‘ಸ್ಮಶಾನ ಕುರುಕ್ಷೇತ್ರದಲ್ಲಿ ಕುರುಕುಲ ಸೂರ್ಯ’ ಸಮ್ಮಿಶ್ರ ನಾಟಕ ಸಿ.ಎಂ.ಗೋವಿಂದರೆಡ್ಡಿ ಅವರು ರಚಿಸಿರುವ ಐಕ್ಯತ್ರಯ ನಾಟಕದ ಶೀರ್ಷಿಕೆಯಿದು! ೧) ರನ್ನನ ‘ಸಾಹಸಭೀಮ ವಿಜಯಂ’ ಮಹಾಕಾವ್ಯ ೨) ಬಿ.ಎಂ.ಶ್ರೀ ಅವರ ‘ಗದಾಯುದ್ಧ ನಾಟಕಂ’ ೩) ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರಂ’ – ಈ ಮೂರೂ ಕೃತಿಗಳ ಐಕ್ಯತ್ರಯ ಕಥಾಸಂವಿಧಾನವನ್ನು ಹೊಂದಿರುವ ಸಮ್ಮಿಶ್ರ ನಾಟಕವೊಂದನ್ನು ರೆಡ್ಡಿಯವರು ಸಂಯೋಜಿಸಿರುವ ಜಾಣ್ಮೆ ಇಲ್ಲಿದೆ. ರನ್ನನ ಸಾಹಸಭೀಮ ವಿಜಯಂ ಮಹಾಕಾವ್ಯವೇ ದುರ್ಯೋಧನನ ವ್ಯಕ್ತಿತ್ವವನ್ನು ಉದಾತ್ತ ದೃಷ್ಟಿಯಿಂದ ನಿರೂಪಣೆ ಮಾಡಿದ್ದು ಅಭಿಮಾನಧನ ಸುಯೋಧನ- ಕುರುಕುಲ ಸಾರ್ವಭೌಮನನ್ನು ಮಹೋನ್ನತವಾಗಿ ಚಿತ್ರಿಸಿದೆ. ಇದರಿಂದ ಸ್ಫೂರ್ತಿ ಪಡೆದ ಶ್ರೀ ಅವರು ‘ಗದಾಯುದ್ಧ ನಾಟಕ’ವನ್ನು ರಚಿಸಿ ರನ್ನನ ಮಹಾಕಾವ್ಯದ ನಾಟಕೀಯ ಗುಣಕ್ಕೆ ಹಸಿರು ಬಾವುಟ ತೋರಿದ್ದರು. ಕುವೆಂಪು ಅವರು ಎರಡು ವಿಶ್ವಯುದ್ಧಗಳ ಹಿನ್ನೆಲೆ ಸಹಿತ ಮಾನವಕುಲಕ್ಕೆ ಯುದ್ಧದ ಹಿಂಸೆ, ಕ್ರೌರ್ಯ, ಅಮಾನವೀಯ ಮುಖಗಳನ್ನು ಸಾಮಾನ್ಯ ಮನುಷ್ಯರ ತೊಳಲಾಟಗಳು, ದ್ವಾಪರ-ಕಲಿಪುರುಷರ ಮುಖಾಮುಖಿ ಮತ್ತು ಕೃಷ್ಣ-ರುದ್ರರ ಸಂವಾದದ ಮೂಲಕ ಮನಗಾಣಿಸಿದ್ದರು. ಇದರಿಂದಾಗಿ ಮೂರುದಾರಿಯಾಗಿದ್ದ ವಿಭಾವಗಳನ್ನು ಹೊಸಕಾಲಕ್ಕೆ ತಕ್ಕಂತೆ ಸಂಯೋಜಿಸಿ ತೋರಿಸುವ ಸವಾಲಿನ ಅವಕಾಶವೊಂದು ತಾನಾಗಿ ತೆರೆದಿತ್ತು. ಇದನ್ನು ಗೆಳೆಯರಾದ ಗೋವಿಂದರೆಡ್ಡಿ ಬಳಸಿಕೊಂಡು ತ್ರಿವೇಣಿ ಸಂಗಮವೊಂದರ ಕಾಣ್ಕೆಯನ್ನು ಕೊಟ್ಟಿದ್ದಾರೆ. ಅರಮನೆಯಲ್ಲಿ ಅಂತಃಪುರ ಬಂಧಿಯಾಗಿ ತೆರೆಮರೆಯಲ್ಲಿದ್ದ ಭಾನುಮತಿಯನ್ನು ಪತಿಯಾದ ದುರ್ಯೋಧನನ ಅಂತಿಮ ಕ್ಷಣಗಳಿಗೆ ಜೊತೆಮಾಡಿ, ರಣಭೂಮಿಗೆ ತಂದು ಪತಿಯ ಸಹಧರ್ಮಿಣಿಯನ್ನಾಗಿ ಚಿತ್ರಿಸಿರುವುದು ಒಪ್ಪುವಂತಿದೆ. ಕೌರವನ ಅಂತರಂಗ ಪರಿವೀಕ್ಷಣೆಗೆ ಒತ್ತು ನೀಡಿ ಕರ್ಣನ ಜನ್ಮರಹಸ್ಯವನ್ನು ಮುಚ್ಚಿಡದೆ, ತನ್ನ ಜನನೀ ಜನಕರಿಗೆ ತಿಳಿಸುವುದಲ್ಲದೆ, ಧರ್ಮರಾಯನೊಂದಿಗೆ ಹೊಂದಿಕೊಂಡು ಬಾಳುವಂತೆ ವಚನ ತೆಗೆದುಕೊಳ್ಳುವುದು ಇತ್ಯಾದಿ.., ನೂತನ ಭಾವಮೇಳನಗಳು ಇಲ್ಲಿವೆ. ಅಶ್ವತ್ಥಾಮನಿಗೆ ತಿಳಿಹೇಳುವ ಸಂದರ್ಭದಲ್ಲಿ ರನ್ನನಂತೆ ಕೌರವನಿಗೆ ‘ಮಹಾನುಭಾವ’ ಪ್ರಶಸ್ತಿಯನ್ನು ಸಿ.ಎಂ.ಗೋವಿಂದರೆಡ್ಡಿಯವರು ಬಳಸಿದ್ದಾರೆ. ಪಂಪ, ರನ್ನ, ಕುಮಾರವ್ಯಾಸ ಇವರಾರೂ ಚಿತ್ರಿಸದ ಘೂಕ-ಕಾಕ ಪ್ರಸಂಗವನ್ನು ಅಶ್ವತ್ಥಾಮನ ಆಗ್ರಹಕ್ಕೆ [=ಆಗ್ರಹ>ವಿ.