ಲೇಖಕ ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರ ಕೃತಿ ‘ಯಕ್ಷಗಾನ ಕವಿಕಾವ್ಯವಿಚಾರ’. ಈ ಕೃತಿಯಲ್ಲಿ ಮೂವತ್ತು ಯಕ್ಷಗಾನ ಕವಿಗಳ ಕಾವ್ಯವಿಚಾರ ಚರ್ಚೆಯನ್ನು ಮಾಡಲಾಗಿದೆ. ಪ್ರಕಾಶಕರ ಮಾತು ಎಂಬ ಬರಹದಡಿಯಲ್ಲಿ ಪ್ರೊ| ಹೆರಂಜೆ ಕೃಷ್ಣ ಭಟ್ಟರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ತಮ್ಮ ‘ಲೇಖಕನ ಮಾತು’ ಬರಹದಡಿಯಲ್ಲಿ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ವಿದ್ವಾಂಸರೂ ಪ್ರಾಧ್ಯಾಪಕರೂ ಆದ ಪಾದೇಕಲ್ಲು ವಿಷ್ಣು ಭಟ್ಟರು. ‘ಯಕ್ಷಗಾನ ಕವಿ – ಕಾವ್ಯ ವಿಹಾರ’ ಎಂಬ ಈ ಹೊತ್ತಗೆಯು ಪ್ರಾಚೀನ ಕವಿಗಳು ಮತ್ತು ಆಧುನಿಕ ಕವಿಗಳು ಎಂಬ ಎರಡು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗ ಪ್ರಾಚೀನ ಕವಿಗಳು. ಈ ಭಾಗದಲ್ಲಿ ಯಕ್ಷಗಾನ ಪ್ರಸಂಗಕರ್ತರಾದ ವಿಷ್ಣು ವಾರಂಬಳ್ಳಿ, ಕುಂಬಳೆಯ ಪಾರ್ತಿಸುಬ್ಬ, ಪಾಂಡೇಶ್ವರ ವೆಂಕಟ, ಹಳೆಮಕ್ಕಿ ರಾಮ, ನಗಿರೆ ಸುಬ್ರಹ್ಮಣ್ಯ, ನಿತ್ಯಾನಂದ ಅವಧೂತ, ಧ್ವಜಪುರದ ನಾಗಪ್ಪಯ್ಯ, ದೇವಿದಾಸ, ಹಟ್ಟಿಯಂಗಡಿ ರಾಮ ಭಟ್ಟ, ಮತ್ತು ಮುದ್ದಣ ಎಂಬ ಹತ್ತು ಮಂದಿಗಳ ಬಗೆಗೆ ಮತ್ತು ಅವರು ಬರೆದ ಪ್ರಸಂಗಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಭಾಗ ಎರಡು ಆಧುನಿಕ ಕವಿಗಳು. ಇಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಸೀತಾನದಿ ಗಣಪಯ್ಯ ಶೆಟ್ಟಿ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ, ಅಗರಿ ಶ್ರೀನಿವಾಸ ಭಾಗವತ, ಬೆಳಸಲಿಗೆ ಗಣಪತಿ ಹೆಗಡೆ, ಅಮೃತ ಸೋಮೇಶ್ವರ, ಕಂದಾವರ ರಘುರಾಮ ಶೆಟ್ಟಿ, ಹೊಸ್ತೋಟ ಮಂಜುನಾಥ ಭಾಗವತ, ಕೆ.ಎಂ.ರಾಘವ ನಂಬಿಯಾರ್ ಮತ್ತು ಶ್ರೀಧರ ಡಿ.ಎಸ್. ಎಂಬ ಹತ್ತು ಮಂದಿ ಪ್ರಸಂಗಕರ್ತರ ಬಗೆಗೆ, ಅವರು ಬರೆದ ಪ್ರಸಂಗಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಪುಸ್ತಕದ ಹೊರ ಆವರಣದ ಬರಹದಲ್ಲಿ ಶ್ರೀ ಪಾದೇಕಲ್ಲು ವಿಷ್ಣು ಭಟ್ಟರು ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಈ ಪುಸ್ತಕದ ವಿಶೇಷತೆ ಮತ್ತು ಮಹತ್ವವನ್ನು ತಿಳಿಸಿರುತ್ತಾರೆ. 2010ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2021ರಲ್ಲಿ ಎರಡನೇಯ ಮುದ್ರಣವನ್ನು ಕಂಡಿದೆ.
©2024 Book Brahma Private Limited.