ಕನ್ನಡ ಕಾವ್ಯ ಸಂಚಯ-ಕನ್ನಡದ ಮಹತ್ವದ ಕಾವ್ಯಗಳನ್ನು ಅವಲೋಕನ ಮಾಡಿರುವ ಲೇಖನಗಳ ಸಂಗ್ರಹ ಕೃತಿ. ಡಾ. ಕಲ್ಯಾಣರಾವ್ ಜಿ. ಪಾಟೀಲರು ಸಂಪಾದಕರು. ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ನೇರ ನೇಮಕಾತಿಗೆ ನಿಗದಿಪಡಿಸಿದ ಪಠ್ಯಕೃತಿಗಳನ್ನು ಸಮಗ್ರವಾಗಿ ವಿಶ್ಲೇಷಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಹೆಸರಾಂತ ಕನ್ನಡ ಪ್ರಾಧ್ಯಾಪಕರು ಹನ್ನೆರಡು ಕನ್ನಡ ಕಾವ್ಯಗಳನ್ನು ಕುರಿತಾಗಿ ಬರೆದ ಲೇಖನಗಳು ಇಲ್ಲಿವೆ. ಈ ಲೇಖನಗಳು ಸ್ಪರ್ಧಾರ್ಥಿಗಳಿಗಷ್ಟೆ ಅಲ್ಲದೇ ಶೈಕ್ಷಣಿಕ ವಲಯದ ಪ್ರತಿಯೊಬ್ಬ ಕಾವ್ಯಾಭ್ಯಾಸಿಗೂ, ಸಹೃದಯರಿಗೂ ನೆರವಾಗುತ್ತವೆ.
ಡಾ. ಕಲ್ಯಾಣರಾವ ಜಿ. ಪಾಟೀಲರ ‘ಕನ್ನಡ ಕಾವ್ಯ ಪರಂಪರೆ ಮತ್ತು ಪ್ರಸ್ತುತತೆ’, ಹೊಸಗನ್ನಡ ಮತ್ತು ನಡುಗನ್ನಡ ಕಾವ್ಯಗಳಲ್ಲಿನ ಪಠ್ಯ ಭಾಗಗಳನ್ನು ವಿವರಿಸಿದೆ. ಇವರದ್ದೇ ಮತ್ತೊಂದು ಬರಹ ಆದಿಪುರಾಣದಲ್ಲಿನ ‘ಭರತ ಬಾಹುಬಲಿ ಪ್ರಸಂಗ’ವು ಸಂಪತ್ತು, ಅಧಿಕಾರ, ಪ್ರತಿಷ್ಠೆಗಳೇ ಸಂಘರ್ಷಕ್ಕೆ ಕಾರಣಗಳು. ಅವುಗಳ ಬೆನ್ನುಹತ್ತಿ ಹೋದವರಿಗೆ ದುರಂತ ಕಟ್ಟಿಟ್ಟ ಬುತ್ತಿ. ಅವುಗಳ ನಿಷ್ಫಲತೆಯನ್ನು ಸಾರುವುದು, ತನ್ಮೂಲಕ ತ್ಯಾಗ, ವೈರಾಗ್ಯ, ನಿರಾಡಂಬರ, ಸಮಾಧಾನ, ಪ್ರಸನ್ನತೆ ಯೊಂದಿಗೆ ಕೇವಲಜ್ಞಾನ ಸಂಪಾದಿಸುವುದು ಜೈನ ಆಗಮಿಕ ಕಾವ್ಯಗಳ ಪ್ರಮುಖ ಆಶಯ ಎನ್ನವುದನ್ನು ಮನದಟ್ಟು ಮಾಡಿಕೊಡುತ್ತದೆ. ಡಾ. ಲಕ್ಷ್ಮಿಕಾಂತ ಪಂಚಾಳ ಅವರ ಸಾಹಸಭೀಮ ವಿಜಯದಲ್ಲಿನ ‘ದುರ್ಯೋಧನ ವಿಲಾಪಂ’ ಪ್ರಸಂಗದ ವಿಶ್ಲೇಷಣೆಯೂ ಇದೆ. ಡಾ. ಸುರೆಂದ್ರಕುಮಾರ ಕೆರಮಗಿ ಅವರ ಕರ್ಣಾಟಕ ಕಾದಂಬರಿ ಕಾವ್ಯದಲ್ಲಿನ ‘ವೈಶಾಂಪಾಯನ ವೃತ್ತಾಂತ’, ವಚನ ಕಮ್ಮಟದಲ್ಲಿ ‘ಆಧ್ಯಾತ್ಮದ ಅನುಸಂಧಾನ’ ಮತ್ತು ‘ಸರ್ವಜ್ಞನ ವಚನ’ಗಳ ವಿಶ್ಲೇಷಣೆಗಳಿವೆ. ಡಾ. ಶಾಂತಪ್ಪ ಡಂಬಳ ಅವರ ಯಶೋಧರ ಚರಿತೆಯಲ್ಲಿನ ‘ವಸಂತ ವರ್ಣನೆ’ ಮತ್ತು ‘ಅಮೃತಮತಿಯ ಪ್ರಣಯ ಪ್ರಸಂಗ’ ದ ವಿಶ್ಲೇಷಣೆಯೂ ಇದೆ. ವಡ್ಡಾರಾಧನೆ ಕೃತಿಯಲ್ಲಿನ ‘ಭದ್ರಬಾಹು ಭಟ್ಟಾರರ ಕಥೆ’ ಮತ್ತು ‘ಚಾಣಕ್ಯರಿಸಿಯ ಕಥೆ’ಗಳ ಸಾರ, ಶಿಲ್ಪವಿನ್ಯಾಸ, ಸಂದೇಶಗಳನ್ನು ಕುರಿತು ಡಾ. ಶಾರದಾದೇವಿ. ಎಸ್. ಜಾಧವ ಬರೆದಿದ್ದಾರೆ. ಡಾ. ಶಿವಗಂಗಾ ಬಿಲಗುಂದಿ ಮತ್ತು ಶಿವಶರಣಪ್ಪ ಕೋಡ್ಲಿ ಅವರ ‘ಉಡುತಡಿಯ ಮಹಾದೇವಿಯರ ರಗಳೆ’ ಕುರಿತ ಲೇಖನವಿದೆ. ಶೈಲಜಾ ಕೊಪ್ಪರ ಅವರ ಕರ್ಣಾಟಕ ಭಾರತ ಕಥಾಮಂಜರಿಯಲ್ಲಿನ ‘ವಿರಾಟ ಪರ್ವ’ದ ವಿಶ್ಲೇಷಣೆಯೂ ಇದೆ. ಡಾ. ನಾಗಪ್ಪ ಗೋಗಿ ಅವರ ‘ಕಿರುವೆರಳ ಸಟೆ ಪ್ರಸಂಗ’ ಮತ್ತು ಡಾ. ಸುರೇಶ ಎಲ್. ಜಾಧವ ಅವರ ದಾಸ ಸಾಹಿತ್ಯ ಸೌರಭ’ದ ಕೃತಿಗಳ ಕುರಿತಾದ ಲೇಖನಗಳು ಇದೆ. ಇಲ್ಲಿಯ ಲೇಖನಗಳು ಸ್ಪರ್ಧಾರ್ಥಿಗಳಿಗೆ ಅತ್ಯುಪಯುಕ್ತವಾಗಿದೆ.
©2024 Book Brahma Private Limited.