ಸೀ ಅವರ ನಾಟಕ] ಪೂರಕವಾಗಿ ಈ ನಾಟಕದಲ್ಲಿ ಬಳಸಿದ್ದಾರೆ. ಈ ನಾಟಕದ ವೈಶಿಷ್ಟ್ಯ ಎಂದರೆ ಕ್ರಿಯಾಸರಣಿಯ ಪರಿವರ್ತನೆಯ ತತ್ವ! ಆದಿಗೆ ಮರುಳುಗಳು ದುರ್ಯೋಧನನನ್ನು ಕಂಡು ಮೆಚ್ಚಿಕೊಳ್ಳುವ ಮತ್ತು ರಕ್ತಮಾಂಸ ಸೇವನೆಗೆ ಹೇವರಿಸುವ ಪರಿಯಲ್ಲಿ ಬಾಳಿನ ಗತಿಶೀಲ ಪರಿವರ್ತನೆಯಿದೆ. ರಕ್ತಮಯ ಕುರುಕ್ಷೇತ್ರವನ್ನು ಆತ್ಮೋನ್ನತಿಯ ಧರ್ಮಕ್ಷೇತ್ರವನ್ನಾಗಿ ಮನಗಾಣಿಸಿರುವುದು ದ್ವಾಪರ+ಕಲಿ, ಕೃಷ್ಣ+ರುದ್ರ ಸಂವಾದಕ್ಕೆ ಪೂರಕವಾಗಿದೆ. ರಣರಂಗದ ಕಗ್ಗೊಲೆಗಳ ಮಧ್ಯೆ ‘ಸಾಮಾನ್ಯತಾಶ್ರೀ’ಯನ್ನು (ಕುವೆಂಪು ನುಡಿಗಟ್ಟು) ತಂದಿರುವುದು ಯಥೋಚಿತವಾಗಿದೆ. ವ್ಯಕ್ತಿಗಳ ಅಂತರಂಗ ಮತ್ತು ಬಹಿರಂಗದ ಸ್ಥಳಗಳು ಎಂಬ ಭೇದವಿಲ್ಲದೆ ಘಟನಾಸರಪಳಿಯ ಕೊಂಡಿಗಳನ್ನು ಬೆಸೆದು ತರ್ಕಬದ್ಧ ಮತ್ತು ಸ್ಪಟಿಕಶುದ್ಧ ಶೈಲಿಯಲ್ಲಿ ದೃಶ್ಯೀಕರಣ ಮಾಡಿರುವುದು ಈ ನಾಟಕದ ವಿಶೇಷ! ಇದಕ್ಕೆ ನಿದರ್ಶನವಾಗಿ ಕುಂತಿದೇವಿಯೇ ತನ್ನ ಮಕ್ಕಳಿಗೆ ಕರ್ಣನ ಜನ್ಮರಹಸ್ಯವನ್ನು ತಿಳಿಸುವುದು ಮತ್ತು ಸೋದರವಧೆಯಿಂದ ತಪ್ತನಾದ ಧರ್ಮರಾಯನು ಹೆಣ್ಣಿನ ಬಾಯಲ್ಲಿ ರಹಸ್ಯ ಉಳಿಯಬಾರದೆಂದು ಶಾಪಕೊಡುವ ಪ್ರಸಂಗವನ್ನು ನೋಡಬಹುದು. ಇಡೀ ನಾಟಕವನ್ನು ಪೂರ್ವನಿರ್ಧಾರಿತ ನೆಲೆಯಲ್ಲಿಟ್ಟು ನೋಡದೆ, ಜಗನ್ನಾಟಕ ಅಥವಾ ಕಪಟನಾಟಕಜನ್ಯವೆಂಬಂತೆ ಚಿತ್ರಿಸದೆ, ಬಾಳಿನ ನಾಟ್ಯಲೀಲೆ ಎಂಬಂತೆ ಗೋವಿಂದರೆಡ್ಡಿ ಹೇಳಿರುವುದು ಗಮನಾರ್ಹ! ಈ ಸಂವಾದವನ್ನು ಗಮನಿಸಿರಿ : “ಮುದುಕಿ : ಕೆಲವರು ನಿನ್ನನ್ನು ಕಪಟನಾಟಕ ಸೂತ್ರಧಾರಿ ಅಂತಾರೆ. ಈ ಯುದ್ಧವನ್ನು ನೀನೇ ಮಾಡಿಸ್ತಿದೀಯ ಅಂತಲೂ ಅಂತಾರೆ! ಇದು ನಿಜಾನ ಕೃಷ್ಣಪರಮಾತ್ಮ? ಕೃಷ್ಣ : ಎಲ್ಲಾ ಅವರವರ ಭಾವ, ಅಜ್ಜಿ! ಯಾರು ಏನು ಬೇಕಾದರೂ ಅಂದುಕೊಳ್ಳಲಿ, ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಈ ಭೂಮಿಗೆ ಬಂದ ಮೇಲೆ ಎಲ್ಲರೂ ಕಾಲಕ್ಕೆ ತಕ್ಕಂತೆ ಕುಣೀಬೇಕು ಅಲ್ವಾ? ಅವರೂ ಕುಣೀತಾರೆ; ನಾನೂ ಕುಣೀತೀನಿ. ಆದರೆ ಕೆಲವರು ನಾನು ಕುಣಿಸ್ತಿದೀನಿ ಅಂತ ಭಾವಿಸ್ತಾರೆ”... ಇಲ್ಲಿ ಕೃಷ್ಣಪರಮಾತ್ಮನೇ ದೂರನಿಯಂತ್ರಕ ಕರ್ಮಾಧ್ಯಕ್ಷನ ಪಾತ್ರ ನಿರಾಕರಣೆಯನ್ನು ಮಾಡಿರುವುದು ಬಹುಮುಖ್ಯವಾಗಿದೆ. ಒಟ್ಟಿನಲ್ಲಿ, ಸಂಘರ್ಷದ ರಣರಂಗದಲ್ಲಿ ಅಂತರಂಗ+ಬಹಿರಂಗದ ತುಮುಲಗಳು, ಅಲ್ಲೋಲ ಕಲ್ಲೋಲಗಳನ್ನು ಚಿತ್ರಿಸುತ್ತಾ ಭಾವೋಜ್ವಲ ಸತ್ಯದರ್ಶನವನ್ನು ಮಾಡಿಸುವ ‘ಸ್ಮಶಾನ ಕುರುಕ್ಷೇತ್ರದಲ್ಲಿ ಕುರುಕುಲ ಸೂರ್ಯ’ ಎಂಬ ಸಮ್ಮಿಶ್ರ ಅಥವಾ ಸಾಂಕರ್ಯ ನಾಟಕವು ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಗೆಳೆಯ ಗೋವಿಂದರೆಡ್ಡಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ೨೮-೦೬-೨೦೨೦ -ಡಾ.ವಿ.ಚಂದ್ರಶೇಖರ ನಂಗಲಿ
ದೃಶ್ಯ - ೧ (ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಭಾರತ ಯುದ್ಧದ ಹದಿನೇಳನೆಯ ದಿನ. ಅಂದಿನ ಯುದ್ಧ ಮುಗಿದ ಬಳಿಕ, ದುರ್ಯೋಧನನು ಬಿಡಾರದಿಂದ ತನ್ನ ಅರಮನೆಗೆ ತೆರಳಿ ಚಿಂತಾಕ್ರಾಂತನಾಗಿದ್ದಾನೆ. ಇದುವರೆಗೂ ನಡೆದ ಹದಿನೇಳು ದಿನಗಳ ಯುದ್ಧದಲ್ಲಿ ಕೌರವಪಕ್ಷದ ಸೇನಾಧಿಪತಿಯಾಗಿದ್ದ ಭೀಷ್ಮರು ಹತ್ತು ದಿನಗಳ ಕಾಲ ಹೋರಾಡಿ, ಶಿಖಂಡಿಯನ್ನು ನೋಡಿ, ಶಸ್ತ್ರತ್ಯಾಗ ಮಾಡಿ, ಅರ್ಜುನನ ಬಾಣದೇಟಿಗೆ ಕೆಳಗುರುಳಿ, ರಣರಂಗದಲ್ಲಿಯೇ ಶರಶಯ್ಯೆಯಲ್ಲಿ ಮಲಗಿದ್ದಾರೆ. ಗುರು ದ್ರೋಣರು ಸೇನಾನಿಯಾಗಿ ಐದು ದಿನಗಳ ಕಾಲ ಯುದ್ಧ ಮಾಡಿ, ಚಕ್ರವ್ಯೂಹದಲ್ಲಿ ದುರ್ಯೋಧನನ ಮಗ ಲಕ್ಷ್ಮಣಕುಮಾರನು ಅಭಿಮನ್ಯುವಿನಿಂದ ಹತನಾದ ಬಳಿಕ, ಅಭಿಮನ್ಯುವನ್ನು ಮೋಸದಿಂದ ಬಲಿ ಪಡೆದು, ತಾವೂ ಕೃತ್ರಿಮಕ್ಕೆ ಬಲಿಯಾಗಿದ್ದಾರೆ. ನಂತರ ಕರ್ಣನು ಕೌರವ ಸೇನಾಧಿಪತಿಯಾದ ಸಂದರ್ಭದಲ್ಲಿ, ಭೀಮನು ದುಶ್ಯಾಸನನ ಎದೆ ಬಗೆದು, ಬಿಸಿನೆತ್ತರು ಕುಡಿದು, ಭೀಭತ್ಸವಾಗಿ ವಧಿಸಿದ್ದಾನೆ. ಕರ್ಣನು ಎರಡು ದಿನಗಳ ಕಾಲ ಹೋರಾಡಿ ಕಡೆಗೆ, ಕೆಸರಿನಲ್ಲಿ ಹೂತುಕೊಂಡ ತನ್ನ ರಥಚಕ್ರವನ್ನು ಎತ್ತುತ್ತಿರುವಾಗ ಅರ್ಜುನನಿಂದ ಹತನಾಗಿದ್ದಾನೆ. ಕರ್ಣನು ಯುದ್ಧ ಗೆದ್ದೇ ತೀರುತ್ತಾನೆಂದು ನಂಬಿದ್ದ ದುರ್ಯೋಧನ ಹತಾಶನಾಗಿ, ಪ್ರಾಣಮಿತ್ರನ ಅಗಲಿಕೆಯನ್ನು ಸಹಿಸಿಕೊಳ್ಳಲಾಗದವನಾಗಿದ್ದಾನೆ. ಪತ್ನಿಯಾದ ಭಾನುಮತಿ ಅವನನ್ನು ಸಂತೈಸುತ್ತಿದ್ದಾಳೆ) ಭಾನುಮತಿ ಆರ್ಯಪುತ್ರ! ಪ್ರಾಣಮಿತ್ರನಾದ ಕರ್ಣನ ಸಾವಿನಿಂದ ಬಹಳ ಕಂಗೆಟ್ಟಿರುವಂತೆ ಕಾಣುತ್ತಿದೆ. ದುರ್ಯೋಧನ ಹೌದು ದೇವಿ! ನನ್ನ ಮಿತ್ರನಾದ ಕರ್ಣನಿಲ್ಲದೆ ನನ್ನನ್ನು ಶೂನ್ಯ ಆವರಿಸಿಬಿಟ್ಟಿದೆ. ತಮ್ಮನಾದ ದುಶ್ಯಾಸನನಿಲ್ಲದೆ, ಕರ್ಣನೂ ಇಲ್ಲದೆ ನಾನು ಹೇಗಿರಲಿ? ಭಾನುಮತಿ ಸಮಾಧಾನ ಹೃದಯೇಶ್ವರ! ಯುದ್ಧ ನೋವನ್ನು ಕೊಡುವುದೇ ಹೊರತು ನೆಮ್ಮದಿಯನ್ನು ಕೊಡುವುದಿಲ್ಲ. ಯುದ್ಧವೆನ್ನುವುದು