ಸುಜ್ಞಾನಮಣಿ-ಲೇಖಕ ಅರವಿಂದ ಚಂದ್ರಕಾಂತ ಶ್ಯಾನಭಾಗ ಅವರ ಕೃತಿ. ಕೃತಿಯಲ್ಲಿ ಒಟ್ಟು 12 ಸಂದರ್ಶನಗಳಿವೆ. ಪ್ರೊ. ರಾಜಶೇಖರ ಭೂಸನೂರಮಠ, ಡಾ. ಗಿರೀಶಚಂದ್ರ, ಹೆಚ್. ರಮೇಶ, ಡಾ. ಬಿ.ಎಂ ಹೆಗ್ಡೆ, ಪ್ರೊ. ನರೇಂದ್ರ ನಾಯಕ, ಡಾ. ವಿಜಯಕುಮಾರ ಗಿಡ್ನವರ, ಶ್ರೀಮತಿ ಹರಿಪ್ರಸಾದ, ಡಾ. ಚೇತನ ನಾಯಕ, ಪ್ರೊ. ಹಾಲ್ದೊಡ್ಡೇರಿ ಸುಧೀಂದ್ರ, ಶ್ರೀ ವಚನಾನಂದ ಸ್ವಾಮೀಜಿ, ಡಾ. ಉದಯ ರಾಯ್ಕರ ಮತ್ತು ಚಂದ್ರಶೇಖರ ರೆಡ್ಡಿ ಇವರೊಂದಿಗೆ ನಡೆಸಿದ ಸಂದರ್ಶನಗಳಿವೆ. ಸಂದರ್ಶನ ನೀಡಿದ ಮಹನೀಯರು ವೈಜ್ಞಾನಿಕ ಕ್ಷೇತ್ರಕ್ಕೆ ಸಂಬಂಧಿಸಿದವರು.
ವೈಜ್ಞಾನಿಕ ವಿಶ್ಲೇಷಣೆಯ ಮುಖಾಮುಖಿ ಸಂಕಥನವೇ ಈ ಪುಸ್ತಕದ ಜೀವಾಳ. ಸೈನ್ಸ್ ಫಿಕ್ಷನ್ ಪಿತಾಮಹ ಪ್ರೊ. ರಾಜಶೇಖರ ಭೂಸನೂರಮಠರು ಸಂದರ್ಶನದಲ್ಲಿ ವೈಜ್ಞಾನಿಕವಾಗಿ ಸಾಹಿತ್ಯವನ್ನು ಮನೋಜ್ಞವಾಗಿ ಬರೆಯುವದು ಹೇಗೆ ಮತ್ತು ಅದನ್ನು ಕಾಲ್ಪನಿಕವಾಗಿ ಚಿತ್ರಿಸಿ ಜನರಿಗೆ ತಲುಪಿಸುವದು ಹೇಗೆಂದು ಮನೋಜ್ಞವಾಗಿ ತಿಳಿಸಿದ್ದಾರೆ. ಭಾಷಾವಿಜ್ಞಾನದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವ ಡಾ. ಗಿರೀಶಚಂದ್ರರು ಸಂಸ್ಕೃತ ಭಾಷೆಯು ಹೇಗೆ ವೈಜ್ಞಾನಿಕವಾಗಿ ರೂಪುಗೊಂಡಿದೆ ಎಂದು ವಿವರಿಸಿದ್ದಾರೆ. ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕದ ಸಂಚಾಲಕ ಹೆಚ್. ರಮೇಶ ಅವರು ವಿಜ್ಞಾನ ಆಂದೋಲನ ಮತ್ತು ಸ್ವದೇಶಿ ಎಂದರೆ ಏನೆನ್ನುವುದನ್ನು ಹೇಳಿದ್ದಾರೆ. ವಿಶ್ವದಾದ್ಯಂತ ಚಿರಪರಿಚಿತ ವೈದ್ಯ ಡಾ. ಬಿ.ಎಂ. ಹೆಗ್ಡೆಯವರು ವೈದ್ಯವಿಜ್ಞಾನ ಮತ್ತು ಆಯುರ್ವೇದ ವಿಜ್ಞಾನದ ವ್ಯತ್ಯಾಸವನ್ನು ತೆರೆದಿಟ್ಟಿದ್ದಾರೆ. ವಿಚಾರವಾದಿ ಪ್ರೊ. ನರೇಂದ್ರ ನಾಯಕರು ಮೌಢ್ಯದ ತೆರೆಮರೆಯ ಪರದೆಯನ್ನು ಕಳಚಿದ್ದಾರೆ. ನಿವೃತ್ತ ಕೃಷಿ ಪ್ರಾಧ್ಯಾಪಕ ಡಾ. ವಿಜಯಕುಮಾರ ಗಿಡ್ನ ಅವರು, ಕೃಷಿಕರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದ್ದಾರೆ.
ಆಕಾಶವಾಣಿಗೆ ಸಂಬಂಧಿಸಿದಂತೆ ಡಾ. ಚೇತನ ನಾಯಕರು ತಮ್ಮ ಅನುಭವದ ನೆಲೆಯಲ್ಲಿ ಶಬ್ದ ತರಂಗಗಳಿಂದ ರೇಡಿಯೋ ಕೇಂದ್ರವು ಕಾರ್ಯನಿರ್ವಹಿಸುವ ಪರಿಯನ್ನು ಸುಲಲಿತವಾಗಿ ಹೇಳಿದ್ದಾರೆ. ಡಿ. ಆರ್. ಡಿ. ಒ. ವಿಜ್ಞಾನಿ ಮತ್ತು ಅಂಕಣಕಾರ ಪ್ರೊ. ಹಾಲ್ದೊಡ್ಡೇರಿ ಸುಧೀಂದ್ರ ಅವರು ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಹೇಗೆ ಜನಪ್ರಿಯಗೊಳಿಸಬಹುದೆನ್ನುವ ವಿಚಾರವನ್ನು ತಿಳಿಸಿದ್ದಾರೆ. ಯೋಗಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಉತ್ತಮ ಆರೋಗ್ಯ ಮತ್ತು ಸುಂದರ ಶಾರೀರವನ್ನು ಹೊಂದಲು ಯೋಗವು ಹೇಗೆ ಸಹಕಾರಿ ಎನ್ನುವದನ್ನು ಉದಾಹರಣೆಗಳ ಸಹಿತ ವಿವರಿಸಿದ್ದಾರೆ.
ವಿಜ್ಞಾನಿ ಮತ್ತು ಸಂಶೋಧಕ ಡಾ. ಉದಯ ರಾಯ್ಕರ ಅವರು ಟೆಲಿಸ್ಕೋಪ್ ತಯಾರಿಕೆಯ ಕುರಿತು ಮಾಹಿತಿ ನೀಡಿದ್ದಾರೆ. ಪ್ರಗತಿಪರ ರೈತ ಚಂದ್ರಶೇಖರ ರೆಡ್ಡಿ ಅವರು ಹೂವಿನ ಕೃಷಿವಿಧಾನವನ್ನು ವಿವರಿಸಿದ್ದಾರೆ. ಗೋಪಾಲಕೃಷ್ಣ ಶಾನಭಾಗರು ಸಮೀಕ್ಷಾತ್ಮಕವಾದ ಮುನ್ನುಡಿಯನ್ನು ಬರೆದಿದ್ದಾರೆ.
©2024 Book Brahma Private Limited.