ಈ ನಾಟಕದ ಕಥೆಯನ್ನು ಅಚಾನಕದ ಸರಣಿಗಳಾಗಿ ಕಟ್ಟುವ ಮೂಲಕ ಮತ್ತು ಸಂರಚನೆಯನ್ನು ಸಂಘರ್ಷಗಳ ಉತ್ತುಂಗವಿಲ್ಲದೆ ಸಡಿಲವಾಗಿ ಕಟ್ಟುವ ಮೂಲಕ ಶೇಕ್‌ಸ್ಪಿಯರ್ ಮತ್ತೇನನ್ನೋ ಮಾಡಲು ಹೊರಟಿದ್ದಾನೆಂದು ಕಾಣುತ್ತದೆ -- ಈ ಬದುಕನ್ನು `ಹೇಗೆ ಬೇಕೋ ಹಾಗೆ' ಹರಿಯಬಿಟ್ಟರೆ ಅದು ದಿಕ್ಕಾಪಾಲಾಗಿ ಚದುರುತ್ತದೆ; ಅಥವಾ ನಮ್ಮದೇ ಸ್ವಾರ್ಥಗಳ ನೇರಕ್ಕೆ ನಡೆಸಲು ಬಯಸಿದರೂ `ಹೇಗೆ ಬೇಕೋ ಹಾಗೆ' ಪ್ರತಿಕೂಲವಾಗಿ ಪಲ್ಲಟಗೊಳ್ಳುತ್ತದೆ. ಉದಾಹರಣೆಗೆ, ಈ ನಾಟಕದ ಹಿರಿಯ ಕಿರಿಯ ಡ್ಯೂಕರಿಬ್ಬರು ಮತ್ತು ಆಲಿವರ್ ಆರ್ಲಾಂಡೋ ಸಹೋದರರು ಇಂಥ ಸ್ವಾರ್ಥದ ಪ್ರಯೋಗದಿಂದಲೇ ಸ್ವಯಂಕೃತ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ನಾಯಕಿ ರೋಸಾಲಿಂಡ್‌ಗೆ ಮಾತ್ರ ಹೊಸ ಬಗೆಯ ಹೊಳಹು ದಕ್ಕಿದೆ -- ಆಕೆ ಈ ಬದುಕನ್ನು ಆಟವೆಂದು ಪರಿಭಾವಿಸಲು ಸಿದ್ಧಳಾಗಿದ್ದಾಳೆ; ಮತ್ತು ಪೂರ್ಣ ಮನಸ್ಸಿನಿಂದ ಈ ಆಟವನ್ನು ಯೋಜಿಸಿ ಆಡುತ್ತಹೋಗುವ ಮೂಲಕವೇ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಸ್ಥೆ ರ್ಯ ತೋರಿಸುತ್ತಾಳೆ. ದೇಶಾಂತರದ ಮತ್ತು ವೇಷಾಂತರದ ಆಟ ಕಟ್ಟುವ ಆಕೆ, ಅಂಥ `ನಾಟಕ'ದ ಮೂಲಕವೇ ಎಲ್ಲರ `ಬದುಕ'ನ್ನೂ `ಹೇಗೆ ಬೇಕೋ ಹಾಗೆ' ಹಾದಿಗೆ ತರಲು ಯಶಸ್ವಿ ಆಗುತ್ತಾಳೆ.
©2024 Book Brahma Private Limited.