ಸೋತವರ ಸಾವು; ಗೆದ್ದವರ ಸೋಲು! ದುರ್ಯೋಧನ ದೇವಿ! ಈ ಯುದ್ಧದಲ್ಲಿ ನಾನು ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡಿದ್ದೇನೆ. ಈಗಲೂ ನನ್ನ ಸೇಡಿನ ರಕ್ತ ಕುದಿಯುತ್ತಿದೆ. ಭಾನುಮತಿ ಪ್ರಾಣೇಶ್ವರ! ಆಪ್ತಮಿತ್ರನನ್ನು ಕಳೆದುಕೊಂಡ ದುಃಖದಲ್ಲಿ ನೀವು ಮಾತನಾಡುತ್ತಿದ್ದೀರಿ. ದುರ್ಯೋಧನ ಹೌದು! ಪ್ರಾಣಪ್ರಿಯೆ! ಅಂದು ನಾನು ನಿನ್ನನ್ನು ವರಿಸಲೆಂದು ಕಳಿಂಗದ ಸ್ವಯಂವರ ಮಂಟಪದಿಂದ ಹೊತ್ತು ತರುತ್ತಿದ್ದಾಗ ಗೆಳೆಯ ಕರ್ಣನೇ ಅಲ್ಲವೇ ಎಲ್ಲರನ್ನೂ ಎದುರಿಸಿ, ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ್ದು! ಭಾನುಮತಿ ನೆನಪಿದೆ ಪ್ರಭು! ಆದ್ದರಿಂದಲೇ ನಿಮ್ಮ ಗೆಳೆಯನೆಂದರೆ ನನಗೆ ಅಪಾರ ಗೌರವ. ಅಂತಹ ಗೆಳೆಯನನ್ನು ದೂರ ಮಾಡಿದ್ದು ಯುದ್ಧ. ಇನ್ನಾದರೂ ಯುದ್ಧದಿಂದ ವಿಮುಖರಾಗಬಾರದೆ? ದುರ್ಯೋಧನ (ತುಸು ಕೋಪದಿಂದ) ದೇವಿ! ನೀನು ಕ್ಷತ್ರಿಯ ಕುಲದಲ್ಲಿ ಜನಿಸಿದ ಹೆಣ್ಣು. ಕಳಿಂಗದೇಶದ ರಾಜಪುತ್ರಿಯಾಗಿ, ದುರ್ಯೋಧನ ಚಕ್ರವರ್ತಿಯ ಪತ್ನಿಯಾಗಿ ಈ ರೀತಿ ಮಾತಾಡಕೂಡದು. ಭಾನುಮತಿ (ಶಾಂತಚಿತ್ತದಿಂದ) ನಾನು ಕ್ಷತ್ರಿಯ ಹೆಣ್ಣು ನಿಜ. ಕ್ಷಾತ್ರ ಧರ್ಮವನ್ನು ಕಾಪಾಡಬೇಕಾದುದು ನನ್ನ ಹೊಣೆಯೂ ಹೌದು. ಆದರೂ ಮಾನವೀಯ ನೆಲೆಯಲ್ಲಿ ಆಲೋಚಿಸುತ್ತಿರುವೆ. ದುರ್ಯೋಧನ ಆಲೋಚಿಸುವುದರಲ್ಲಿ ತಪ್ಪಿಲ್ಲ. ಆದರೆ ನಾನೊಬ್ಬ ಕ್ಷತ್ರಿಯನಾಗಿ, ಕುರುಕುಲ ಚಕ್ರವರ್ತಿಯಾಗಿ, ಯುದ್ಧದಿಂದ ವಿಮುಖನಾಗಲು ಸಾಧ್ಯವೇ ಇಲ್ಲ. ಭಾನುಮತಿ ಹೃದಯೇಶ್ವರ! ಮುಂದೆ ಏನಾಗುತ್ತದೋ ಎಂಬ ಭಯ ನನ್ನನ್ನು ಕಾಡುತ್ತಿದೆ. ದುರ್ಯೋಧನ ಕ್ಷತ್ರಿಯರಿಗೆ ಭಯ ಶೋಭಿಸುವುದಿಲ್ಲ ದೇವಿ. ಕ್ಷತ್ರಿಯರಾದ ನಮಗೆ ಯುದ್ಧವೊಂದು ಆಡುಂಬೊಲ. ವೀರನಿಗೆ ಯುದ್ಧದಲ್ಲಾಗುವ ಗಾಯಗಳೇ ಆಭರಣಗಳು. ಯುದ್ಧದಲ್ಲಿ ಮರಣಿಸಿದರೆ ಅದು ವೀರಮರಣ! ಭಾನುಮತಿ ದೊರೆಯೇ! ಕೊಲ್ಲುವುದು ನಿಮಗೆ ಆಟವೆ? ಯುದ್ಧದಲ್ಲಿ ಸತ್ತ ಒಬ್ಬರನ್ನಾದರೂ ನೀವು ಬದುಕಿಸಬಲ್ಲಿರೆ? ಅವರಿಗೆ ಜೀವ ತುಂಬಬಲ್ಲಿರೆ? ದುರ್ಯೋಧನ ಅದು ಹೇಗೆ ಸಾಧ್ಯ ದೇವಿ? ಸತ್ತವರು ಮತ್ತೆ ಬದುಕುವುದು ಎಂದರೇನು? ಭಾನುಮತಿ ಹಾಗಾದರೆ ಜೀವ ತುಂಬುವ ಶಕ್ತಿ ನಿಮಗಿಲ್ಲವೆಂದ ಮೇಲೆ, ಜೀವ ತೆಗೆಯುವ ಹಕ್ಕನ್ನು ಕೊಟ್ಟವರು ಯಾರು? ಯುದ್ಧವೊಂದು ಅನರ್ಥ ಸಾಧನ. ಯುದ್ಧದಿಂದಾಗುವ ಹಾನಿ ಮತ್ತು ನಂತರದ ಪರಿಣಾಮಗಳು ತುಂಬಾ ಭಯಂಕರ. ಪ್ರಭು! ನಾನು ಇನ್ನೊಂದು ಪ್ರಶ್ನೆ ಕೇಳಲೆ? ದುರ್ಯೋಧನ ಕೇಳು ದೇವಿ! ಸಂಕೋಚವೇಕೆ? ಭಾನುಮತಿ ಯುದ್ಧದಲ್ಲಿ ಹೋರಾಡಿ ಮಡಿಯುವವರೆಲ್ಲ ಯಾರು? ದುರ್ಯೋಧನ ವೀರಾಧಿವೀರರು! ಯುದ್ಧ ಮಾಡಲೆಂದೇ ಸಿದ್ಧಪಡಿಸಿದ ಯೋಧರು. ಅವರ ವೃತ್ತಿಯೇ ಯುದ್ಧಮಾಡುವುದು. ರಾಜ್ಯವನ್ನು ಶತ್ರುಗಳಿಂದ ರಕ್ಷಿಸುವುದು ಅವರ ಕರ್ತವ್ಯ. ಭಾನುಮತಿ ಹೌದು ಪ್ರಭು! ಆದರೆ ಯುದ್ಧಮಾಡುವವರೆಲ್ಲ ಪುರುಷರು ತಾನೆ? ಅವರು ಹೊಟ್ಟೆಪಾಡಿಗಾಗಿ, ಹೆಂಡತಿ ಮಕ್ಕಳನ್ನು ಪೋಷಿಸುವುದಕ್ಕಾಗಿ ಸೇನೆಗೆ ಸೇರಿರುತ್ತಾರೆ? ಯುದ್ಧದಲ್ಲಿ ಅವರು ಸತ್ತರೆ ಅವರ ಹೆಂಡತಿ ಮಕ್ಕಳ ಗತಿಯೇನು? ಅವರ ವೃದ್ಧ ಮಾತಾಪಿತೃಗಳ ಪಾಡೇನು? ದುರ್ಯೋಧನ ಅದನ್ನೆಲ್ಲ ಯೋಚಿಸುತ್ತ ಕುಳಿತರೆ ರಾಜ್ಯ ವಿಸ್ತಾರ ಹೇಗೆ? ನಾಡಿನ ರಕ್ಷಣೆ ಹೇಗೆ? ರಾಜನಿಗೇನು ಕೆಲಸವಿರುತ್ತದೆ? ಭಾನುಮತಿ ಯುದ್ಧದಲ್ಲಿ ಪುರುಷರೆಲ್ಲ ಸತ್ತರೆ ನಾಡಿನಲ್ಲಿ ವಿಧವೆಯರ ಗೋಳಲ್ಲದೆ ಮತ್ತೇನು ಉಳಿದಿರುತ್ತದೆ ಪ್ರಭು? ರಾಜನಾದವನು ಪ್ರಜೆಗಳ ಯೋಗಕ್ಷೇಮವನ್ನು ನೋಡಬೇಕಲ್ಲವೆ? ಅದೇ ಅವನ ಕೆಲಸವಲ್ಲವೆ? ದುರ್ಯೋಧನ ನಿಜ ದೇವಿ! ಯುದ್ಧ ಪ್ರಾರಂಭವಾದಾಗ ನನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿತ್ತು. ಈಗ ಒಂದು ಅಕ್ಷೋಹಿಣಿಯಷ್ಟು ಸೈನ್ಯವೂ ಇಲ್ಲ! ಭಾನುಮತಿ ಕೌರವೇಶ್ವರ! ಯುದ್ಧದಲ್ಲಾದ ಈ ಎಲ್ಲ ಕೊಲೆಗಳಿಗೆ ಕಾರಣರು ಯಾರು? ದುರ್ಯೋಧನ ಈ ಯುದ್ಧಕ್ಕೆ ನಾನೇ ಕಾರಣನೆಂಬ ಅರಿವು ನನಗಿದೆ. ಹಿರಿಯರ ಹಿತವಚನಗಳನ್ನು ಕೇಳದೆ, ದೀಪಶಿಖಿಯನ್ನು ಚುಂಬಿಸುವ ಪತಂಗದಂತೆ ಯುದ್ಧವನ್ನು ಅಪ್ಪಿಕೊಂಡೆ! ಭಾನುಮತಿ ನಿಮ್ಮ ಸೋದರಮಾವನಾದ ಶಕುನಿಯ ಮಾತನ್ನು ಕೇಳಿ ಕೆಟ್ಟಿರೆಂದು ಲೋಕ ಆಡಿಕೊಳ್ಳುತ್ತಿದೆ! ದುರ್ಯೋಧನ (ಯೋಚಿಸುವವನಂತೆ ಮಾಡಿ) ಇರಬಹುದು! ಆದರೆ, ಇಂದಿನ ಯುದ್ಧದಲ್ಲಿ ಅವನೂ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡು, ತಾನೂ ಹೋರಾಡಿ ಮರಣಿಸಿದ! ಭಾನುಮತಿ ಅದೇ ಯುದ್ಧದ ಕರಾಳ ಹಸ್ತ ಪ್ರಭು! ಯುದ್ಧವು, ಯುದ್ಧಕ್ಕೆ ಕಾರಣರಾದವರನ್ನೂ ಕಬಳಿಸದೆ ಬಿಡದು. ದುರ್ಯೋಧ ಸತ್ಯ ದೇವಿ! ಆದರೀಗ ಎಲ್ಲವೂ ನನ್ನ ಕೈಮೀರಿಹೋಗಿದೆ. ನಾನು ಸಾಗುತ್ತಿರುವುದು ಏಕಮುಖ ಮಾರ್ಗದಲ್ಲಿ. ಗೆಳೆಯ ಕರ್ಣನನ್ನೂ, ಗುರುಹಿರಿಯರನ್ನೂ, ದುಶ್ಯಾಸನಾದಿಯಾಗಿ ನನ್ನ ತೊಂಬತ್ತೊಂಬತ್ತು ಮಂದಿ ತಮ್ಮಂದಿರನ್ನೂ ಯುದ್ಧಕ್ಕೆ ಬಲಿಗೊಟ್ಟಿದ್ದೇನೆ. ಈಗ ನನ್ನ ತಾಯಿ ಬಂದು ‘ಕಂದಾ, ನಿನ್ನ ತಮ್ಮಂದಿರೆಲ್ಲಿ?’ ಎಂದು ಕೇಳಿದರೆ ನಾನೇನೆಂದು ಉತ್ತರ ಕೊಡಲಿ? ಕುಂತಿಯ ಮಕ್ಕಳು ಕೊಂದರೆಂದು ಹೇಳಲೆ? (ಪ್ರಲಾಪಿಸುತ್ತಾನೆ) (ಹಿನ್ನೆಲೆಯಲ್ಲಿ ಹಾಡು ನಿಧಾನವಾಗಿ, ಶೋಕಗೀತೆಯಾಗಿ ಕೇಳಿಬರುತ್ತದೆ. ರಂಗದ ಮೇಲೆ ಕತ್ತಲು-ಬೆಳಕುಗಳ ಹೊಯ್ದಾಟ) ಗೆಳೆಯಾ! ಗೆಳೆಯಾ! ಜೀವದ ಗೆಳೆಯ! ಇಳೆಯ ಋಣವನು ಮುಗಿಸಿದೆಯಾ? ಉಳಿಸಿ ನನ್ನನ್ನು ಇಳೆಯಲಿ, ನೀನು ಅಳಿದೆಯಾ! ಓ ಎದೆಯ ಗೆಳೆಯ! ಹಗಲೂ ಇರುಳೂ ನೆರಳಿನ ತೆರದಲಿ ಹೆಗಲು ಕೊಟ್ಟು ನೀ ದುಡಿಯುತಲಿದ್ದೆ ಮುಗಿಲಲೋಕದ ಕರೆಯನು ಕೇಳಿ ಅಗಲಿ ಮೇಲಕ್ಕೆ ತೆರಳಿದೆಯಾ? ಗುರುವೇ! ಹಿರಿಯರೆ! ಬಂಧು ಬಾಂಧವರೆ! ಬರಿದೆ ನಿಮ್ಮನ್ನು ಬಲಿಯ ನೀಡಿದೆನು ಅರಿತರಿತೂ ನಾ ಲೋಪವನೆಸಗಿದೆ ಮರೆತು ನನ್ನನ್ನು ಕ್ಷಮಿಸುವಿರೆ? ಹಿರಿಯ ಸೋದರನ ಬೆನ್ನಿಗೆ ನಿಂತು ಮರಳಿ ಬಾರದ ಲೋಕಕೆ ತೆರಳಿದ ಮರೆಯಲಾಗದ ಸೋದರರೆ! ನೂರು ಮಂದಿ ನಾವಿದ್ದೆವು ಅಂದು ಯಾರೂ ಇಲ್ಲದ ಒಬ್ಬನೇ ಇಂದು ಬರದೆ ನಾನಿಲ್ಲಿ ಉಳಿಯುವೆನೆ? (ಮತ್ತೆ ಬೆಳಕು ಸ್ಪಷ್ಟವಾಗುತ್ತದೆ) ಭಾನುಮತಿ (ಅವನ ಕೈಹಿಡಿದು) ಹೃದಯೇಶ್ವರ! ಸಮಾಧಾನ ತಂದುಕೊಳ್ಳಿ. ಅಳಿದವರು ಮರಳಿ ಬರುವರೆ? (ಬಾಗಿಲಿನತ್ತ ನೋಡಿ) ಆರ್ಯಪುತ್ರ! ಅತ್ತೆ ಮಾವಂದಿರು ಸಂಜಯನೊಂದಿಗೆ ಇತ್ತ ಕಡೆಯೇ ಬರುತ್ತಿದ್ದಾರೆ. ದುರ್ಯೋಧನ (ದುರ್ಯೋಧನನು ಸಿಡಿಲೆರಗಿದವನಂತೆ ಥಟ್ಟನೆ ಲಜ್ಜೆಯಿಂದ ತಲೆತಗ್ಗಿಸಿ) ಅಯ್ಯೋ..! ವಿಧಿಯೇ! ಶತ್ರುರಾಜರನ್ನು ಸಂಹರಿಸಿ, ಮಂಗಳವಾದ್ಯಗಳನ್ನು ಮೊಳಗಿಸುತ್ತ, ತಮ್ಮಂದಿರೊಂದಿಗೆ ತೆರಳಿ, ಆನಂದದಿಂದ ಮಾತಾಪಿತರನ್ನು ಕಾಣಬೇಕೆಂದಿದ್ದೆ. ಆದರಿಂದು ತಮ್ಮಂದಿರಿಲ್ಲದೆ ಏಕಾಂಗಿಯಾಗಿ ನಾನವರನ್ನು ಎದುರುಗೊಳ್ಳುವಂತಾಯ್ತೆ? ಕಣ್ಣೀರ್ಗರೆಯುತ್ತಿರುವ ಅವರನ್ನು ನೋಡುವಂತಾಯಿತೆ? ಅವರನ್ನು ಹೇಗೆ ಎದುರಿಸಲಿ? ಹೇಗೆ ಸಮಾಧಾನಪಡಿಸಲಿ? (ದುಃಖದಿಂದ ಕುಸಿಯುತ್ತಾನೆ. ಅದೇ ಸಮಯಕ್ಕೆ ಸಂಜಯನು ಧೃತರಾಷ್ಟ್ರನನ್ನು ಕೈಹಿಡಿದು ಕರೆತರುತ್ತಾನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ಧೃತರಾಷ್ಟ್ರನ ಪತ್ನಿ ಗಾಂಧಾರಿ, ಗಂಡನ ಹೆಗಲಮೇಲೆ ಕೈಯಿಟ್ಟುಕೊಂಡು ಬರುತ್ತಾಳೆ. ಸೊಸೆ ಭಾನುಮತಿಯು ಹಿರಿಯರಿಗೆ ನಮಸ್ಕರಿಸಿ ಪಕ್ಕಕ್ಕೆ ಸರಿದು ನಿಲ್ಲುತ್ತಾಳೆ) ಸಂಜಯ (ವಿನಯದಿಂದ) ದುರ್ಯೋಧನ ಸಾರ್ವಭೌಮ! ನಿನ್ನ ವೃದ್ಧ ಮಾತಾಪಿತೃಗಳು ನಿನ್ನನ್ನು ಕಾಣಬೇಕೆಂದು ಅಪೇಕ್ಷೆಪಟ್ಟಿದ್ದರಿಂದ ಅವರನ್ನಿಲ್ಲಿಗೆ ಕರೆದುತಂದಿದ್ದೇನೆ. ದುರ್ಯೋಧನ (ತಲೆತಗ್ಗಿಸಿಕೊಂಡು) ಮಾತಾಪಿತರಿಗೆ ನಿಮ್ಮ ಮಗನಾದ ದುರ್ಯೋಧನನು ನಮಸ್ಕರಿಸುತ್ತಿದ್ದೇನೆ. (ನಮಸ್ಕರಿಸುವನು) ಧೃತರಾಷ್ಟ್ರ ಆಯುಷ್ಮಾನ್ ಭವ! (ಹತ್ತಿರ ಬಂದು ಕೈಗಳನ್ನು ಮುಂದೆ ಚಾಚಿ ತಡಕಾಡುತ್ತ) ಪುತ್ರ! ದುರ್ಯೋಧನ! ನೊಂದುಕೊಳ್ಳಬೇಡ. ಸಂಜಯನು ನನಗೆ ಯುದ್ಧದ ಎಲ್ಲಾ ವಿಷಯಗಳನ್ನು ಹೇಳಿದ್ದಾನೆ. ಆಗಿದ್ದು ಆಗಿಹೋಯಿತು. ಗುರುಹಿರಿಯರ ಮಾತು ಕೇಳದೆ ನೀನು ದುಡುಕಿಬಿಟ್ಟೆ. ಕಳೆದುದಕ್ಕೆ ಚಿಂತಿಸಿ ಫಲವಿಲ್ಲ. ಧರ್ಮರಾಯನು ಈಗಲೂ ನನ್ನ ಮಾತು ಕೇಳುತ್ತಾನೆ. ನೀನು ಸಂಧಿಗೆ ಒಪ್ಪಿ, ಅವರ ಪಾಲಿನ ರಾಜ್ಯವನ್ನು ಕೊಟ್ಟುಬಿಡಬಾರದೆ? ದುರ್ಯೋಧನ (ಅಸಮಾಧಾನದಿಂದ) ಕ್ಷಮಿಸಿ ತಂದೆ. ಈ ನಿಮ್ಮ ಮಗನ ಅಪರಾಧವನ್ನು ಮನ್ನಿಸಿಬಿಡಿ. ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನಾನು ಯುದ್ಧವನ್ನು ಮುಂದುವರೆಸುತ್ತೇನೆ. ಧೃತರಾಷ್ಟ್ರ ಮಗನೇ! ಯುದ್ಧದ ಮುಂದುವರಿಕೆಯ ಯೋಚನೆಯನ್ನು ಬಿಡು. ಸತ್ತ ಮಕ್ಕಳು ಸತ್ತುಹೋದರು. ಸತ್ತವರನ್ನು ಮರಳಿ ತರಬಲ್ಲೆವೆ? ನೀನೊಬ್ಬನುಳಿದರೆ ನಮಗೆ ಅದೇ ಸಾಕು. ಸೇಡು ಬೇಡ. ಸೇಡು ಮರಿಹಾಕುತ್ತಲೇ ಇರುತ್ತದೆ. ದುರ್ಯೋಧನ ನನ್ನದು ಸೇಡಲ್ಲ ತಂದೆ. ಭೀಮನ ಮೇಲಿನ ಕೋಪ ಮತ್ತು ನನ್ನ ಸ್ವಾಭಿಮಾನ! ಧೃತರಾಷ್ಟ್ರ ಅವರೂ ಹಾಗೇ ಭಾವಿಸುತ್ತಾರೆ ಕುಮಾರ! ಅಲ್ಲದೆ ಧರ್ಮನಿಗೆ ತಮ್ಮಂದಿರೆಂದರೆ ಪ್ರಾಣ. ಅವನು ತನ್ನ ನಾಲ್ವರು ತಮ್ಮಂದಿರಲ್ಲಿ ಒಬ್ಬನು ಸತ್ತರೂ ತಾನು ಬದುಕಿ ಉಳಿಯುವುದಿಲ್ಲವೆಂದು ಪ್ರತಿಜ್ಞೆ ಬೇರೆ ಮಾಡಿದ್ದಾನಂತೆ! ದುರ್ಯೋಧನ ತಂದೆಯೇ! ತನ್ನ ನಾಲ್ವರು ತಮ್ಮಂದಿರಲ್ಲಿ ಒಬ್ಬ ಸತ್ತರೂ ಧರ್ಮರಾಯನು ಉಳಿಯುವುದಿಲ್ಲವೆಂದಾದರೆ, ನನ್ನ ತೊಂಬತ್ತೊಂಬತ್ತು ಮಂದಿ ತಮ್ಮಂದಿರೂ ನನಗಾಗಿ ಜೀವ ತೆತ್ತಿದ್ದಾರೆ. ನಾನು ಹೇಗೆ ಸಂಧಿಗೆ ಒಡಂಬಡಲಿ? ಗಾಂಧಾರಿ ಮಗನೇ! ನನ್ನ ನೂರು ಮಂದಿ ಮಕ್ಕಳಲ್ಲಿ ನೀನೊಬ್ಬನು ಮಾತ್ರ ಉಳಿದಿರುವೆ. ನೀನೂ ನಮ್ಮನ್ನಗಲಿ ಹೋಗಬೇಡ. ನೀನೊಬ್ಬನಿದ್ದರೆ ನಮಗೆಲ್ಲವೂ ಇದ್ದಂತೆ. ನೀನು ನಮ್ಮೊಡನಿರುತ್ತೇನೆಂದು ಹೇಳು ಕಂದಾ! ನಿನ್ನ ತಂದೆಯ ಮಾತನ್ನು ಕೇಳು. ಮುದುಕರಾದ ಈ ಕುರುಡರಿಗೆ ಆಸರೆಯಾಗು. (ಕಣ್ಣೀರ್ಗರೆಯುತ್ತಾಳೆ) ದುರ್ಯೋಧನ ಮಾತೆ! ನನ್ನವರೆಲ್ಲ ಇಲ್ಲವಾದರು. ಈಗ ನಾನು ಯಾರೊಡನೆ ಅಕ್ಕರೆಯಿಂದ ಮಾತನಾಡಲಿ? ಯಾರೊಡನೆ ಓಲಗದಲ್ಲಿ ಇರಲಿ? ಯಾರೊಡನೆ ವಿಹಾರಕ್ಕೆ ಹೋಗಲಿ? ನನಗೇನೂ ಬೇಡವಾಗಿದೆ! ಧೃತರಾಷ್ಟ್ರ ಕುಮಾರ! ವೀರಾಧಿವೀರರೆಲ್ಲ ಅಳಿದುಹೋಗಿರುವಾಗ ಯುದ್ಧವನ್ನು ಮುಂದುವರೆಸುವುದು ಕ್ಷೇಮವಲ್ಲ! ದುರ್ಯೋಧನ ತಂದೆಯೇ! ನಾಳಿನ ಯುದ್ಧಕ್ಕೆ ಮದ್ರಭೂಪತಿಯಾದ ಶಲ್ಯನನ್ನು ಸೇನಾನಾಯಕನನ್ನಾಗಿ ಮಾಡಿದ್ದೇನೆ. ಅವನೂ ಅಳಿದರೆ ನಾನೇ ಮುನ್ನಡೆಸುತ್ತೇನೆ. ಅದು ಬಿಟ್ಟು ನನ್ನ ವೈರಿಗಳೊಂದಿಗೆ ಸಂಧಿಯ ಮಾತು ಅಂದೂ ಇಲ್ಲ! ಇಂದೂ ಇಲ್ಲ! ಮುಂದೂ ಇಲ್ಲ! ಧೃತರಾಷ್ಟ್ರ ಮಗನೇ! ಯುದ್ಧದಲ್ಲಿ ನಿನಗೇನಾದರೂ ಆದರೆ ನಾವು ಜೀವಂತವಾಗಿ ಉಳಿಯುವುದಿಲ್ಲ. ನಮಗಿನ್ನಾರಿದ್ದಾರೆ? ದುರ್ಯೋಧನ ತಂದೆಯೇ! ಒಂದು ವೇಳೆ ಯುದ್ಧದಲ್ಲಿ ನಾನು ಸತ್ತರೆ ನಾನು ಮಗನಾದಂತೆ ಧರ್ಮರಾಯನೂ ನಿಮಗೆ ಮಗನಲ್ಲವೆ? ನೀವು ಅವನೊಂದಿಗಿರಿ! ಧೃತರಾಷ್ಟ್ರ (ಮಗನನ್ನು ತಬ್ಬಿ ಗೋಳಾಡುತ್ತ) ಮಗನೇ! ನೀನು ನಮ್ಮ ಮಾತು ಕೇಳದೆ ವೈರವನ್ನೇ ಸಾಧಿಸುವುದಾದರೆ, ಕುರುಕುಲ ಪಿತಾಮಹರಾದ ಭೀಷ್ಮರು ಇನ್ನೂ ಬದುಕಿದ್ದಾರೆ. ಅವರೊಡನೆ ಸಮಾಲೋಚಿಸಿ ಮುಂದಿನ ಹೆಜ್ಜೆಯನ್ನಿಡು! ದುರ್ಯೋಧನ (ಸಮಾಧಾನ ತಂದುಕೊಂಡು) ಆಗಲಿ ತಂದೆ! ನಿಮ್ಮ ಅಪ್ಪಣೆಯಂತೆಯೇ ಆಗಲಿ. ನಾನೀಗಲೇ ಹೋಗಿ ಭೀಷ್ಮಪಿತಾಮಹರನ್ನು ಕಂಡು, ಅವರ ಸಲಹೆಯನ್ನು ಪಡೆಯುತ್ತೇನೆ. (ಗಾಂಧಾರಿಯತ್ತ ನೋಡಿ) ಮಾತೆ! ನನಗೆ ಅನುಮತಿ ಕೊಡಿ. ಗಾಂಧಾರಿ (ಕಣ್ಣೀರ್ಗರೆಯುತ್ತ) ಮಗೂ! ನೀನು ನಿನ್ನ ಛಲವನ್ನೇ ಅಪ್ಪಿಕೊಂಡಿರುವೆ. ಹೋಗಿ ಬಾ! ನಿನಗೆ ಒಳಿತಾಗಲಿ! ದುರ್ಯೋಧನ (ಭಾನುಮತಿಯತ್ತ ತಿರುಗಿ) ದೇವಿ! ನೀನು ಹೇಳಿದ ಮಾತುಗಳೆಲ್ಲ ನನ್ನ ಮನದಲ್ಲಿವೆ. ಆದರೆ, ಯುದ್ಧವನ್ನು ಅಪ್ಪಿಕೊಂಡಿರುವ ನನಗೆ ಅದನ್ನು ಮುಂದುವರಿಸದೆ ಬೇರೆ ಮಾರ್ಗವೇ ಇಲ್ಲ. ನಾನಿನ್ನು ಹೊರಡುವೆ. (ದುರ್ಯೋಧನನು ಕಿರೀಟವನ್ನು ತೆಗೆದಿಟ್ಟು ಗದೆಯನ್ನು ಹೆಗಲಿಗೇರಿಸಿ, ಹೊರಡಲು ಸಿದ್ಧನಾಗುವನು) ಧೃತರಾಷ್ಟ್ರ (ನಿಟ್ಟುಸಿರೊಂದನ್ನು ಹೊರಹಾಕಿ) ಸಂಜಯ! ಬೆಳಕಿನ ಸೂಡಿಯೊಂದನ್ನು ಹಿಡಿದು ನೀನೂ ಕುಮಾರನೊಡನೆ ಹೋಗಿ ಬಾ! ಸಂಜಯ ಆಗಲಿ ಪ್ರಭು! ನಾನೂ ಹೊರಟೆ. (ದೀವಟಿಗೆಯೊಂದನ್ನು ಕೈಯಲ್ಲಿ ಹಿಡಿದು, ಹೊರಡುವನು)
©2024 Book Brahma Private Limited.