ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್ಯಾಂಕಿನೊಂದಿಗೆ ಎಂ.ಫಿಲ್ ಪದವಿ ಹಾಗೂ ಡಾ. ಎಂ.ಎಂ. ಕಲಬುರ್ಗಿಯವರ ಶೋಧಗಳು ಕುರಿತ ಸಂಶೋಧನ ಮಹಾಪ್ರಬಂಧ ರಚಿಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ, ನಂತರ ಬಸವಕಲ್ಯಾಣದ ಎಸ್.ಎಸ್. ಖೂಬಾ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡು, 1996 ಜೂನ್ ನಲ್ಲಿ ಕರ್ನಾಟಕ ಸರ್ಕಾರದಿಂದ ನೇಮಕಗೊಂಡರು. ಗುರುಮಠಕಲ್, ದೇವದುರ್ಗ, ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ಜೂನ್ 2012ರಿಂದ ಕಲಬುರ್ಗಿಯ ಸರಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.
ಕೃತಿಗಳು: ಆಯ್ದ ಹಳಗನ್ನಡ ಪಠ್ಯಗಳು, ಪ್ರಾಚೀನ ಕಾವ್ಯ ಸಂಗ್ರಹ, ನಡುಗನ್ನಡ ಕಾವ್ಯ ಸಂಗ್ರಹ, ಶಬ್ದಮಣಿದರ್ಪಣ ಸಂಗ್ರಹ, ಸರಳ ಛಂದಸ್ಸು, ಜನಪರ ಜಂಗಮ, ಅಪ್ಪಟ ಕನ್ನಡತಿ ಗ್ರಂಥಗಳು ಗುಲಬರ್ಗಾ ವಿಶ್ವವಿದ್ಯಾಲಯ, ಸೊಲ್ಲಾಪುರ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳ ಪದವಿ ವಿದ್ಯಾರ್ಥಿಗಳಿಗೆ ಪಠ್ಯಗ್ರಂಥ ಮತ್ತು ಸಾಂದರ್ಭಿಕ ಗ್ರಂಥಗಳಾಗಿವೆ. ಇವರ ಡಾ.ಎಂ.ಎಂ. ಕಲಬುರ್ಗಿಯವರ ಶೋಧಗಳು(ಮಾರ್ಗ ಸಂಪುಟಗಳ ಪರಾಮಾರ್ಶೆ) ಕೃತಿಯು ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗದಿಂದ ಪ್ರಕಟವಾಗಿದೆ. ಕಲ್ಯಾಣದರ್ಪಣ, ರಚನಾ, ದಾಸೋಹ, ಗುರುಕುಲ ದರ್ಶನ, ಶರಣ ಕಲ್ಯಾಣ, ಶಿವರುದ್ರ, ಕಲ್ಯಾಣ ಮಾರ್ಗ, ಕವಿಜನಮಾರ್ಗ, ನೆನಪೇ ನಂದಾದೀಪ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ.
ವಿವಿಧ ಶೈಕ್ಷಣಿಕ/ಸಾಂಸ್ಕೃತಿಕ ಸಂಘ/ಸಂಸ್ಥೆಗಳಲ್ಲಿ 300ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ. ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕಲಬುರ್ಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಕಲಬುರ್ಗಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಾಲ್ಲೂಕು ಮಟ್ಟದ ಜಾಗೃತಿ ಸಮಿತಿ ಸದಸ್ಯರಾಗಿದ್ದರು. ಕಲಬುರಗಿ ತಾಲ್ಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಲಭಿಸಿದೆ. ರಚನಾ ಎಂಬ ಅಂತಾರಾಷ್ಟ್ರೀಯ ದ್ವೈಭಾಷಿಕ ಅರ್ಧವಾರ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ಕವಿಮಾರ್ಗ ಎಂಬ ಕನ್ನಡ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ 2020ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಲಭಿಸಿದೆ.