ಶಾಸನ ಓದು-ಡಾ. ಭೀಮೇಶ ಯರಡೋಣಿ ಹಾಗೂ ಡಾ. ರವಿ ಎಂ. ಸಿದ್ದಿಪುರ ಸಂಯುಕ್ತವಾಗಿ ಬರೆದ ಸಂಶೋಧನಾ ಕೃತಿ. 35ಕ್ಕೂ ಅಧಿಕ ಶಾಸನಗಳನ್ನು ವರ್ತಮಾನದ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪದನ್ವಯ ವಿಶ್ಲೇಷಿಸಲಾಗಿದೆ. ಶಾಸನಗಳ ಮೂಲಪಠ್ಯ, ಸರಳಾನುವಾದ, ಪ್ರಮುಖ ವಿಷಯಗಳು, ದೇಶಿ-ವಿದೇಶಿ ಶಾಸನ ಅಧ್ಯಯನಕಾರರನ್ನು ಒಳಗೊಂಡ ಮೊದಲಾದ ಸಮಗ್ರ ಮಾಹಿತಿಗಳು ಒಂದೆಡೆ ಸೇರಿವೆ. ವಿವಿಧ ಪರೀಕ್ಷೆಗಳಿಗೆ ಒಂದು ನಿರ್ದಿಷ್ಟ ವಿಷಯದಲ್ಲಿ ಹೇಗೆಲ್ಲಾ ಪ್ರಶ್ನೆಗಳನ್ನು ಕೇಳಲು ಸಾಧ್ಯವಿರುತ್ತದೆ ಎಂಬ ಮಾದರಿಗಳು ಇಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಶಾಸನಗಳನ್ನು ಸ್ಪರ್ಧಾತ್ಮಕ ಪರೀಕ್ಷಾ ಮೀಮಾಂಸೆಯ ಹಿನ್ನೆಲೆಯಲ್ಲಿ ವಿವರಿಸಿರುವುದು ಹೊಸ ಓದಿಗೆ ಪ್ರೇರಣೆಯಾಗಿದೆ.
ಕನ್ನಡಕ್ಕೆ ಸಂಬಂಧಿಸಿದ ಬಹು ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷೆಯ ಮಾದರಿ ಬಗೆಗೆ ಸಾಹಿತ್ಯಕ ವಲಯದ ಬಹುತೇಕರು ಮೂಗು ಮುರಿಯುತ್ತಾರೆ. ಅಂತಹವರು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸೀಮಿತವಾದ ’ಪಠ್ಯಕ್ರಮ’ವನ್ನು ಓದಿಸಲಾಗುತ್ತದೆ. ಈ ರೀತಿಯ ನಿರ್ದಿಷ್ಟ ಓದು ಸಹ ಮಾಹಿತಿ ಪ್ರಧಾನವಾಗಿರುತ್ತದೆ. ಜೊತೆಗೆ ಉದ್ಯೋಗಾಕಾಂಕ್ಷಿಗಳ ನೆನಪಿನ ಶಕ್ತಿಯನ್ನು ಅಳತೆ ಮಾಡುತ್ತದೆ. ಪರೀಕ್ಷೆಗಾಗಿ ಓದಲಾದ ವಿಷಯಗಳಿಗೂ; ಹೆಚ್ಚು ಅಂಕಗಳಿಸಿ ಆಯ್ಕೆಯಾಗಿ ಮಾಡಲಾಗುವ ವೃತ್ತಿಗೂ ಅಂತಹ ನೇರ ಸಂಬಂಧವಿರುವುದಿಲ್ಲ- ಎಂಬಂತಹ ಪ್ರಾಥಮಿಕ ತಕಾರರುಗಳನ್ನು ಮುಂದಿಡುತ್ತಿದ್ದಾರೆ. ವ್ಯವಸ್ಥೆಯೂ ಬಹು ಆಯ್ಕೆಯ ಪರೀಕ್ಷೆಯ ಮಾದರಿಯನ್ನು ಒಪ್ಪಿಕೊಂಡು, ಜಾರಿಗೊಳಿಸಿದೆ. ಇದಕ್ಕೆ ಅನುಗುಣವಾಗಿ ವಿದ್ಯಾವಂತರನ್ನು ತಯಾರಿಗೊಳಿಸಲಾಗುತ್ತಿದೆ. ಈ ತಯಾರಿಗೊಳಿಸುವುದಕ್ಕಾಗಿಯೇ ಅನೇಕ ’ಕೋಚಿಂಗ್ ಸೆಂಟರ್’ಗಳು ದಿನದಿನಕ್ಕೂ ಹುಟ್ಟಿಕೊಳ್ಳುತ್ತಿವೆ. ವಿದ್ಯಾವಂತರು ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಕಲಿಯುವುದಕ್ಕೆ ತೋರಿಸುವ ಉತ್ಸುಕತೆಗಿಂತ ಇಂತಹ ಸೆಂಟರ್‌ಗಳಲ್ಲಿ ತೋರಿಸುತ್ತಿದ್ದಾರೆ. ಅದಕ್ಕಾಗಿಯೇ ವರ್ಷಾನುಗಟ್ಟಲೆ ಮನೆಯನ್ನೂ ಬಿಟ್ಟು ಅಹರ್ನಿಶಿ ಓದುತ್ತಾರೆ. ಹಾಗೇ ನೆನಪಿಡಲು ಕೆಲವು ಸೂಕ್ಷ್ಮತೆಗಳನ್ನು ಅನುಸರಿಸುತ್ತಾರೆ. ಹೀಗಿರುವಾಗ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳು ಉದ್ಯೋಗವನ್ನು ಪಡೆಯಲು ನೆರವಾಗುವಂತಹ ಪದವಿಯನ್ನು ನೀಡುತ್ತಿವೆ. ಆ ಪದವಿಗೆ ಬೇಕಾದ ಪಠ್ಯಕ್ರಮವನ್ನು ಮಾತ್ರ ಕಲಿಸುತ್ತವೆ. ಉದ್ಯೋಗ ನೀಡುವಂತಹ ಸೂಕ್ಷ್ಮಓದು ಮತ್ತು ಓದಿನ ಮಾದರಿಗಳನ್ನು ಸೃಷ್ಟಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇನ್ನೂ ಸಾಹಿತ್ಯಕ ವಲಯವು ಬಹು ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷಾ ಮಾದರಿ, ಪ್ರಶ್ನೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಹೊಸ ಆಯಾಮಗಳನ್ನಾದರೂ ಹುಡುಕಿಕೊಟ್ಟಿದಿಯೇ ಅನ್ನುವುದನ್ನು ಕೇಳಿಕೊಳ್ಳಬೇಕಿದೆ.
ಇಂತಹ ವರ್ತಮಾನ ಕಣ್ಣೆದುರಿಗಿರುವಾಗ ’ಸ್ಪರ್ಧಾತ್ಮಕ ಪರೀಕ್ಷಾ ಮೀಮಾಂಸೆ’ಯ ಬಗ್ಗೆಯೂ ತಾತ್ವಿಕ ಚರ್ಚೆಗಳಾಗಬೇಕಿದೆ. ಆ ಮೂಲಕ ಶಾಲಾ ಕಾಲೇಜು ವಿಶ್ವವಿದ್ಯಾಲಯ ಮತ್ತು ಸ್ಪರ್ಧಾತ್ಮಕ ಓದುಗಳ ನಡುವೆ ಉಂಟಾಗಿರುವ ಅಂತರವನ್ನು ಕಡಿಮೆಗೊಳಿಸಬೇಕಿದೆ. ಇದು ಓದಿನಲ್ಲೇ ಮಾಡಬಹುದಾಗಿರುವ ಒಂದು ವಿಧ. ಇನ್ನೊಂದು ಈಗಾಗಲೇ ಚಾಲ್ತಿಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾ ಮಾದರಿಯ ಬಗೆಗಿದೆ. ಪ್ರಶ್ನೆಗಳನ್ನು ಬಹು ಆಯ್ಕೆಯಲ್ಲಿ ಕೊಟ್ಟು, ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಲು ಬೇಕಾಗಿರುವ ಹಿಂದಿನ ಮಾಹಿತಿ ಪ್ರಧಾನ ಓದನ್ನು ವಿಷಯಾಧಾರಿತವಾಗಿ ಮಾರ್ಪಡಿಸಬೇಕು ಅನ್ನಿಸುತ್ತದೆ. ಸದ್ಯದ ಮಟ್ಟಿಗೆ ಎರಡನೇ ಬಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ’ಶಾಸನ ಓದು’ ಕೃತಿಯು ಪ್ರಕಟವಾಗುತ್ತಿದೆ.
©2024 Book Brahma Private Limited.