ಲೇಖಕ ಕಿಗ್ಗಾಲು. ಎಸ್. ಗಿರೀಶ್ ಅವರ ಮೊದಲನೆಯ ಪತ್ತೆದಾರಿ ಕಾದಂಬರಿ ಮತ್ತು ಹತ್ತನೆಯ ರಚನೆಯಿದು. ಸುಮಾರು ಹನ್ನೆರಡು ವರ್ಷಗಳ ಹಿಂದೆ,ಅದೊಂದು ಬೆಳಗಿನ ಜಾವ, ಆ ಬಸ್ ನಿಲ್ದಾಣದ ಬಳಿ ಶೌಚಕ್ಕೆಂದು ಹೋದ ಹರೆಯದ,ಚೆಂದದ ಹೆಣ್ಣೊಂದು ಶೌಚಾಲಯದ ಬಳಿ ಕುಸಿದುಬಿದ್ದು ಶವವಾಗುತ್ತಾಳೆ. ಅವಳು ಯಾರು? ಅವಳೇಕೆ ಅಲ್ಲಿಗೆ ಬಂದಳು? ಅದು ಹೃದಯಾಘಾತವೇ ಅಥವಾ ಕೊಲೆಯೇ? ಅವಳ ಬಳಿ ಇದ್ದ ಚಿನ್ನದ ಆಭರಣಗಳು ಏನಾದುವು? ಅನಂತರ ಶವವು ಏನಾಯಿತು? ಅವಳ ಜೊತೆ ಹಿಂದಿನ ರಾತ್ರಿ ಹೋಟೆಲ್ ಹನಿಮೂನ್ ನಲ್ಲಿ ಇದ್ದವರು ಯಾರು? ಮುಖದಲ್ಲಿ ಅತ್ಯಾಕರ್ಷಕ ಕಿರು ನಗುವನ್ನು,ತನಗೆ ಬೇಕಾದಾಗ, ಬೇಕಾದಂತೆ, ಬೇಕಾದವರೊಡನೆ ಮೂಡಿಸಿಕೊಳ್ಳಲು ಶಕ್ತನಾದ ಆ ಕೊಲೆಗಾರ ಯಾರು? ಅವಳನ್ನು ಕೊಲೆಮಾಡಿದ ಅಪರಾಧಿಯನ್ನು ಪತ್ತೇದಾರ ರಾಮನಾರಾಯಣ ಕೊಲೆಯಾದ ಕೆಲವೇ ಗಂಟೆಗಳೊಳಗೆ ಹೇಗೆ ಪತ್ತೆಮಾಡುತ್ತಾನೆ? ಈ ಎಲ್ಲ ಕುತೂಹಲಕಾರೀ ಅಂಶಗಳುಳ್ಳ ಪತ್ತೇದಾರಿ ಕಾದಂಬರಿ ಜಾಲದಲ್ಲಿ ಸಿಲುಕಿದ ಜಾಹ್ನವಿ. ಸಭ್ಯತೆಯ ಚೌಕಟ್ಟಿನೊಳಗೆ ರಚಿತಗೊಂಡ ಈ ಕೃತಿಯು ಕೆಳಮಧ್ಯಮವರ್ಗದ ಮಹಿಳೆಯರನ್ನು ವಿಕೃತ ಮನಸ್ಸಿನವರಿಂದ ಹೇಗೆ ಬಲೆಗೆ ಕೆಡವಲಾಗುತ್ತದೆ ಎಂಬ ಅಂಶವನ್ನು ಒಳಗೊಂಡಿದೆ. ವಿವಾಹದ ಪ್ರಾಯಕ್ಕೆ ಬರುವ ಮಹಿಳೆಯರು ಕೃಷಿಕರನ್ನು ಮದುವೆಯಾಗಲು ಬಯಸದೆ,ಸಣ್ಣ ಸಂಬಳಕ್ಕೆ ಪೇಟೆಯಲ್ಲಿ ಕೆಲಸಕ್ಕೆ ಸೇರುತ್ತಾರೆ,ಅಲ್ಲಿನ ಥಳುಕು ಜೀವನಕ್ಕೆ ಮಾರುಹೋಗುತ್ತಾರೆ.ಇಂತಹವರನ್ನು ಬಹಳ ಸುಲಭದಲ್ಲಿ ಮೋಸಮಾಡುವವರು ನಮ್ಮ ಸುತ್ತಲೂ ತುಂಬಿರುತ್ತಾರೆ. ಇವರಿಗೆಲ್ಲ ಈ ಕಥೆಯು ಎಚ್ಚರಿಕೆಯ ಗಂಟೆಯಾಗಬಹುದು. ನೈಜಘಟನೆಯನ್ನು ಆಧಾರವಾಗಿರಿಸಿಕೊಂಡು,ಅದಕ್ಕೆ ಕಲ್ಪನೆಯ ಉಡುಪು ತೊಡಿಸಿ,ಓದುಗರ ಮುಂದೆ ಇಡಲಾಗಿದೆ.
©2025 Book Brahma Private Limited.