‘ಉತ್ತರ ಕನ್ನಡ ಕರಾವಳಿಯ ಜನಪದ ಕತೆಗಳು’ ಕೃತಿಯು ಶಾಂತಿ ನಾಯಕ ಅವರ ಸಂಪಾದಿತ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಕತೆಗಳಾಗಿವೆ. ಕೃತಿಯ ಕುರಿತು ಅಂಬಳಿಕೆ ಹಿರಿಯಣ್ಣ ಅವರು, ಕನ್ನಡ ನಾಡು ಜನಪದ ಸಂಸ್ಕೃತಿಯ ತವರೂರು. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಪ್ರಾದೇಶಿಕ ಅನನ್ಯತೆ, ಅಸ್ಮಿತೆಗಳು ಇದ್ದೇ ಇರುತ್ತವೆ. ಅಲ್ಲಿ ವಾಸಿಸುವ ಪ್ರತಿಯೊಂದು ಸಮುದಾಯವು ವಿಶಿಷ್ಟ ಜೀವನ ಕ್ರಮಗಳನ್ನು ರೂಢಿಸಿಕೊಂಡಿರುತ್ತದೆ. ವಿವಿಧ ಬಗೆಯ ಆಹಾರ-ಪಾನೀಯ, ಉಡುಗೆ-ತೊಡುಗೆ, ಕ್ರೀಡೆ, ನಂಬಿಕೆ, ರೂಢಿ ಆಚರಣೆ, ಸಂಪ್ರದಾಯಗಳು ಅಸ್ತಿತ್ವದಲ್ಲಿರುತ್ತವೆ. ಜೊತೆಗೆ, ಆ ಸಮುದಾಯ ಜ್ಞಾನ ಪರಂಪರೆಯು ಕಿಯಾ ರೂಪದಲ್ಲಿ ಮತ್ತು ಮೌಖಿಕ ರೂಪದಲ್ಲಿ ಜಾರಿಯಲ್ಲಿರುತ್ತವೆ. ಅವುಗಳನ್ನು ಶೋಧಿಸುವ ಕಾರ್ಯ ನಡೆಯಬೇಕಾಗುತ್ತದೆ. ಅಲ್ಲದೆ, ಪರಂಪರೆ ಜ್ಞಾನಗಳಲ್ಲಿ ಇಂದಿನ ವರ್ತಮಾನಕ್ಕೆ ಬೇಕಾದ ಮೂಲ ಆಕರಗಳು ಅಡಕವಾಗಿರುತ್ತವೆ. ಅವನ್ನು ಗುರುತಿಸುವುದು ಮತ್ತು ಸಂವರ್ಧಿಸುವುದು ಮುಖ್ಯವಾಗಿ ಆಗಬೇಕಾದ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ, ಜನಪದ ಕತೆಗಳು ಬದುಕಿನ ಮೌಲ್ಯಗಳನ್ನು, ಆದರ್ಶಗಳನ್ನು ಸ್ಥಳೀಯ ಸಂಸ್ಕೃತಿಯ ಮೂಲಕ ವ್ಯಕ್ತಗೊಳ್ಳುವ ಅಮೂಲ್ಯ ಸರಕು ಎನಿಸುತ್ತವೆ. ಈ ನಿಟ್ಟಿನಲ್ಲಿ, ಅಪರೂಪವೆನಿಸುವ 'ಉತ್ತರ ಕನ್ನಡ ಕರಾವಳಿ ಜನಪದ ಕತೆಗಳು' ಕೃತಿಯಲ್ಲಿ ಹೊನ್ನಾವರ ಪರಿಸರದಲ್ಲಿರುವ ಹವ್ಯಕರ ಮಕ್ಕಳಿಂದ ಕತೆಗಳು ಸಂಗ್ರಹಗೊಂಡಿದ್ದು ಗಮನಾರ್ಹ. ಸಾಮಾಜಿಕ ಉಪಭಾಷೆಯೊಂದರಲ್ಲಿ ಅಭಿವ್ಯಕ್ತಗೊಂಡ ಇಲ್ಲಿನ ಬಹುತೇಕ ಕತೆಗಳು ಭಾಷಿಕ ಅಧ್ಯಯನಕ್ಕೆ ಆಕರವಾಗಬಲ್ಲವು ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.