ದೇಶದ ಸಂವಿಧಾನ ಹತ್ತು ಹಲವು ಸವಾಲುಗಳನ್ನು ಪ್ರಸ್ತುತ ಎದುರಿಸುತ್ತಿದೆ. ಸಂವಿಧಾನದ ಹಕ್ಕುಗಳನ್ನು ಬಳಸಿಕೊಂಡೇ ಸಂವಿಧಾನ ವಿರೋಧಿ ನಿಲುವುಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಪರವಾಗಿರುವ ಜನರು ಹೆಚ್ಚು ಹೆಚ್ಚು ಜಾಗೃತರಾಗಬೇಕಾಗಿದೆ. ಸಂವಿಧಾನ ಉಳಿದರೆ, ನಮ್ಮ ಉಳಿವು ಎನ್ನುವುದನ್ನು ಶ್ರೀಸಾಮಾನ್ಯರಿಗೆ ಅರ್ಥೈಸಬೇಕಾಗಿದೆ. ಆದರೆ ಇದೇ ಸಂದರ್ಭದಲ್ಲಿ, ಸಂವಿಧಾನ ಪರವಾಗಿ ಧ್ವನಿಯೆತ್ತುತ್ತಿರುವವರಿಗೂ ನಮ್ಮ ಸಂವಿಧಾನದ ಒಳಗೆ ಏನಿದೆ ಎನ್ನುವುದರ ಸ್ಪಷ್ಟ ಅರಿವಿಲ್ಲ. ಸಂವಿಧಾನ ಆಶಯಗಳ ಕುರಿತಂತೆ ಸರಳವಾಗಿ ಮಾತನಾಡುತ್ತೇವೆಯೇ ಹೊರತು, ಸಂವಿಧಾನವನ್ನು ವಿವರವಾಗಿ ಓದುವುದು, ತಿಳಿದುಕೊಳ್ಳುವುದು ನಮ್ಮ ಕೆಲಸವಲ್ಲ, ಅದು ನ್ಯಾಯಾಲಯದ ಕೆಲಸ ಮತ್ತು ಕಾನೂನು ವಿದ್ಯಾರ್ಥಿಗಳ ಕೆಲಸ ಎಂದು ನಂಬಿದ ದೊಡ್ಡ ವರ್ಗವಿದೆ. ವಿದ್ಯಾರ್ಥಿಯಾಗಿ ಸಂವಿಧಾನದ ಕುರಿತಂತೆ ಪ್ರಾಥಮಿಕ ವಿಷಯಗಳನ್ನು ಕಲಿಯುತ್ತೇವಾದರೂ, ಸಂವಿಧಾನದ ಕುರಿತ ಆಸಕ್ತಿಯಿಂದಲ್ಲ, ಬದಲಿಗೆ, ಅಂಕಗಳನ್ನು ಪಡೆಯುವ ಉದ್ದೇಶದಿಂದ ಇಂದು ಸಂವಿಧಾನ ಹೇಳುವ ಸರಳ ವಿಷಯಗಳನ್ನು ಯುವಜನರಿಗೆ ತಲುಪಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಹಯಾನ ಮತ್ತು ಸಮುದಾಯ ಹೊರತಂದಿರುವ ಸಂವಿಧಾನ ಓದು ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ ಒಂದು ಒಳ್ಳೆಯ ಪ್ರಯತ್ನ ವಾಗಿದೆ. ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರು ಈ ಕೈಪಿಡಿಯನ್ನು ರಚಿಸಿದ್ದಾರೆ. ನಮ್ಮ ದೇಶದ ಸಂವಿಧಾನದ ಅರ್ಥ, ಅದು ರಚನೆಯಾದ ಬಗೆ, ಸಂವಿಧಾನದ ಅಗತ್ಯತೆ, ಅದರ ಸಾಮರ್ಥ್ಯ, ಸಾಧ್ಯತೆ ನಮ್ಮ ಕರ್ತವ್ಯ, ಹಾಗೂ ಸಂವಿಧಾನವು ಎದುರಿಸುತ್ತಿರುವ ಸವಾಲುಗಳ ಕುರಿತು ಕುರಿತು ಈ ಕೃತಿಯಲ್ಲಿ ವಿವರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.