ಎನ್. ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿ ಹುಣಸೆ ಮರದ ದೆವ್ವ. ಬಂಗಲೆಯೊಂದರ ಸುತ್ತ ಹೆಣೆದಿರುವ ಕಥೆ ಇದು. ಭವಾನಿ ಮಂದಿರ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಬಂಗಲೆ ಭೂತ ಬಂಗಲೆ ಎಂದೇ ಕುಖ್ಯಾತವಾಗಿತ್ತು. ಬಂಗಲೆಗೆ ಹೊಂದಿಕೊಂಡಂತೆ ಒಂದು ಹುಣಸೆ ಮರವೂ ಇದ್ದು ಅದರಲ್ಲಿ ದೆವ್ವ ವಾಸವಾಗಿದೆ ಅಂತ ಸುತ್ತಮುತ್ತಲಿನ ಜನ ಮಾತಾಡಿಕೊಳ್ಳುತ್ತಿದ್ದರು. ಇದೇ ಕಾರಣಕ್ಕಾಗಿ ಬಂಗಲೆಯನ್ನು ಮಾರಬೇಕೇಂದು ಮಾಲೀಕರಾದ ನಟರಾಜ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಬಾಡಿಗೆ ಕೊಡಲು ನಿರ್ಧಾರ ಮಾಡಿದ್ದ. ಭೈರಪ್ಪ ಎನ್ನುವ ಕಾವಲುಗಾರನನ್ನು ನೇಮಿಸಿದ್ದ, ಆತ ಅಲ್ಲಿನ ಔಟ್ ಹೌಸಿನಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದ. ದೆವ್ವಭೂತಗಳಲ್ಲಿ ನಂಬಿಕೆ ಇಲ್ಲದ ಬಾಬೂರಾವ್ ಎನ್ನುವ ವ್ಯಕ್ತಿ ಭವಾನಿ ಮಂದಿರಕ್ಕೆ ಬಾಡಿಗೆಗೆ ಬರುತ್ತಾನೆ. ಬಾಬೂರಾವ್ ತನ್ನ ಹಿರಿಯ ಮಗಳಿಗೆ ಮದುವೆ ಮಾಡಲು ವರಾನ್ವೇಷಣೆ ನಡೆಸಿರುತ್ತಾನೆ. ಆದರೆ ಆ ಹುಡುಗಿ ನೋಡಲು ಚೆನ್ನಾಗಿರದ ಕಾರಣ ಯಾವ ವರಮಹಾಶಯರೂ ಅವಳನ್ನು ಒಪ್ಪುತ್ತಿರಲಿಲ್ಲ... ಆತ ಮಗಳ ಮದುವೆಯ ಆಸೆಯನ್ನೆ ಕೈಬಿಟ್ಟಿದ್ದ. ಅಷ್ಟರಲ್ಲಿ ಸ್ಫುರದ್ರೂಪಿ ವರನೊಬ್ಬ ಬಾಬೂರಾವ್ನ ಮಗಳನ್ನು ನೋಡಿ ಮದುವೆಯಾಗಲು ಒಪ್ಪಿಗೆ ನೀಡಿದ. ಮಾತುಕತೆ ಮುಗಿದು ಮದುವೆಯ ದಿನವನ್ನು ಗೊತ್ತು ಮಾಡಿ ಲಗ್ನ ಪತ್ರಿಕೆ ಹಂಚಲು ಶುರು ಮಾಡಿದ್ದರು. ಹುಡುಗಿಯ ದುರಾದೃಷ್ಟವೋ ಏನೋ ಒಂದು ದಿನ ಮದುವೆಯಾಗುವ ಹುಡುಗ ಮತ್ತವನ ತಂದೆ ಬಂದು ನಾವು ನಿಮ್ಮ ಹುಡುಗಿಯನ್ನೇ ನೋಡಿಲ್ಲ ಆದರೂ ಆದ್ಹೇಗೆ ನಮ್ಮ ಹೆಸರು ಹಾಕಿಕೊಂಡು ಪತ್ರಿಕೆ ಹಂಚುತ್ತಿರುವಿರಿ ಎಂದು ಗಲಾಟೆ ತೆಗೆದು ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಹುಡುಗಿಯ ಮನೆಯವರ ಪರಿಚಯವೇ ಇಲ್ಲವೆಂದು ಸಾಬೀತು ಕೂಡ ಮಾಡಿದರು. ತಬ್ಬಿಬ್ಬಾದ ಬಾಬೂರಾವ್ ಕುಟುಂಬದವರು ಜೈಲು ಪಾಲಾಗುವುದರಿಂದ ಹೇಗೋ ಪಾರಾದರು. ನೊಂದ ಹುಡುಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇಷ್ಟೆಲ್ಲಾ ಆಗಲು ಬಂಗಲೆಯಲ್ಲಿ ಇರುವ ದೆವ್ವವೇ ಕಾರಣ ಅಂತ ಜನ ಅಭಿಪ್ರಾಯ ಪಟ್ಟರು. ನಂತರ ಹೆದರಿದ ಬಾಬೂರಾವ್ ಬಂಗಲೆಯನ್ನು ಖಾಲಿ ಮಾಡಿ ಬೇರೆ ಮನೆಗೆ ಹೋದ. ಇದಾದ ಕೆಲವೇ ದಿನಗಳಲ್ಲಿ ಷಫೀವುಲ್ಲಾ ಎಂಬಾತನ ಕುಟುಂಬ ಬಾಡಿಗೆಗೆ ಬಂದಿತು. ಅಲ್ಲಿ ಅವರಿಗೂ ಬಹಳಷ್ಟು ಕೆಟ್ಟ ಅನುಭವಗಳು ಆದವು, ಹಾಗಾಗಿ ಬಂದ ಸ್ವಲ್ಪ ದಿನಗಳಲ್ಲಿಯೆ ಬಂಗಲೆ ಖಾಲಿ ಮಾಡಿದರು. ಇವರ ನಂತರ ಬಾಡಿಗೆಗೆ ಬಂದ ರಾಮಚಂದ್ರರಾಯರದೂ ಇದೇ ಕಥೆ. ಕೊನೆಗೆ ಬಂಗಲೆಯ ಪ್ರವರ ಎಲ್ಲಾ ಕಡೆ ಹರಡಿ ಜನ ಬಾಡಿಗೆಗೆ ಬರುವುದಿರಲಿ ಆ ಬೀದಿಯಲ್ಲಿ ಓಡಾಡಲೂ ಹೆದರುತ್ತಿದ್ದರು. ಬಂಗಲೆಯ ಪಕ್ಕದ ಹುಣಸೆ ಮರದಲ್ಲಿ ನಿಜವಾಗಿಯೂ ಪಿಶಾಚಿ ವಾಸವಾಗಿತ್ತಾ??. ಅದು ನಿಜವೇ ಆಗಿದ್ದರೆ ಅದು ಕಾವಲುಗಾರ ಭೈರಪ್ಪನ ಕುಟುಂಬಕ್ಕೆ ಏಕೆ ಏನೂ ತೊಂದರೆ ಮಾಡುತ್ತಿರಲಿಲ್ಲ?... ಇದು ತಿಳಿಯಬೇಕೆಂದರೆ ಬಂಗಲೆಯ ಹಿನ್ನೆಲೆ ತಿಳಿಯಬೇಕು. ಅದೇನೆಂದು ಗೊತ್ತಾಗಬೇಕಾದರೆ ಹುಣಸೆ ಮರದ ದೆವ್ವ ಪುಸ್ತಕವನ್ನು ಓದಲೇಬೇಕು.
©2024 Book Brahma Private Limited.