ಕರ್ನಾಟಕದ ಕರಾವಳಿ ಪ್ರದೇಶದ ಅನನ್ಯ ಕಲೆ ಯಕ್ಷಗಾನ. ಯಕ್ಷಗಾನ ಎನ್ನುವ ಪದವೇ ಸೂಚಿಸುವ ಹಾಗೆ ಯಕ್ಷಲೋಕದ ಸಂಗೀತ- ಸಾಹಿತ್ಯ ಯಾನ. ಜಾನಪದೀಯ ಅಂಶಗಳನ್ನು ಒಳಗೊಂಡಿರುವ ಈ ಪ್ರದರ್ಶನ ಕಲೆಯಲ್ಲಿ ಭಾಷೆ- ಸಾಹಿತ್ಯ- ಸಂಗೀತಗಳು ಮಿಳಿತಗೊಂಡಿವೆ. ನೋಡುಗನಿಗೆ ಪ್ರಿಯವಾಗುವ ವೇಷದ ಕಾರಣದಿಂದಾಗಿ ಅನನ್ಯ ದೃಶ್ಯಲೋಕ ಕೂಡ ವೇದಿಕೆಯಲ್ಲಿ ಸೃಷ್ಟಿಯಾಗುತ್ತದೆ. ಯಕ್ಷಗಾನ ಹಿಂದಿನ- ಇಂದಿನ ವೈಭವಕ್ಕೆ ಕಾರಣರಾದವರು ಹಲವಾರು ಜನ. ಯಕ್ಷಲೋಕವನ್ನು ಕಟ್ಟಿ ಬೆಳೆಸಿದ ಹಾಗೆಯೇ ತಾವೂ ಬೆಳೆದು ಅನನ್ಯ ಸಾಧನೆ ಮಾಡಿದ ನಟರು- ಕಲಾವಿದರು- ವಿದ್ವಾಂಸರು- ಹಿಮ್ಮೇಳ- ಭಾಗವತರು ಅಸಂಖ್ಯ.
ಯಕ್ಷಲೋಕದ ಬೆಳವಣಿಗೆಗೆ ಕಾರಣರಾದ ಹಾಗೂ ತಮ್ಮದೇ ಛಾಪು ಮೂಡಿಸಿದ ಪ್ರಮುಖರನ್ನು ನೆನಪಿಸುವ- ಅವರ ಸಾಧನೆಯನ್ನ ಅಕ್ಕರದಿ ದಾಖಲಿಸುವ ವಿಶಿಷ್ಟ ಪ್ರಯತ್ನವನ್ನು ನಾರಾಯಣ ಕಾರಂತ ಪೆರಾಜೆಯವರು ’ಸುಮನಸ’ ಪುಸ್ತಕದಲ್ಲಿ ಮಾಡಿದ್ದಾರೆ. ಪುಸ್ತಕದ ಬರಹಗಳನ್ನು ಸ್ಮೃತಿ ಮತ್ತು ಸಮಾಹಿತ ಎಂದು ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ.
ತಮ್ಮ ಅದ್ಭುತ ಅನನ್ಯ ಅಭಿನಯ ಮತ್ತು ಪ್ರದರ್ಶಕ ಗುಣದಿಂದ ಗಮನ ಸೆಳೆಯುತ್ತಿದ್ದ ಚಿಟ್ಟಾಣಿ, ಅರ್ಥದಾರಿಕೆಗೆ ಹೆಸರಾದ ಶೇಣಿ ಗೋಪಾಲಕೃಷ್ಣ ಭಟ್, ’ರಾಕ್ಷಸ ಪಾತ್ರವಾದರೇನು? ಆ ಪಾತ್ರಕ್ಕೂ ಮನಸ್ಸಿದೆ, ಭಾವ ಇದೆ. ಭಾವನೆಗಳಿವೆ. ಅದನ್ನೆಲ್ಲ ಮಾತಿನಲ್ಲಿ ವ್ಯಕ್ತಪಡಿಸಬೇಕು ’ ಎಂದು ಹೇಳುತ್ತಿದ್ದ ಬಣ್ಣದ ಮಾಲಿಂಗ ಅವರಂತಹ ಸ್ಟಾರ್ ಗಳಿಗೆ ಮಾತ್ರ ಈ ಪುಸ್ತಕ ಸೀಮಿತವಾಗಿಲ್ಲ. ಹಿನ್ನೆಲೆಯಲ್ಲಿದ್ದು ಯಕ್ಷಲೋಕ ಕಟ್ಟಿದ ಹಲವು ಮಹನೀಯರ ಸಾಧನೆಯನ್ನು ಈ ಪುಸ್ತಕ ದಾಖಲಿಸುತ್ತದೆ. ದಾಖಲೀಕರಣಕ್ಕೆ ನೀಡಿರುವ ಮಹತ್ವವು ಭಾಷಿಕ ಸ್ವರೂಪವನ್ನು ತೆಳುವಾಗಿಸಿದೆ. ನುಡಿಚಿತ್ರಗಳಾಗಿ ಮಾತ್ರ ಉಳಿದು ಅದರಾಚೆಗೆ ಓದುಗನನ್ನು ಕರೆದೊಯ್ಯುವುದು ಸಾಧ್ಯವಾಗದೇ ಇರುವುದು ಮಿತಿ. ಸರಳವಾದ ಬರಹಗಳ ಓದಿನ ಮುದ ನೀಡುತ್ತವೆ.
©2024 Book Brahma Private Limited.