ನಮ್ಮಲ್ಲಿ ಇಂದು ಹಿಂದೆಂದಿಗಿಂತಲೂ ಭ್ರಷ್ಟಾಚಾರ ಅತೀವವಾಗಿ ಆವರಿಸಿ ಜನಸಾಮಾನ್ಯರ ಮತ್ತು ಪ್ರಾಮಾಣಿಕರ ಬದುಕನ್ನು ನರಕದ ಕೂಪಕ್ಕೆ ತಟ್ಟಿರುವುದು ಅದರಲ್ಲೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಾಸಿಸುತ್ತಿರುವ ರೈತಾಪಿ ಜನಗಳಿಗೂ ತಿಳಿದಿರುವ ಸಂಗತಿಯಾಗಿದೆ. ಎಲ್ಲಿ ನೋಡಿದರೂ, ಯಾವ ಇಲಾಖೆಗಳಿಗೆ ಕಾಲಿಟ್ಟರೂ ಭ್ರಷ್ಟಾಚಾರ ಎಂಬ ಗುಮ್ಮ ಹತ್ತು ಹಲವು ವಿಧಗಳಲ್ಲಿ ಕಛೇರಿಗಳ ಯಾವುದೊ ಒಂದು ಮೂಲೆಯಲ್ಲಿ ಅಡಗಿ ಕುಳಿತಿಲ್ಲ. ಬದಲಿಗೆ ಅತ ಬಟಾಬಯಲಾಗಿದ್ದಾನೆ. ಇಂದು ಭ್ರಷ್ಟಾಚಾರ ಸಾರ್ವತ್ರಿಕವಾಗಿರುವುದು ದೇಶದ ಅರ್ಧ ಪತನಕ್ಕೆ ಸಾಕ್ಷಿಯಾಗಿರುವುದನ್ನು ಎತ್ತಿ ಹಿಡಿಯುತ್ತದೆ. ಈ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದಾರೆ ಎನ್ನುವುದಂತೂ ಸತ್ಯದ ಸಂಗತಿಯಾಗಿದೆ. ಇಂತಹ ಅವ್ಯವಸ್ಥೆಯ ಅತೀವ ಬೆಳವಣಿಗೆಗೆ ಕಡಿವಾಣ ಹಾಕುವವರೂ ಭ್ರಷ್ಟರಾಗಿರುವುದಂತೂ ಅರಗಿಸಿಕೊಳ್ಳಲಾಗದ ದುರ್ದೈವದ ಸಂಗತಿ. ಕುಮಾರ್ ಭದ್ರಾವತಿಯವರ “ಸರ್ವೇಜನಾಃ ಸುಖಿನೋ ಭವಂತು' ಎಂಬ ಈ ಕಾದಂಬರಿಯಲ್ಲಿ ಇಂತಹ ಅನೇಕ ಪ್ರಸಂಗಗಳಿಗೆ ಇತಿಶ್ರೀ ಹಾಡುವ ಸಂಗತಿಗಳಿವೆ, ಲೇಖಕರ ಜಾಣತನ ಮತ್ತು ಅವಲಗೆ ಸಮಾಜದ ಅವ್ಯವಸ್ಥೆಯ ಬಗ್ಗೆ ರೋಷವಿರುವುದು ಅವರ ಬರವಣಿಗೆಯಲ್ಲಿ ಸ್ಪಷ್ಟಪಡಿಸುತ್ತದೆ. ಸಮಾಜದಲ್ಲಿನ ದ್ವಂದ್ವ ನಿಲುವುಗಳು ಅವರನ್ನು ಚಿಂತಿಸುವಂತೆ ಮಾಡಿದೆ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಕುಮಾರ್ ಭದ್ರಾವತಿ ಅವರ ಕಾದಂಬರಿಯ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.