ಲಾಂಗೂಲಾಚಾರ್ಯ ಕಾವ್ಯನಾಮದೊಂದಿಗೆ ಬರೆದ ಪಾ.ವೆಂ. ಆಚಾರ್ಯರ ಕೃತಿ-ಪದಾರ್ಥ ಚಿಂತಾಮಣಿ. ಒಂದು ಪದಕ್ಕೆ ಎರಡು ಮುಖಗಳಿರುತ್ತವೆ. ಅವು-ರೂಪ ಹಾಗೂ ಅರ್ಥ. ಭಾಷೆಯು ಪದಗಳ ಹೊರತಲ್ಲ. ಅದು ಸಾಮಾಜಿಕ ವ್ಯವಸ್ಥೆಯೂ ಹೌದು. ವಿವಿಧ ಭಾಷೆ ಹಾಗೂ ವಿವಿಧ ಸಾಮಾಜಿಕ ವ್ಯವಸ್ಥೆಗಳಿದ್ದರೂ ಅಲ್ಲಿ ಪದಗಳ ಕೊಡು-ಕೊಳ್ಳುವಿಕೆಯ ಪ್ರಕ್ರಿಯೆ ನಿರಂತರವಾಗಿರುತ್ತದೆ. ಪ್ರತಿ ಪದಕ್ಕೂ ಒಂದು ಚರಿತ್ರೆ, ಕಥೆ, ಐತಿಹ್ಯ ಇರುತ್ತದೆ. ಸಮಾಜ, ವಿಜ್ಞಾನ, ಭೂವಿಜ್ಞಾನ, ಇತಿಹಾಸ, ಮನಃಶಾಸ್ತ್ರ ಎಲ್ಲವೂ ಇದೆ. ಆದ್ದರಿಂದ, ಭಾಷೆಗೆ ಒಂದು ಸೊಗಸಿದೆ. ಪದ ಪ್ರಪಂಚದ ಇಂತಹ ಸ್ವಾರಸ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ‘ಪದಾರ್ಥ ಚಿಂತಾಮಣಿ’ ಒಂದು ಉತ್ತಮ ಹಾಗೂ ಮಾದರಿ ಆಕರ ಗ್ರಂಥವಾಗಿದೆ.
ಲೋಕಶಿಕ್ಷಣ ಗ್ರಂಥಮಾಲೆಯ ‘ಕಸ್ತೂರಿ’ ಮಾಸಿಕದಲ್ಲಿ ಪ್ರಕಟವಾಗುತ್ತಿದ್ದ ’ನಿಮ್ಮ ಶಬ್ದ ಭಾಂಡಾರ ಬೆಳೆಯಲಿ’ ಹಾಗೂ ‘ಪದಾರ್ಥ ಚಿಂತಾಮಣಿ’ ಹೆಸರಿನಲ್ಲಿ ಅವರು ಅಂಕಣ ಬರೆಯುತ್ತಿದ್ದರು. ಪದ ಮತ್ತು ಅರ್ಥಗಳ ಕುರಿತು ಇರುವ ಜಿಜ್ಞಾಸೆಯಾಗಿತ್ತು. ಕಸ್ತೂರಿಯಲ್ಲಿ ಸುಮಾರು 147ನೇ ಕಂತುಗಳ ವರೆಗೂ ಪದಾರ್ಥ ಚಿಂತಾಮಣಿ ಪ್ರಕಟಗೊಂಡಿತ್ತು. ಅದರ ಒಟ್ಟು ಸಾರ ಸಂಗ್ರಹವೇ ಈ ಕೃತಿ. ‘ಮೇಲುನೋಟುಕ್ಕೆ ಲಘುವಾದದೆಂದು ತೋರುವ, ಆಂತರ್‍ಯದಲ್ಲಿ ಬಹುಶ್ರುತ ಪಾಂಡಿತ್ಯವನ್ನು ಅಡಗಿಸಿಟ್ಟುಕೊಂಡಿರುವ ಈ ಪುಸ್ತಕದಿಂದ ಆಚಾರ್ಯರು ಕನ್ನಡದ ವರ್ಡ್ ಲೋರ್ (ಪದ ಪರಂಪರೆ) ಅಧ್ಯಯನಕ್ಕೆ ನಾಂದಿ ಹಾಡಿದ್ದಾರೆ’ ಎಂದು ಖ್ಯಾತ ಸಾಹಿತಿ ಹಾ.ಮಾ.ನಾ ಅವರು ಈ ಕೃತಿಗೆ ಬರೆದ ಮುನ್ನುಡಿಯಲ್ಲಿ ಪ್ರಶಂಸಿಸಿದ್ದಾರೆ.
ಈ ಕೃತಿಯು ಮೊದಲು 1991ರಲ್ಲಿ ನಂತರ ಕ್ರಮವಾಗಿ 1998, 2006, 2010 ರಲ್ಲಿ ಮುದ್ರಣ ಕಂಡಿದೆ. ಪ್ರಸ್ತುತ ಕೃತಿಯು 5ನೇ ಆವೃತ್ತಿಯಾಗಿದೆ.
©2024 Book Brahma Private Limited.