ರಾಜಕಾರಣಿಗಳ ಬಗ್ಗೆ ಏನಾದರೂ ಬರೆಯುವುದು ಕಷ್ಟ. ಏಕೆಂದರೆ ರಾಜಕೀಯ ಬರೆದಾಗ ಅದು ಒಂದೋ ಟೀಕೆ ಇನ್ನೊಂದೋ ಪ್ರಶಂಸೆ ಮಾತ್ರಾ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅದರಲ್ಲೂ ಭಾರತದಲ್ಲಿ ರಾಜಕಾರಣವನ್ನು ಒಂದು ಸಂಹಿತೆಯಾಗಿ ಕಾಣುವುದು ಸುಲಭವಾದುದೇನಲ್ಲ. ಇಂದು ರಾಜಕೀಯ ಮಾಡುತ್ತಿದ್ದೇನೆ ಎಂದು ಯಾರಾದರೂ ಹೇಳಿದರೆ ಅದಕ್ಕೆ ಅನ್ಯಾರ್ಥಗಳೇ ಪದಕೋಶದಲ್ಲಿ ಹುಟ್ಟುತ್ತವೆ. ಇನ್ನು ಯಾರಾದರೂ ರಾಜಕಾರಣದ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ ಎಂದು ಯಾರೂ ನಂಬಲಾರರು. ಒಟ್ಟಿನಲ್ಲಿ ರಾಜಕೀಯದ ಸ್ಪಟಿಕ ರೂಪ ಸದ್ಯಕ್ಕೆ ಕಾಣಿಸುವುದಿಲ್ಲ. ಇಂಥ ಹೊತ್ತಿನಲ್ಲಿ ನನ್ನ ಶತಮಾನದ ಗೆಳೆಯ ಹರೀಶ್ ರೈ ಈ ಪುಸ್ತಕ ತಂದಿದ್ದಾರೆ. ಹರೀಶ್ ರೈ ರಾಜನೋಟ ಬರೆಯಲು ಹೇಳಿ ಮಾಡಿಸಿದ ವ್ಯಕ್ತಿ. ಏಕೆಂದರೆ ರಾಜಕೀಯದ ಇತಿಹಾಸ ಮತ್ತು ವರ್ತಮಾನಗಳ ಎನ್‌ಸೈಕ್ಲೋಪೀಡಿಯಾ ಈತ. ಹರೀಶ್ ರೈ ಬಿಡಿಬಿಡಿಯಾಗಿ ಈ ಬರಹಗಳನ್ನು ಬರೆಯುತ್ತಿದ್ದಾಗ ನಾನು ಅವರಿಗೆ ಇದನ್ನೆಲ್ಲಾ ಪುಸ್ತಕ ರೂಪದಲ್ಲಿ ತರಬೇಕು ಎಂದು ಸಲಹೆ ನೀಡಿದ್ದೆ. ಹರೀಶ್ ರೈಗೆ ಇದನ್ನು ಹೇಳಿದ ಮೇಲೆ ಸುಬ್ರಹ್ಮಣ್ಯದ ಕುಮಾರಧಾರೆಯಲ್ಲಿ ಒಂದು ಯುಗಕ್ಕೆ ಸಾಕಾಗುವಷ್ಟು ನೀರು ಹರಿದು ಹೋಗಿದೆ. ಈಗ ನನ್ನ ಗೆಳೆಯ ಪುಸ್ತಕ ತಂದಿದ್ದಾರೆ. ಇದು ಕೇವಲ ಒಂದು ರಾಜಕೀಯ ದಾಖಲೆಯಷ್ಟೇ ಆಗಿ ನೋಡಲು ಸೀಮಿತವಾಗಿಲ್ಲ. ಇದೊಂದು ಆಕರ ಗ್ರಂಥದಂತಿದೆ. ಹರೀಶ್ ರೈ ಯಾವ ಕೆಲಸ ಮಾಡಿದರೂ ಅದನ್ನು ಶ್ರದ್ಧೆ ಮತ್ತು ಶಿಸ್ತಿನಿಂದ ಮಾಡುವುದನ್ನು ನಾನು ದಶಕಗಳಿಂದ ಗಮನಿಸಿದ್ದೇನೆ. ಮರ್ಕಂಜದಂಥ ಹಳ್ಳಿಯಿಂದ ಬಂದ ಹರೀಶ್ ರೈ ಸುಬ್ರಹ್ಮಣ್ಯದಲ್ಲಿ ಓದುತ್ತಿದ್ದಾಗ, ಶಿರಾಡಿ ಕಾಡಿನೊಳಗೆ ಹೋಟೇಲು ನಡೆಸುತ್ತಿದ್ದಾಗ ತನ್ನ ಬದುಕಿನಲ್ಲಿ ಬೆಳೆಸಿಕೊಂಡದ್ದು ಅಧ್ಯಯನವನ್ನು. ಓದು ಮತ್ತು ಮಾತುಕತೆ ಮೂಲಕ ಅವರು ಸಂಪಾದಿಸಿದ ಸ್ನೇಹಲೋಕ ಇಂದು ಅವರು ರಾಜಲೋಕದಂಥ ಆಕರ ಗ್ರಂಥ ಸಿದ್ಧಪಡಿಸುವುದಕ್ಕೆ ಕಾರಣವಾಗಿದೆ. ಯಾರೂ ಊಹಿಸಲಾಗದ, ಎಲ್ಲೂ ಸಿಗಲಾರದ, ಮರೆತೇ ಹೋಗಿದ್ದ ಮಾಹಿತಿಗಳು, ಘಟನೆಗಳು, ರಾಜಕಾರಣವನ್ನು ಅವರು ಸಂಗ್ರಹಿಸಿದ್ದಾರೆ. ಹಾಗೇ ಸಂಗ್ರಹಿಸುವಾಗ ಅವರದ್ದೇ ಆದ ಧಾಟಿ, ನಿಲುವು ಮತ್ತು ಭಾಷೆಯ ಸೌಂದರ್ಯವನ್ನು ಬಿಟ್ಟುಕೊಡದೇ ಇದನ್ನು ಮಾಡಿದ್ದಾರೆ. ಹಾಗಾಗಿ ಇದು ಒಂದು ಒಣ ನಿರೂಪಣೆಯಾಗದೇ ಲವಲವಿಕೆಯ ಚಿತ್ರಣವಾಗಿ ರೂಪುಗೊಂಡಿದೆ. ಸ್ವಾತಂತ್ರೋತ್ತರ ಕಾಲದಿಂದ ಇಂದಿನ ತನಕ ದಕ ಮತ್ತು ಉಡುಪಿಗಳಲ್ಲಿ ನಡೆದ ಎಲ್ಲಾ ರಾಜಕೀಯ ವಿದ್ಯಮಾನಗಳನ್ನು ಹರೀಶ್ ರೈ ದಾಖಲಿಸುತ್ತಾರೆ. ಅರುವತ್ತು ಎಪ್ಪತ್ತು ವರ್ಷಗಳ ಕಾಲದ ರಾಜಕೀಯ ನಡೆಗಳನ್ನು ಒಬ್ಬ ರಾಜಕಾರಣಿಯೇ ಮರೆತಿರುತ್ತಾನೆ ಅಥವಾ ಒಂದು ರಾಜಕೀಯ ಪಕ್ಷವೇ ಮರೆತುಕೊಂಡಿರುತ್ತದೆ. ಹಾಗಿರುವಲ್ಲಿ ಇದನ್ನು ಹೆಕ್ಕಿ ತಂದು ಪೋಣಿಸುವುದು ಒಂದರ್ಥದಲ್ಲಿ ಸಮುದ್ರ ದಂಡೆಯಲ್ಲಿ ಮರಳಿನ ಮೇಲೆ ಹರಳಿಗಾಗಿ ಹುಡುಕಾಡಿದಂತೆ. ರಾಜನೋಟ ಪೂರ್ತಿ ಓದಿ ಮುಗಿಸಿದ ಮೇಲೆ ಈ ನಡಿಗೆಯ ಭಾಸ ನಮಗಾಗುತ್ತದೆ. ವಿಭಜನಪೂರ್ವ ದಕ ಜಿಲ್ಲೆಯ ಪ್ರತಿ ಚುನಾವಣೆಯ ಸದ್ದುಗಳನ್ನೂ ಅಕ್ಷರ, ಅಂಕಿಅಂಶ ಮತ್ತು ಚಿತ್ರಗಳಲ್ಲಿ ರಾಜನೋಟ ತುಂಬಿಸಿಕೊಂಡಿದೆ.
©2024 Book Brahma Private Limited.