ಹಿಂದುತ್ವದ ಹಿಂದೆ-ಮುಂದೆ ಜಿ.ರಾಮಕೃಷ್ಣ ಅವರ ಕೃತಿಯಾಗಿದೆ. ಶಂಕರಾಚಾರ್ಯರಿಂದ ಹಿಡಿದು ಆಧುನಿಕ ಮಾರುಕಟ್ಟೆವರೆಗೆ ಖಚಿತವಾಗಿ ಬರೆಯಬಲ್ಲ ಜಿ.ರಾಮಕೃಷ್ಣ ನಮ್ಮ ನಡುವಣ ಬಹುದೊಡ್ಡ ಚಿಂತಕ ಎಂಬುದಕ್ಕೆ 'ಹಿಂದುತ್ವದ ಹಿಂದೆ-ಮುಂದೆ' ಹೆಸರಿನ ಪ್ರಸ್ತುತ ಪುಸ್ತಕವೇ ಸಾಕ್ಷಿ, ಈ ಪುಟ್ಟ ಪುಸ್ತಕದಲ್ಲಿ ಅವರು ವರ್ತಮಾನ ಕಾಲದ ಭಾರತದ ಗಂಭೀರ ಸಮಸ್ಯೆಗಳನ್ನು ಕರಾರುವಾಕ್ಕಾಗಿ ಹಿಡಿದಿಟ್ಟಿದ್ದಾರೆ. ಪುಸ್ತಕ ಚಿಕ್ಕದಾಗಿದ್ದರೂ ಇದು ಒಳಗೊಳ್ಳುವ ವಿಷಯಗಳು ಬೃಹತ್ತಾದುವು. ಜಗತ್ತು ವೇಗವಾಗಿ ಮುಂದಕ್ಕೆ ಚಲಿಸುತ್ತಿರುವಾಗ ತನ್ನದೇ ಪ್ರಜೆಗಳನ್ನು ಹಲವು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಬಿಜೆಪಿಯ ಕಾರ್ಯಸೂಚಿಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ. ನಾವ್ಯಾರೂ ಬದುಕಿರದ ಯಾವುದೋ ಒಂದು ಕಾಲಘಟ್ಟದ ಬಗ್ಗೆ ಅದಮ್ಯ ವ್ಯಾಮೋಹವನ್ನು ಪ್ರಕಟಪಡಿಸುವ 'ಹಿಂದುತ್ವ'ದ ರಾಜಕೀಯದ ಹುನ್ನಾರಗಳನ್ನು ಅವರು ದಿಟ್ಟವಾಗಿ ಬಯಲುಮಾಡಿದ್ದಾರೆ. ಬಿಜೆಪಿ ಮತ್ತು ಅದರ ಬೆನ್ನಿಗೆ ನಿಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾವೇ ಕಲ್ಪಿಸಿಕೊಂಡ ಇತಿಹಾಸ ಮತ್ತು ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದಕ್ಕೆ ಸಮಕಾಲೀನ ಸಮಾಜದಲ್ಲಿರುವ ಜಾತೀಯತೆ, ದಲಿತರ ಸಮಸ್ಯೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸರ್ವಾಧಿಕಾರ, ಮಹಿಳಾ ಶೋಷಣೆ, ಧಾರ್ಮಿಕ ಡಂಭಾಚಾರ, ಹೆಚ್ಚುತ್ತಿರುವ ಮತಾಂಧತೆ, ಇತ್ಯಾದಿಗಳೆಲ್ಲ ತಿಳಿಯದೇ ಹೋಗುತ್ತಿವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ್ದಾರೆ.
©2024 Book Brahma Private Limited.