ ಸಂವೇದನೆಗಳ ಮಟ್ಟದಲ್ಲಿ ವರ್ಗ ಭೇದಗಳಿರುತ್ತವೆ ಎಂಬುವುದನ್ನು ನಾವು ಇಲ್ಲಿ ಗಮನಿಸಬಹುದು. ಯಾರದೋ ಹೊಲದಲ್ಲಿ ಕಳೆ ಕೀಳುವ ರೈತಾಪಿ ಕೂಲಿ ಹೆಂಗಸು 'ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲ, ಬಡವರಿಗೆ ಸಾವ ಕೊಡಬ್ಯಾಡ' ಎಂದರೆ, 'ಹೊಳೆದಂಡೆಲಿರುವ ಕರಿಕೀಯ ಕುಡಿಯಂಗೆ ಹಬ್ಬಲಿ ತವರಿನ ರಸಬಳ್ಳಿ' ಎಂದು ಭೂ ಹಿಡುವಳಿದಾರ ಕುಟುಂಬದ ಗೃಹಿಣಿ ಹಾಡುತ್ತಾಳೆ. 'ಹಾದೀಲಿ ಹೋಗೋರೆ ಹಾಡೆಂದು ಹೇಳ್ಬೇಡಿ, ಹಾಡಲ್ಲ ಅದು ನನ್ನ ಒಡಲುರಿ, ಬೆವರಲ್ಲ ಅದು ನನ್ನ ಕಣ್ಣೀರು ಎಂದು ಹೇಳುವಾಗ ಜನಪದ ಹಾಡುಗಾರ್ತಿ ವ್ಯಕ್ತಪಡಿಸುತ್ತಿರುವ ಎದೆಬೇನೆಗೂ, 'ಆಡಿ ಬಾ ನನ ಕಂದ ಅಂಗಾಲ ತೊಳೆದೇನು, ತೆಂಗಿನ ಕಾಯ ತಿಳಿನೀರ ತಕ್ಕೊಂಡು, ತೆಂಗಿನಕಾಯ ತಿಳಿನೀರ ತಕ್ಕೊಂಡು ಬಂಗಾರ ನಿನ ಪಾದ ತೊಳೆದೇನು'ಎಂದು ಹಾಡುವ ತಾಯಿ ಪ್ರೀತಿಯ ಸಮೃದ್ಧತೆಯ ಕಲ್ಪನೆಗೂ ವ್ಯತ್ಯಾಸವಿರುವುದನ್ನು ನಾವು ಗಮನಿಸಬೇಕಾಗುತ್ತದೆ.
©2024 Book Brahma Private Limited.