‘ಜನಪದ ರಮ್ಯ ಕಥಾನಕಗಳು’ ಕೃಷ್ಣಮೂರ್ತಿ ಹನೂರು ಅವರ ಕೃತಿ. ಜನಪದವನ್ನು ದಾಖಲಿಸುವ ಪ್ರಕ್ರಿಯೆಯಲ್ಲಿ ರಚಿತವಾಗಿರುವ ಈ ಕೃತಿಯಲ್ಲಿ ಚಿತ್ರದುರ್ಗದ ಪ್ರಾಂತೀಯ ಭಾಷೆಯಲ್ಲಿ ಆರು ಕತೆಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿ ಜನಪದರ ನುಡಿಗಟ್ಟುಗಳನ್ನೇ ಬಳಸಿರುವುದು ಈ ಕೃತಿಯ ವಿಶೇಷತೆ. ಜನಪದರ ನಂಬಿಕೆಗಳು ಕತೆಗಳ ಮೂಲಕವೂ ಮೌಲ್ಯ ಪಡೆಯುತ್ತವೆ. ಅಂತಹ ಕತೆಗಳನ್ನು ಮೂಲ ನುಡಿಗಟ್ಟುಗಳ ಮೂಲಕವೇ ದಾಖಲಿಸುವ ಕಾರ್ಯವನ್ನು ಲೇಖಕ ಕೃಷ್ಣಮೂರ್ತಿ ಹನೂರು ಮಾಡಿದ್ದಾರೆ.
(ಹೊಸತು, ನವೆಂಬರ್ 2014, ಪುಸ್ತಕದ ಪರಿಚಯ)
ಜಾನಪದ ರಮ್ಯಲೋಕವು ನೆಲದ ಒಡಲಿನಿಂದ ಚಿಗುರೊಡೆದು ಎದ್ದು ಬಂದ ನೈಜ ಸಾಹಿತ್ಯ ಅಲ್ಲಿ ಸಾಹಿತ್ಯ ಬೇರೆ ಅಲ್ಲ, ಜನರ ಬದುಕು ಬೇರೆ ಅಲ್ಲ. ಜನಪದ ಸಂಸ್ಕೃತಿಯ ತಾಯಿ ಬೇರೇ ಮುಂದಿನ ಬೆಳವಣಿಗೆಯ ಎಲ್ಲ ರೆಂಬೆಕೊಂಬೆಗಳು ಹರಡಲು ಮೂಲಾಧಾರ, ಅಲ್ಲಿ ಕಥೆಗಳು ಪುಂಖಾನುಪ್ಪಂಖ ವಾಗಿ ಸೃಷ್ಟಿಯಾಗಿ ಜಗತ್ತಿನ ಮೂಲೆ ಮೂಲೆಗೆ ತಲುಪಿ ಭೂಮಂಡಲದ ನೋವು-ನಲಿದೆಲ್ಲ ಒಂದೇ ಎಂದು ಸಾರುತ್ತವೆ. ಆಯಾ ದೇಶ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಕಥೆಗಳು ಯಾವುದೇ ಮುಚ್ಚುಮರೆ ಇಲ್ಲದೆ ಪಾರದರ್ಶಕ ಗುಣ ಹೊಂದಿವೆ. ಜನಪದ ಭಾಷೆಯಾದ ಆಡುಮಾತಿನ ಶೈಲಿಯಲ್ಲಿದ್ದರಂತೂ ಕೇಳುಗನ – ಓದುಗನ ಅಂತರಾಳಕ್ಕಿಳಿಯುತ್ತವೆ. ಅವು ಜನಹಿತವಾದ ನೀತಿಗಳನ್ನೊಳಗೊಂಡಿರುತ್ತವೆ. ಸತ್ಯಕ್ಕೆ ಜಯ, ದುಷ್ಟರಿಗೆ ದುಷ್ಟರಿಗೆ ವಿನಾಶ ಎಂಬ ತತ್ವವೂ ಅಲ್ಲಿರುತ್ತದೆ. ಇಲ್ಲಿನ ಐದು ಕಥೆಗಳೂ ಅಷ್ಟೆ, ರಾಜ- ಮಹಾರಾಜ, ರಾಣಿ ಮಹಾರಾಣಿ ಯಾರ ಆಗಲಿ ತನ್ನ ಕರ್ತವ್ಯ ಮರೆತರೆ ಏನಾಗುವುದೆಂದು ಎಚ್ಚರಿಸುತ್ತವೆ. ಕಥೆಗಳೂ ತುಂಬ ಪ್ರಾಚೀನವಾಗಿದ್ದು ಕೆಲವು ಇಂದಿನ ಸನ್ನಿವೇಶಕ್ಕೆ ಹೊಂದುವುದಿಲ್ಲವೆಂಬುದನ್ನು ನಾವು ಮರೆಯಬಾರದು. ಅವನ್ನು ನಾವು ರಮ್ಯ-ಹೆಣೆಯಲ್ಪಟ್ಟ ಕಥೆಗಳೆಂದು ಪರಿಗಣಿಸಬೇಕು, ನೀತಿ ಹೇಳುವ ಭರದಲ್ಲಿ ಅವೈಜ್ಞಾನಿಕತೆಯನ್ನೂ ಗುರುತಿಸಬೇಕು. ಅಂಥ ಆರು ಕಥೆಗಳು ಇಲ್ಲಿವೆ.
©2025 Book Brahma Private Limited.