ಯಕ್ಷಗಾನವೆಂಬ ವಾಙ್ಮಯ ಪ್ರಪಂಚದಲ್ಲಿ ಪ್ರಾಸಬದ್ಧತೆಗೆ, ಪೌರಾಣಿಕ ಚೌಕಟ್ಟಿನೊಳಗೆ ಪಾತ್ರೋಚಿತ ಸಂವಾದಕ್ಕೆ, ಆಕರ್ಷಕ ಪಾತ್ರ ನಿರೂಪಣೆಗೆ ಹೆಸರಾದವರು ಕುಂಬಳೆ ಸುಂದರ ರಾವ್. ಕಳೆದ ವರ್ಷಾಂತ್ಯದಲ್ಲಿ ನಮ್ಮಿಂದ ದೂರವಾದರೂ ಅವರು ಕಟ್ಟಿಕೊಟ್ಟ ಪಾತ್ರ ಪ್ರಪಂಚ, ವಾಕ್ ವೈಭವ, ಚೇತೋಹಾರಿ ಮಾತುಗಳು, ವಾಚಿಕಾಭಿನಯ - ಇವೆಲ್ಲ ಯಕ್ಷಗಾನ ಲೋಕದಲ್ಲಿ ಸದಾ ಸ್ಮರಣೀಯ. 2008ರಲ್ಲಿ ಪ್ರಕಟವಾದ ಅವರ ಆತ್ಮಕತೆ, ಡಾ.ಅಮೃತ ಸೋಮೇಶ್ವರ ಸಂಪಾದಕತ್ವದ ‘ಸುಂದರ ಕಾಂಡ’ ಈಗ ‘ಯಕ್ಷ ಪಥದ ಯಾತ್ರಿಕ’ ಹೆಸರಿನಲ್ಲಿ, ಅವರ ಸಹೋದರ ನಾ.ದಾಮೋದರ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಮರು ಮುದ್ರಣಗೊಂಡಿದೆ. 350 ಪುಟಗಳ ಈ ಗ್ರಂಥದಲ್ಲಿ ಅವರ ಬದುಕು, ಹಿನ್ನೆಲೆ, ಪರಿಸರ, ವೃತ್ತಿ, ಪ್ರವೃತ್ತಿ, ಸಂಸಾರ, ಬಂಧು ಮಿತ್ರರು, ಸಹಕಲಾವಿದರ ನೆನಪುಗಳಿವೆ. ಜೊತೆಗೆ ಅವರ ಕಾಲದ ರಂಗ ಚಟುವಟಿಕೆಗಳ ಮೇಲೆ ಬೆಳಕನ್ನೂ ಚೆಲ್ಲಲಾಗಿದೆ.ಆ ಕಾಲಘಟ್ಟದಲ್ಲಿ ಯಕ್ಷಗಾನ ಕಲಾಕ್ಷೇತ್ರದ ಮತ್ತು ಸಮಾಜದ ಬಹುಮೂಲ್ಯ ಚಿತ್ರಣಗಳು ಇದರಲ್ಲಿವೆ. ವಿದ್ಯೆ ಪೂರೈಸಲು ಬಡತನದಿಂದಾಗಿ ಕಷ್ಟಪಟ್ಟು ಏಳನೇ ತರಗತಿಗೇ ಓದು ಮುಗಿಸಿದರೂ ಆದರ್ಶ ಕಲಾವಿದರಾಗಿ, ಕಲಾ ಸಂಘಟಕರಾಗಿ, ಶಾಸಕರಾಗಿ, ಅಕಾಡೆಮಿ ಅಧ್ಯಕ್ಷರಾಗಿ ಅವರು ಬೆಳೆದು ಬಂದ ಬಗೆ ಇಲ್ಲಿದೆ. ಶೇಣಿ - ಸಾಮಗರ ಕಾಲದಲ್ಲಿ ಅರ್ಥಗಾರಿಕೆಯಿಂದಲೇ ಅವರು ಆಟ - ಕೂಟಗಳಲ್ಲಿ ಮೆರೆದದ್ದೇಕೆಂಬುದು ಇಲ್ಲಿ ತಿಳಿಯುತ್ತದೆ. ಕೃತಿಯ ಆರಂಭದಲ್ಲೇ, ಗಡಿನಾಡು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ನೋವಿನ ಧ್ವನಿ ಇದೆ, ಕನ್ನಡ - ತುಳು - ಮಲಯಾಳಂ ನಡುವಿನ ಕೊಂಡಿಯ ಬಗೆಗಿನ ಭಾವನಾತ್ಮಕತೆಯಿದೆ. ಇಷ್ಟೇ ಅಲ್ಲ, ನೇಕಾರಿಕೆಯ ಪ್ರಗತಿ, ಬಡತನದ ನಡುವೆ ಭೇದಭಾವವಿಲ್ಲದ ಸಾಮಾಜಿಕ ಬದುಕು, ಮದುವೆಯ ಉಡುಗೊರೆಯ ವೈಶಿಷ್ಟ್ಯ ಮುಂತಾದ ಸೂಕ್ಷ್ಮ ವಿಚಾರಗಳೂ ಇವೆ. ಯಕ್ಷಗಾನ ಚರಿತ್ರೆಗೆ ಸಂಬಂಧಿಸಿದಂತೆಯೂ ಇದೊಂದು ಉಲ್ಲೇಖಾರ್ಹ ಕೃತಿ.
©2024 Book Brahma Private Limited.