ಹುತ್ತಯ್ಯ

Author : ಸಿ.ಎಂ.ಗೋವಿಂದರೆಡ್ಡಿ

Pages 114

₹ 100.00




Year of Publication: 2019
Published by: ಮಹಿಮಾ ಪ್ರಕಾಶನ
Address: No.1393/2, C.H-31, 6th cross, Krishnamurthypuram, Mysuru-570004
Phone: 9448759815

Synopsys

ಪುರಾಣದ ಮಹಾಕತ್ತಲೆಯಲ್ಲಿ ಮಿಂಚುಹುಳುವಿನ ಈಜಾಟ ನಡೆಸಿದ ಗೋವಿಂದರೆಡ್ಡಿಯವರು “ವಲ್ಮೀಕದಿಂದ (=ಹುತ್ತದಿಂದ) ಬಂದವನು ವಾಲ್ಮೀಕಿ (=ಹುತ್ತಯ್ಯ) ಆದ” - ಎಂಬ ಎಳೆಯನ್ನು ಹಿಡಿದು ವಿವಿಧ ಕಾಲ್ಪನಿಕ ಘಟನೆಗಳನ್ನು ಸಂಘಟನೆ ಮಾಡುತ್ತಾ ಈ ನಾಟಕವನ್ನು ರಚಿಸಿದ್ದಾರೆ. ಸಿಹಿಯಾದ ಜೀವಕೇಂದ್ರಿತ ದೃಷ್ಟಿಯಿಂದ ಯಥೋಚಿತವಾದ ಸನ್ನಿವೇಶ ಮತ್ತು ಆವರಣವನ್ನು ಬಹಳ ಜಾಣ್ಮೆಯಿಂದ ಅಳವಡಿಸಿದ್ದಾರೆ. ಮಾನವಕೇಂದ್ರಿತ ದೃಷ್ಟಿಕೋನವು ೯೦ ಡಿಗ್ರಿಯ ನೇರನೋಟ. ತನ್ನ ಮೂಗಿನ ನೇರಕ್ಕೆ ಮಾತ್ರ ನೋಡದೆ, ೩೬೦ ಡಿಗ್ರಿಯ ಸುತ್ತಳತೆಯ ನೋಟದಲ್ಲಿ ಎಲ್ಲವನ್ನೂ ಒಳಗೊಳ್ಳುವ ಜೀವಕೇಂದ್ರಿತ ದೃಷ್ಟಿ ಗೋವಿಂದರೆಡ್ಡಿಯ ವೈಶಿಷ್ಟ್ಯ! ನಿಸರ್ಗ ಮತ್ತು ನಾಗರಿಕತೆ ಎರಡು ವಿರುದ್ಧ ಧ್ರುವಗಳಂತೆ ಆಗಿಬಿಟ್ಟಿರುವ ಪ್ರಸ್ತುತ ಸಂದರ್ಭದಲ್ಲಿ ಈ ನಾಟಕದ ನಿಸರ್ಗಸಹಜ ಸೋದರ ಸ್ನೇಹ ಉತ್ತರಮುಖಿಯಾಗಿ ಕಾಣುತ್ತದೆ. ಅರಣ್ಯ ಕಲಿಕೆ > ಗುರುಕುಲ ಕಲಿಕೆ > ಜೀವನ ಕಲಿಕೆಯ ಕೂಡಲಸಂಗಮದಂತೆ ಈ ನಾಟಕವಿದೆ.

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Excerpt / E-Books

ಮೊದಲ ಮಾತು

 

