ಕನ್ನಡ ಗ್ರಂಥಸ್ಥ ಭಾಷೆಯ ಸ್ವರೂಪ, ವ್ಯವಹಾರಿಕ ಸ್ವಭಾವದ ರೂಪಗಳನ್ನು ವೈಜ್ಞಾನಿಕವಾಗಿ ನಿರೂಪಿಸಿರುವ ಕೃತಿ ‘ಶಬ್ದಮಣಿದರ್ಪಣ’ವು ವ್ಯಾಕರಣಶಾಸ್ತ್ರವನ್ನು ತಿಳಿಸುವ ಅಧಿಕೃತ ಕೃತಿ. ಡಾ. ಕಲ್ಯಾಣರಾವ್ ಪಾಟೀಲರು ಸಂಪಾದಿಸಿದ್ದಾರೆ. ಶುದ್ಧ ಶಬ್ದರಚನೆ, ನಿರ್ದಿಷ್ಟ ವಾಕ್ಯ ನಿರೂಪಣೆ, ಸ್ಪಷ್ಟ ಉಚ್ಚಾರಣೆ, ಖಚಿತ ಅರ್ಥ ವಿವರಣೆಯೊಂದಿಗೆ ವಾಗರ್ಥಗಳನ್ನು ದಿಗ್ದರ್ಶಿಸುವುದೇ ಈ ಶಾಸ್ತ್ರದ ಮೂಲ ಆಶಯ. ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮನೋಸ್ಥಿತಿಯನ್ನು ಗಮನದಲ್ಲಿಟ್ಟು ಕೇಶಿರಾಜನ ‘ಶಬ್ದಮಣಿದರ್ಪಣ ಸಂಗ್ರಹ’ವನ್ನು ‘ಶಿಕ್ಷಕ ಮತ್ತು ವಿದ್ಯಾರ್ಥಿಸ್ನೇಹಿ’ಯನ್ನಾಗಿ ರೂಪಿಸಿದ್ದಾರೆ. 22 ಪುಟಗಳ ದರ್ಪಣಾವಲೋಕನದಲ್ಲಿ ಕೇಶಿರಾಜನ ಕಾಲ, ದೇಶ, ಪರಿಸರವನ್ನು, ಕನ್ನಡದ ಭಾಷಿಕ ಸ್ಥಿತಿಗತಿಯನ್ನು ನಿಷ್ಕರ್ಷಿಸುವ ದಿಶೆಯಲ್ಲಿ ನಿರ್ಣಯಿಕ ಜವಾಬ್ದಾರಿ ನಿರ್ವಹಿಸಿದ್ದಾರೆ. ಶಬ್ದಮಣಿದರ್ಪಣದ ಸ್ವರೂಪ, ವೈಶಿಷ್ಟ್ಯವನ್ನು ಪರಿಷ್ಕರಿಸುವಾಗ ಪೂರ್ವಸೂರಿಗಳ ಅಭಿಪ್ರಾಯಗಳನ್ನು ವಿಶ್ಲೇಷಿಸಿ ವಿಷಯದ ಖಚಿತತೆಯನ್ನು ಓದುಗರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೇಶಿರಾಜನು ಪ್ರಸ್ತಾಪಿಸಿದ ಕನ್ನಡದ ಅಸಾಧಾರಣ ಲಕ್ಷಣಗಳನ್ನು, ಪ್ರಬಂಧ ರೂಪಿಯ ಮಹತ್ವದ ವಿಷಯಗಳನ್ನು, ಟಿಪ್ಪಣಿ ರೂಪದ ಸಂಕ್ಷಿಪ್ತಾಂಶಗಳ ಮುಖ್ಯಾಂಶಗಳನ್ನು ದಾಖಲಿಸಿದ್ದಾರೆ. ಕೇಶಿರಾಜನು ವಿವರಿಸಿದ ಶಬ್ದಮಣಿದರ್ಪಣದಲ್ಲಿನ ಮಹತ್ವದ ವ್ಯಾಕರಣಾಂಶಗಳೆಲ್ಲ ಗಮನದಲ್ಲಿ ಇಟ್ಟುಕೊಂಡು ಒಂದುನೂರು ಸೂತ್ರಗಳಲ್ಲಿಯೇ ಅವು ಹೊಂದುವಂತೆ ಆಯ್ಕೆ ಮಾಡಿದ್ದಾರೆ. ಕ್ರೋಢಿಕರಿಸಿದ ಸೂತ್ರಗಳ ಸಂಕ್ಷಿಪ್ತ ವಿವರಣೆಗಳಿವೆ. ಆಯಾ ಸೂತ್ರದ ವಿಶೇಷತೆಯನ್ನು ದಾಖಲಿಸಿದ್ದಾರೆ. ಸಂಪಾದನೆಗೆ ಆಯ್ದುಕೊಂಡಿರುವ ಸೂತ್ರಗಳನ್ನು ಅರ್ಥ ವಿಶ್ಲೇಷಣೆಯ ಸಂದರ್ಭದಲ್ಲಿ ಕೇಶಿರಾಜನ ‘ವೃತ್ತಿ’; ನಿಟ್ಟೂರು ನಂಜಯ್ಯನ ‘ಟೀಕು’ಗಳನ್ನು ಯಥಾವತ್ತಾಗಿ ಸ್ವೀಕರಿಸಿದ್ದಾರೆ. ಡಾ. ಎಂ.ಎಂ. ಕಲಬುರ್ಗಿಯವರ ಸರಳಾನುವಾದ ಮತ್ತು ತ.ಸು ಶಾಮರಾಯರ ತಾತ್ಪರ್ಯಗಳ ವಿವರಣೆ ಇದೆ.
ಪ್ರಸ್ತುತ ಸಂಗ್ರಹದಲ್ಲಿ ನಾಲ್ಕು ಘಟಕಗಳಿದ್ದು, ಮೊದಲ ಘಟಕದ ಪೀಠಿಕೆಯಲ್ಲಿ ಕವಿ-ಕೃತಿ ಪರಿಚಯ, ಹಳಗನ್ನಡ ನಡುಗನ್ನಡ ಭಾಷೆಯ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಸಹಾಯಕ. 2ನೇ ಘಟಕದಲ್ಲಿ ಸಂಧಿ, ಸ್ವರೂಪ ಮತ್ತು ಅದರ ಪ್ರಕಾರಗಳನ್ನು ಸೋದಾರಣವಾಗಿ ನಿರೂಪಿಸಿದ್ದಾರೆ. 3ನೇ ಘಟಕದಲ್ಲಿ ನಾಮಲಿಂಗ, ಸಮಸಂಸ್ಕೃತ, ಲಿಂಗವಿವಕ್ಷೆ ನಾಮವಿಭಕ್ತಿ ಪ್ರತ್ಯಯಗಳನ್ನು ಸಮಾಲೋಚಿಸಿದ್ದಾರೆ. 4ನೇ ಘಟಕದಲ್ಲಿ ಸಮಾಸಪ್ರಕರಣ, ಆಖ್ಯಾತ, ವಿಭಕ್ತಿ ಪ್ರತ್ಯಯ, ಸತಿಸಪ್ತಮಿ, ಕವಿ-ಕೃತಿಯ ವಿಶೇಷತೆಯನ್ನು ದಾಖಲಿಸಿದ್ದಾರೆ. ಅನುಬಂಧದಲ್ಲಿ ಸಂಪಾದಕರ ಸಂಕ್ಷಿಪ್ತ ಪರಿಚಯ, ವಿಷಯಾನುಕ್ರಮಣಿಕೆ, ಸೂತ್ರಾನುಕ್ರಮಣಿಕೆ ಮತ್ತು ಆಕರ ಗ್ರಂಥಸೂಚಿ ನೀಡಲಾಗಿದೆ. 2017ರಲ್ಲಿ ಗುಲಬರ್ಗಾ ವಿವಿಯ ಪ್ರಸಾರಾಂಗದಿಂದಲೂ ಈ ಕೃತಿ ಪ್ರಕಟಣೆಯಾಗಿತ್ತು.
©2024 Book Brahma Private Limited.