`ಕರುನಾಡು’ ಮನು ವಿ ದೇವದೇವನ್ ಅವರ ಕರ್ನಾಟಕ ಇತಿಹಾಸ ಕುರಿತ ಬರಹಗಳಾಗಿವೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಕರ್ನಾಟಕದ ಇತಿಹಾಸ ಕುರಿತ ಈ ಲೇಖನ ಸಂಗ್ರಹದೊಳಗೆ ಐದು ವಿಭಿನ್ನ ಬರಹಗಳಿವೆ. ಮೊದಲನೆಯದು ಪಂಪ ಮತ್ತು ವಚನಗಳ ನಡುವಿನ ಕಾಲಧರ್ಮದ ಮತ್ತು ಕಾವ್ಯಧರ್ಮದ ವೈಷಮ್ಯಗಳನ್ನು ಕುರಿತ ತಾತ್ವಿಕ ಜಿಜ್ಞಾಸೆ. ಇದು ಕನ್ನಡ ಸಾಹಿತ್ಯದ ಚರ್ಚೆಗೊಂದು ಹೊಸ ಸೇರ್ಪಡೆ. ಎರಡನೆಯ ಲೇಖನವು, ಈಗಿನ ಅಭಿಪ್ರಾಯಗಳು ಸೂಚಿಸುವಂತೆ, ವಚನ ಸಾಹಿತ್ಯವು ನಿಜವಾಗಿಯೂ ಛಂದಸ್ಸಿನಿಂದ ಮುಕ್ತವಾದ ರಚನೆಗಳು ಎಂಬ ಸ್ಥಾಪಿತ ನಂಬಿಕೆಯನ್ನು ಸಾಧಾರವಾಗಿ ಪ್ರಶ್ನಿಸುವಂಥದು. ಮೂರನೆಯ ಲೇಖನ ಕರ್ನಾಟಕದ ಇತಿಹಾಸದೊಳಗೆ ಧಾರ್ಮಿಕ ಸಂರಚನೆಗಳೂ ದೇವಾಲಯಗಳೂ ಬೆಳೆದುಬಂದ ಕಾಲವನ್ನು ಕುರಿತದ್ದಾಗಿದ್ದರೆ, ನಾಲ್ಕನೆಯ ಲೇಖನ ಇನ್ನೂ ಪ್ರಾಚೀನ ಕಾಲಕ್ಕೆ ಹೋಗಿ ಆಗಿನ ನೀರಾವರಿ ಮತ್ತು ಭೌಗೋಲಿಕ ಎಲ್ಲೆಗಳ ಸಂಬಂಧವನ್ನು ಪರಿಶೀಲಿಸುತ್ತದೆ. ಕಡೆಯ ಲೇಖನದೊಳಗೆ 12ನೆಯ ಶತಮಾನದಲ್ಲಿ ಮಂಗಳೂರಿನಲ್ಲಿ ವಾಸಿಸಿದ್ದ ಒಬ್ಬ ಯಹೂದಿ ವ್ಯಾಪಾರಿಯನ್ನು ಕುರಿತ ಒಂದು ಸ್ವಾರಸ್ಯದ ಚಿತ್ರವಿದೆ. ಇವೆಲ್ಲವೂ ಬಿಡಿ ಲೇಖನಗಳೇ ಆದರೂ ಕನ್ನಡ ನಾಡಿನ ಇತಿಹಾಸವನ್ನು ಹೊಸ ಕಣ್ಣುಗಳಿಂದ ಹುಡುಕುವ, ಹೊಸ ಪುರಾವೆಗಳಿಂದ ಗ್ರಹೀತ ಸತ್ಯಗಳನ್ನು ಪ್ರಶ್ನಿಸುವ ವಿಭಿನ್ನ ಆಲೋಚನಾ ಪ್ರಸ್ಥಾನವೊಂದಕ್ಕೆ ನಮ್ಮನ್ನು ಕರೆದೊಯ್ಯುವಂತಿವೆ.
©2024 Book Brahma Private Limited.