ಪುರಾಣವಾಗಲೀ ಇತಿಹಾಸವಾಗಲೀ ಕಾಳ ಕತ್ತಲೆಯ ಪಯಣವೇ! ಗೊತ್ತಿಲ್ಲದ್ದು ಪುರಾಣ: ಗೊತ್ತಿರುವುದು ಇತಿಹಾಸವೆಂಬ ಮಾತಿದೆಯಾದರೂ ಇತಿಹಾಸವು ಪುರಾಣವಾಗುವ ಮತ್ತು ಪುರಾಣವು ಇತಿಹಾಸವಾಗುವ ಉಭಯ ಪರಿವರ್ತನೆಯ ದೇಶ ನಮ್ಮದು! ವಾಲ್ಮೀಕಿ ಮತ್ತು ಗೌತಮಿಪುತ್ರ ಶಾತಕರ್ಣಿ ಎಂಬ ಹೆಸರು ಬಿಟ್ಟರೆ ಬೇರೇನೂ ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ಕವಿಯ ಕಲ್ಪನಾವಿಲಾಸವೇ ಗತಿ ಮತಿ. ಈ ದೃಷ್ಟಿಯಿಂದ ೧೯೬೩ರಲ್ಲಿ ರಿಲೀಸ್ ಆದ ತೆಲುಗು ಮತ್ತು ಕನ್ನಡದ ಜಂಟಿ ನಿರ್ಮಾಣದ ‘ವಾಲ್ಮೀಕಿ’ (ಚಿತ್ರಕತೆ + ನಿರ್ದೇಶನ : ಸಿ.ಎಸ್.ರಾವ್) ಹಾಗೂ ೨೦೧೭ರಲ್ಲಿ ರಿಲೀಸ್ ಆದ ‘ಗೌತಮಿಪುತ್ರ ಶಾತಕರ್ಣಿ’ (ಚಿತ್ರಕತೆ + ನಿರ್ದೇಶನ : ಕ್ರಿಶ್) ಗಮನಾರ್ಹವಾದುವು. ವಾಲ್ಮೀಕಿ ಪೌರಾಣಿಕ ಸಿನಿಮಾ ಮತ್ತು ಗೌತಮಿಪುತ್ರ ಶಾತಕರ್ಣಿ ಐತಿಹಾಸಿಕ ಸಿನಿಮಾ - ಎಂಬುದನ್ನು ಬಿಟ್ಟರೆ ಎರಡೂ ಸಿನಿಮಾಗಳಿಗೆ ಕಲ್ಪನಾವಿಲಾಸವೇ ಜೀವನಾಡಿ. ಆದ್ದರಿಂದ ಗತಕಾಲದ ವಸ್ತುವನ್ನು ಆಯ್ಕೆ ಮಾಡಿಕೊಂಡಾಗ ಲೇಖಕನೊಬ್ಬ ಅದನ್ನು ಹೇಗೆ ನಿರ್ವಹಣೆ ಮಾಡುತ್ತಾನೆಂಬುದೇ ಬಹುಮುಖ್ಯ!

ಆತ್ಮೀಯ ಗೆಳೆಯ ಡಾ.ಸಿ.ಎಂ.ಗೋವಿಂದರೆಡ್ಡಿಯವರು ವಾಲ್ಮೀಕಿಯನ್ನು ಕುರಿತು ‘ಹುತ್ತಯ್ಯ’ ಎಂಬ ನಾಟಕವನ್ನು ಬರೆದು ಮೊದಲ ಮಾತು ಬರೆಯಲು ನನ್ನ ಕೈಯಲ್ಲಿ ಇಟ್ಟರು. ಪುರಾಣದ ಮಹಾಕತ್ತಲೆಯಲ್ಲಿ ಮಿಂಚುಹುಳುವಿನ ಈಜಾಟ ನಡೆಸಿದ ಗೋವಿಂದರೆಡ್ಡಿಯವರು “ವಲ್ಮೀಕದಿಂದ (=ಹುತ್ತದಿಂದ) ಬಂದವನು ವಾಲ್ಮೀಕಿ (=ಹುತ್ತಯ್ಯ) ಆದ” - ಎಂಬ ಎಳೆಯನ್ನು ಹಿಡಿದು ವಿವಿಧ ಕಾಲ್ಪನಿಕ ಘಟನೆಗಳನ್ನು ಸಂಘಟನೆ ಮಾಡುತ್ತಾ ಈ ನಾಟಕವನ್ನು ರಚಿಸಿದ್ದಾರೆ. ಕಾಡಮ್ಮತಾಯಿ ದೇವರನ್ನು ಪೂಜಿಸುವ ಬೇಡರಹಟ್ಟಿ > ಅನಿಕೇತನ ದೇವಾಲಯವಾದ  ದೇವಗನ್ನೇರು ಮರ > ಸಂತಾನಹೀನ ಬೇಡ+ಬೇಡತಿಗೆ ಗಂಡುಮಗುವನ್ನು ಕರುಣಿಸುವ ವೃಕ್ಷಮಾತೆ > ತನ್ನ ತಾಯಿಯ ಮನದಾಸೆ ಪೂರೈಸಲು ಎಳವೆಯಿಂದ ದೃಢಸಂಕಲ್ಪ ತೊಡುವ ರಕ್ಷ > ತನ್ನ ತಂದೆಯ ಮಾರ್ಗದರ್ಶನದಲ್ಲಿ ಸಕಲ ಜೀವಜಾಲಕ್ಕೆ ರಕ್ಷನು ಸ್ಪಂದಿಸುತ್ತಾ ಅವುಗಳಿಂದಲೇ ಪಡೆದ ನಿಸರ್ಗಸಹಜ ಶಿಕ್ಷಣ > ಅರಣ್ಯ ವಿಶ್ವವಿದ್ಯಾಲಯದಲ್ಲಿ ಅರಳುವ ರಕ್ಷನ ವ್ಯಕ್ತಿತ್ವದ ಗಟ್ಟಿತನ > ಪಂಚಭೂತಗಳಂತೆ ಸಾರ್ವಜನಿಕವಾಗಿ ಇರಬೇಕಾದ ವಿದ್ಯೆಯು ಗುರುಕುಲದ ಕಂಚುಕೋಟೆಯಲ್ಲಿ ಕುಲೀನಜಾತಿಗಳ ಹಿತಾಸಕ್ತಿ ಕಾಯುವ, ಖಾಸಗಿ ಆಸ್ತಿಯಾಗಿ ಪರಿಣಮಿಸುವುದು > ಬಾಲಕ ರಕ್ಷನಲ್ಲಿ ಹುಟ್ಟುವ ಜ್ಞಾನದ ದಾಹ > ಜಾತಿಪದ್ಧತಿಯ ಕಟ್ಟುಪಾಡುಗಳನ್ನು ಮೀರಿ ರಕ್ಷನಿಗೆ ವಿದ್ಯೆ ಹೇಳಿಕೊಡಲು ಒಪ್ಪುವ ಪ್ರಚೇತಸ ಮಹರ್ಷಿಯ ಉದಾತ್ತ ವ್ಯಕ್ತಿತ್ವ > ಆರಂಭದಲ್ಲಿ ರಕ್ಷನ ಪ್ರವೇಶಕ್ಕೆ ತಡೆಯಾಗಿ ನಂತರ ರಕ್ಷನನ್ನು ಸ್ವೀಕರಿಸುವ ಸಹಪಾಠಿ ವಟುಗಳ ಮನಃಪರಿವರ್ತನೆ > ವಿದ್ಯೆ ಪಡೆದು ಹಿಂದಿರುಗುವ ರಕ್ಷನು ತಾಯಿ ತಂದೆಯನ್ನು ಒಪ್ಪಿಸಿ, ಬ್ರಹ್ಮಜ್ಞಾನದ ಅನ್ವೇಷಣೆಗೆ ತೆರಳುವುದು > ಮಾರ್ಗ ಮಧ್ಯೆ ಮೊಸಳೆಯ ಗಂಡಾಂತರದಿಂದ ತನ್ನನ್ನು ಪಾರುಮಾಡಿದ ಚಂಪಾಲತೆ ಜೊತೆಗೆ ರಾತ್ರಿ ಕಳೆಯಬೇಕಾದ ರಕ್ಷನ ಅನಿವಾರ್ಯತೆ > ಬೇಡರ ನ್ಯಾಯ ಸಂಹಿತೆಯಂತೆ ತನ್ನ ಜೀವವುಳಿಸಿದ ಚಂಪಾಲತೆಯ ಪ್ರಾಣರಕ್ಷಣೆಗಾಗಿ ಆಕೆಯನ್ನು ಮದುವೆಮಾಡಿಕೊಳ್ಳುವ ರಕ್ಷನ ನಿರ್ಧಾರ > ಬ್ರಹ್ಮಜ್ಞಾನದ ಸ್ವಾರ್ಥ ಮತ್ತು ಅಹಂಕಾರವನ್ನು ನೀಗಿಕೊಂಡು ಎಲ್ಲರಲ್ಲಿ ಒಂದಾಗಿ ಬಾಳುವ ಬದಲಾದ ಜೀವನಶೈಲಿ > ಬೇಡರ ಪದ್ಧತಿ ಪ್ರಕಾರ ದಾರಿಹೋಕರನ್ನು ಬಡಿದು ದೋಚುವ ದರೋಡೆತನ > ನಾರದ ಮಹರ್ಷಿಯನ್ನು ಹಿಡಿದು ತರುವ ಬೇಡರ ಪಡೆ > ತನ್ನ ಪಾಪ ಪುಣ್ಯಗಳಿಗೆ ಯಾರೊಬ್ಬರೂ ಪಾಲುದಾರರಿಲ್ಲವೆಂಬ ಅರಿವು ರಕ್ಷನಿಗೆ ಆಗುವುದು > ತನ್ನ ಕೃತ್ಯಕ್ಕೆ ತಾನೇ ಹೊಣೆ ಎಂದರಿತು ಬದಲಾಗುವ ರಕ್ಷನಿಗೆ ನಾರದ ಮಹರ್ಷಿಯಿಂದ ರಾಮನಾಮ ತಾರಕ ಮಂತ್ರೋಪದೇಶ > ರಾಮಾಯಣದ ಬ್ಲೂಪ್ರಿಂಟ್ ಒದಗಿಸುವ ನಾರದನ ನಿರೂಪಣೆ > ಹುತ್ತಗಟ್ಟಿದ ಚಿತ್ತದಿಂದ ಒಡಮೂಡುವ ಆದಿ ಮಹಾಕಾವ್ಯ > ಬೇಡನೊಬ್ಬ ಕ್ರೌಂಚ ಮಿಥುನವನ್ನು ಕೆಡವಿ ಬೀಳಿಸಿದಾಗ, ವಾಲ್ಮೀಕಿಯಲ್ಲಿ ಹುಟ್ಟಿದ ಶೋಕಭಾವವೇ ಶ್ಲೋಕವಾಗಿ ಹೊರಹೊಮ್ಮುವುದು > ಪ್ರಜಾಧರ್ಮ ಪಾಲನೆಗಾಗಿ ರಾಮನಿಂದ ಸೀತಾಪರಿತ್ಯಾಗ > ವಾಲ್ಮೀಕಿ ಆಶ್ರಮದಲ್ಲಿ ಸೀತೆಯ ಸಂರಕ್ಷಣೆ, ಲವಕುಶರ ಜನನ > ವಾಲ್ಮೀಕಿ ಮತ್ತು ಭಾರದ್ವಾಜನ ಮಾತುಕತೆ, ಉತ್ತರ ರಾಮಾಯಣದ ಪ್ರಮುಖ ಘಟನೆಗಳ ಪಕ್ಷಿನೋಟ > ಭಾರದ್ವಾಜನ ಪ್ರಶಂಸೆಗೆ ವಾಲ್ಮೀಕಿಯು ಸಂಭ್ರಮಿತನಾಗದೆ, ಎಲ್ಲವೂ ರಾಮನಾಮ ತಾರಕಮಂತ್ರದ ಮಹಿಮೆಯೆಂದು ಸಾರುವುದು > ವ್ಯಷ್ಟಿಯು ಸಮಷ್ಟಿಯ ಹಿತಕ್ಕೆ ಬದ್ಧವಾಗಿ ಸ್ವಾರ್ಥ ಬುದ್ಧಿ ಮತ್ತು ಅಹಂಕಾರದಿಂದ ಪಾರಾಗುವುದೇ ರಾಮತತ್ವವೆಂಬ ಕಾಣ್ಕೆ > ಇಂಥ ನಿಸ್ವಾರ್ಥ ಮತ್ತು ನಿರಹಂಕಾರದ ರಾಮತತ್ವವೇ ರಾಮಾಯಣವಾಗಿ ಒಡಮೂಡಿದೆಯೆನ್ನುವ ವಾಲ್ಮೀಕಿಯ ದರ್ಶನ - ಇದಿಷ್ಟು ಕತೆಯ ಕಣಕಕ್ಕೆ ಹೂರಣದಂತೆ.

ಸಿಹಿಯಾದ ಜೀವಕೇಂದ್ರಿತ ದೃಷ್ಟಿಯಿಂದ ಯಥೋಚಿತವಾದ ಸನ್ನಿವೇಶ ಮತ್ತು ಆವರಣವನ್ನು ಗೋವಿಂದರೆಡ್ಡಿಯವರು ಜಾಣ್ಮೆಯಿಂದ ಅಳವಡಿಸಿದ್ದಾರೆ. ಮಾನವಕೇಂದ್ರಿತ ದೃಷ್ಟಿಕೋನವು ೯೦ ಡಿಗ್ರಿಯ ನೇರನೋಟ. ತನ್ನ ಮೂಗಿನ ನೇರಕ್ಕೆ ಮಾತ್ರ ನೋಡದೆ, ೩೬೦ ಡಿಗ್ರಿಯ ಸುತ್ತಳತೆಯ ನೋಟದಲ್ಲಿ ಎಲ್ಲವನ್ನೂ ಒಳಗೊಳ್ಳುವ ಜೀವಕೇಂದ್ರಿತ ದೃಷ್ಟಿ ಗೋವಿಂದರೆಡ್ಡಿಯ ವೈಶಿಷ್ಟ್ಯ! ಪೊಂಗುಳಿ ಅಥವಾ ಮಳೆಕೋಗಿಲೆಯಲ್ಲಿ ಕಂಡುಬರುವ ಸಂಕುಲ ಸಂರಕ್ಷಣೆಯ ಆಹ್ವಾನ ತತ್ವ > ತೇನೆಹಕ್ಕಿಯ ಕಾಡಿನ ಕಾವಲು ಕಾಯಕ > ಅಂಡಜ ಸರ್ಪದ ನಾಗಮಣಿ ಪ್ರಸಂಗದಿಂದ ಪ್ರೇರಣೆ ಪಡೆದು ತಾನು ಕೂಡ ಮಾನವರತ್ನವಾಗಬೇಕೆಂಬ ಅಚಲ ಸಂಕಲ್ಪ > ಕತ್ತಲೆಯ ಮಹಾಸಾಗರದಲ್ಲಿ ಈಜುತ್ತಾ ಬರುವ ಮಿಂಚುಹುಳುವಿನ ಸ್ಫೂರ್ತಿ > ರಾತ್ರಿಯ ಆಕಾಶದಲ್ಲಿ ತಲೆಯೆತ್ತಿ ನೋಡಿದರೆ ಪ್ರಶ್ನೆಚಿಹ್ನೆಯಾಗಿ ತೋರುವ ಸಪ್ತರ್ಷಿಮಂಡಲ > ಅನಾದಿಕಾಲದ ಮಹಾವ್ಯಾಧ ನಕ್ಷತ್ರಪುಂಜದ ಸಮಾನಧರ್ಮದ ಪ್ರಭಾವಳಿ > ಎದೆಯ ಒಕ್ಕಲುತನಕ್ಕೆ ಪ್ರತೀಕವಾದ ಬಾನಿನಲ್ಲಿ ಬಿತ್ತಿದ ನಕ್ಷತ್ರಕೂರಿಗೆ > ಸತಿಯೊಡನೆ ಸಹಗಮನವೆಂಬಂತೆ ಕಲ್ಲಿನ ಹರಳು ನುಂಗಿ ಮೇಲಕ್ಕೆ ಹಾರಿ ದೊಪ್ಪನೆ ಬಿದ್ದು ಪ್ರಾಣ ಕಳೆದುಕೊಳ್ಳುವ ‘ಹರಳು ಚೋರೆ’ಯ ವಿಸರ್ಜನ ತತ್ವ [=ಆಹ್ವಾನ ಮತ್ತು ವಿಸರ್ಜನೆ] ಇವೇ ಮುಂತಾದುವನ್ನು ನಿಸರ್ಗ ಸನ್ನಿಧಿಯಿಂದ ಕಂಡುಕೊಳ್ಳುವ ಹುತ್ತಯ್ಯನ ವ್ಯಕ್ತಿತ್ವ ಬಹು ದೊಡ್ಡದು. ನಿಸರ್ಗ ಮತ್ತು ನಾಗರಿಕತೆ ಎರಡು ವಿರುದ್ಧ ಧ್ರುವಗಳಂತೆ ಆಗಿಬಿಟ್ಟಿರುವ ಪ್ರಸ್ತುತ ಸಂದರ್ಭದಲ್ಲಿ ಈ ನಾಟಕದ ನಿಸರ್ಗಸಹಜ ಸೋದರ ಸ್ನೇಹ ಉತ್ತರಮುಖಿಯಾಗಿ ಕಾಣುತ್ತದೆ. ಅರಣ್ಯ ಕಲಿಕೆ > ಗುರುಕುಲ ಕಲಿಕೆ > ಜೀವನ ಕಲಿಕೆಯ ಕೂಡಲಸಂಗಮದಂತೆ ಈ ನಾಟಕವಿದೆ. ಇಂಥದೊಂದು ನಾಟಕವನ್ನು ಬರೆದು ಮೊದಲ ಮಾತುಗಳನ್ನು ನನ್ನಿಂದ ಪ್ರೀತಿಪೂರ್ವಕ ಬರೆಸಿದ ಗೆಳೆಯ ಗೋವಿಂದರೆಡ್ಡಿಗೆ ಸಮಸ್ತ ಶುಭಾಶಯಗಳು.

                                            -ಡಾ.ಚಂದ್ರಶೇಖರ ನಂಗಲಿ

 

Related Books