ಭಾರತ ಪ್ರಜಾಪ್ರಭುತ್ವ ಮಾದರಿಯ ಸಂಸದೀಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಚುನಾವಣಾ ಆಯೋಗ ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಮಾದರಿಯನ್ನು ಯಶಸ್ವಿಯಾಗಿ ರೂಪಿಸುವಲ್ಲಿ ತನ್ನ ನ್ಯಾಯಸಮ್ಮತ, ನಿಷ್ಪಕ್ಷಪಾತ ನಡೆಯಿಂದ ಇಡೀ ವಿಶ್ವಕ್ಕೆ ಒಂದು ಮಾದರಿ ಸಂಸ್ಥೆಯಾಗಿದೆ. ಚುನಾವಣೆಗಳು ಭಾರತದ ಬಲವರ್ಧನೆಗೆ ದಿಕ್ಕು-ದಿಶೆಗಳನ್ನು ನಿರ್ದೇಶಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಚುನಾವಣಾ ಫಲಿತಾಂಶವನ್ನೇ ಅವಲಂಬಿಸಿದೆ. ಈ 75 ವರ್ಷಗಳಲ್ಲಿ ಚುನಾವಣಾ ಆಯೋಗ ಯಾವುದೇ ಅಡೆ-ತಡೆಗಳಿರಲಿ ಅವುಗಳಿಗೆ ಜಗ್ಗದೆ ತನ್ನ ಕಾರ್ಯವಿಧಾನವನ್ನು ಪಾರದರ್ಶಕವಾಗಿ ಸಾಧಿಸುತ್ತಾ ಬಂದಿದೆ. ಇದಕ್ಕೆ ಈ ದೇಶದ ಸಾರ್ವಜನಿಕರು ಸಹ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಇದು ನಮ್ಮ ದೇಶದ ಜವಾಬ್ದಾರಿಯುತ ಪ್ರಜೆಗಳ ಸಾಮಾಜಿಕ ಜವಾಬ್ದಾರಿಗೆ ಒಂದು ಉತ್ತಮ ನಿರ್ದಶನ. ರಾಜಕೀಯ ಮತ್ತು ಚುನಾವಣೆ ಇವೆರಡು ಅವಿಭಾಜ್ಯ ಭಾಗಗಳು, ಒಂದಿಲ್ಲದೆ-ಮತ್ತೊಂದಿಲ್ಲ. 1952 ರಿಂದ ನಡೆದ ಎಲ್ಲಾ ಚುನಾವಣೆಗಳು ಸಹ ತನ್ನದೇ ಆದ ರಾಜಕೀಯ ಇತಿಹಾಸವನ್ನು ಹೊಂದಿವೆ. ಇತಿಹಾಸದಲ್ಲಿ ಚರಿತ್ರೆ ಎನ್ನುವುದು ಕಾಲ ಕಳೆದಂತೆ ಗತಿಸಿ ಹೋಗಬಾರದು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ ಅವರು ಈಗ ‘ಮತಪೆಟ್ಟಿಗೆ ‘ಪುಸ್ತಕ ಹೊರತರುತ್ತಿರುವುದು ನಿಜಕ್ಕೂ ಶ್ಲಾಘನೀಯ. ರಾಜಕೀಯ ನಾಯಕರಿಗೆ ಮತ್ತು ಪ್ರತಿಯೊಬ್ಬ ಸಾರ್ವಜನಿಕರಿಗೆ ಇದು ಸ್ಫೂರ್ತಿದಾಯಕ ದಿಕ್ಸೂಚಿಯಾಗಿದೆ.
©2024 Book Brahma Private Limited.