About the Author

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು.

1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ಮುದ್ರಣಾಲಯದ ಮೇಲ್ವಿಚಾರಕ ಎಂದು ಲೋಕಶಿಕ್ಷಣ ಟ್ರಸ್ಟ್‌ ಸೇರಿದ ಅವರು  ನಂತರ 'ಕರ್ಮವೀರ'ದ ಉಪಸಂಪಾದಕ ಹಾಗೂ 'ಕಸ್ತೂರಿ'ಯ ಸಂಪಾದಕರಾದರು. ನಿವೃತ್ತಿಯ ನಂತರವೂ ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನ ಹಾಗೂ ಅಂಕಣ ಬರೆಯುವ ರೂಢಿ ಇಟ್ಟುಕೊಂಡಿದ್ದರು.

ಗದ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ ಅವರು  ಪತ್ರಿಕಾರಂಗದಲ್ಲಿನ ಅವಿರತ ದುಡಿಮೆಯ ಜೊತೆಗೆ ಕನ್ನಡಕ್ಕೊಂದು ಹೊಸ ಆಯಾಮ ಕಲ್ಪಿಸಿದರು. ತುಳು, ಸಂಸ್ಕೃತ, ಕನ್ನಡಗಳನ್ನು ಸರಿಯಾಗಿ ಅರ್ಥೈಸಿದ ಅಪರೂಪದ ಅಂಕಣಕಾರ. ಬಾಲ್ಯದ ದಿನಗಳಲ್ಲಿಯೇ ಕಾವ್ಯರಚನೆ ಮಾಡಿದ ಅವರು ಹರಟೆ, ವ್ಯಂಗ್ಯ, ವಿಡಂಬನಾತ್ಮಕ ಪ್ರಬಂಧ ಬರೆದಿದ್ದಾರೆ.  ತುಳು ಭಾಷೆಗಳಲ್ಲಿಯೂ ಬರೆದ ಹಿರಿಮೆ ಅವರದು.  ಒಂದೂವರೆ ಸಾವಿರಕ್ಕಿಂತ ಹೆಚ್ಚು ಹಾಸ್ಯ ಲೇಖನನು ಬರೆದ ಕೀರ್ತಿ ಅವರಿಗೆ ಸಲ್ಲುತ್ತದೆ.

'ಪ್ರಹಾರ', 'ಲೋಕದ ಡೊಂಕು', 'ವಿಪರೀತ' 'ವಕ್ರದೃಷ್ಟಿ' ಅವರ ನಗೆಬರಹ ಸಂಗ್ರಹಗಳು. ಆಚಾರ್‍ಯರು ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. 'ರಶಿಯಾದ ರಾಜ್ಯ ಕ್ರಾಂತಿ', 'ಸ್ವತಂತ್ರ ಭಾರತದ 25 ವರ್ಷಗಳು' ಎಂಬ ಎರಡು ರಾಜಕೀಯ ಪುಸ್ತಕ ಪ್ರಕಟಿಸಿದ ಅವರು 'ನವನೀರದ, ’ಕೆಲವು ಪದ್ಯಗಳು' ಎಂಬ ಕನ್ನಡ ಕಾವ್ಯ ಸಂಕಲನ ಪ್ರಕಟಿಸಿದ್ದಾರೆ. ಹಾಗೆಯೇ ’ಬಯ್ಯ ಮಲ್ಲಿಗೆ' ತುಳು ಕಾವ್ಯ ಸಂಕಲನ ಕೂಡ ಪ್ರಕಟಿಸಿದ್ದಾರೆ. 'ಪದಾರ್ಥ ಚಿಂತಾಮಣಿ' ಆಚಾರ್‍ಯರ ಮೇರುಕೃತಿ. ಕನ್ನಡದ ಪದ ಪರಂಪರೆಯನ್ನು ಕುರಿತು ಪರಾಮರ್ಶಿಸುವ ಅಪರೂಪದ ಮಹತ್ವದ ಗ್ರಂಥ.  ಮುಂಬಯಿ ಸರಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪದಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಅವರಿಗೆ ಸಂದಿದ್ದವು.  ರಾಮಯ್ಯ ಪ್ರಶಸ್ತಿ, ಗೋಯಂಕಾ ಪ್ರಶಸ್ತಿ ಪತ್ರಿಕೋದ್ಯಮದಲ್ಲಿಯ ಇವರ ಸಾಧನೆಗೆ ಸಂದಿವೆ.  ಸರಳ ಸಜ್ಜನಿಕೆಯ  ಆಚಾರ್ಯರು ’ಕಸ್ತೂರಿ' ಡೈಜೆಸ್ಟ್‌ ರೂಪಿಸಿದ ರೀತಿ ಅನನ್ಯ. ಅವರು 1992ರ ಮೇ ನಾಲ್ಕರಂದು ನಮ್ಮನ್ನು ಅಗಲಿದರು.

 

ಪಾ.ವೆಂ. ಆಚಾರ್ಯ

(06 Feb 1915-04 May 1992)

BY THE AUTHOR