ಬಿಜೆಪಿ 25+1

Author : ರಮೇಶ ದೊಡ್ಡಪುರ

Pages 208

₹ 199.00




Year of Publication: 2020
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

ಬಿಜೆಪಿ 25+1 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ಅವಧಿಯೇ ಇಲ್ಲಿಯ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೆ ರಾಜಕಾರಣಿಯೊಬ್ಬರು ಒಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿಮಾರ್ಣವಾದದ್ದು- ಬಿ.ಎಸ್​. ಯಡಿಯೂರಪ್ಪ- ಇದೇ ಅವಧಿಯಲ್ಲಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ರಾತ್ರಿಯಿಡೀ ವಿಚಾರಣೆ ನಡೆದ ಮೊದಲ ರಾಜಕೀಯ ಪ್ರಕರಣ, ಸುಮಲತಾ ಅಂಬರೀಷ್​ ಜಯಿಸುವ ಮೂಲಕ ಪಕ್ಷೇತರ ಅಭ್ಯಥಿರ್ಯೊಬ್ಬರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಅರ್ಧ ಶತಮಾನದ ದಾಖಲೆ, ರಾಜ್ಯದ ಲೋಕಸಭೆ ಇತಿಹಾಸದಲ್ಲಿ ಕಾಂಗ್ರೆಸ್​ ಪಡೆದ ಅತಿ ಕಡಿಮೆ ಸೀಟು, ರಾಜ್ಯದಲ್ಲಿ ಬಿಎಸ್​ಪಿ ಪಕ್ಷದ ಶಾಸಕರೊಬ್ಬರು ಮೊದಲ ಬಾರಿಗೆ ಸಚಿವರಾಗಿ- ಎನ್​. ಮಹೇಶ್​- ಕಾರ್ಯ, ರಾಜ್ಯದ ವಿಧಾನಸಭೆಯಲ್ಲಿ ಬಿಜೆಪಿಗೆ ಲಭಿಸಿದ ಅತಿ ಹೆಚ್ಚು ಮತಗಳು, ಲೋಕಸಭೆಯಲ್ಲಿ ಒಂದು ಪಕ್ಷ ಪಡೆದ ಅತಿ ಹೆಚ್ಚು ಮತಗಳು, ಘಟಾನುಘಟಿ ನಾಯಕರುಗಳು ಊಹೆಗೂ ಮೀರಿ ನೆಲ ಕಚ್ಚಿದ್ದು. ಹುಡುಕುತ್ತಾ ಹೋದಂತೆ ಹೆಜ್ಜೆ ಹೆಜ್ಜೆಗೆ ಸಿಕ್ಕುವ ದಾಖಲೆಗಳ ನಡುವೆ ಚುನಾವಣಾ ತಂತ್ರಗಳ ಒಳಹೊರಗು, ತಂತ್ರಜ್ಞಾನದ ಬಳಕೆ, ಬದಲಾದ ರಾಜಕೀಯ ಸೆಣೆಸಾಟದ ವೈಖರಿ, ನಾಯಕರ ಅಂತರಂಗ-ಬಹಿರಂಗ ನಡವಳಿಕೆಗಳು, ಸಂಕೀರ್ಣ ವ್ಯಕ್ತಿತ್ವದ ನೈಜ ಚಿತ್ರಣ ಇಲ್ಲಿದೆ. 

About the Author

ರಮೇಶ ದೊಡ್ಡಪುರ
(26 March 1985)

ಲೇಖಕ ರಮೇಶ ದೊಡ್ಡಪುರ ಅವರು ಹಾಸನ ಜಿಲ್ಲೆಯ ದೊಡ್ಡಪುರ ಗ್ರಾಮದವರು. ಬೆಂಗಳೂರಿನ ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ(ಯುವಿಸಿಇ) ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಕಲಿಯುತ್ತಿರುವಾಗ ಪತ್ರಿಕೋದ್ಯಮದೆಡೆಗೆ ಆಕರ್ಷಣೆ. ಸ್ನಾತಕೋತ್ತರ ಡಿಪ್ಲೊಮಾ. ಎರಡು ವರ್ಷ ರಾಷ್ಟ್ರೋತ್ಥಾನ ರಿಸರ್ಚ್​ ಫೌಂಡೇಷನ್​ನಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದರು. ಪಂಡಿತ್​ ದೀನದಯಾಳ್​ ಉಪಾಧ್ಯಾಯ ಸಮಗ್ರ ಬರಹ ಸಂಪುಟದ ಕಾರ್ಯ ಸಲುವಾಗಿ ನವದೆಹಲಿ, ಮಧ್ಯಪ್ರದೇಶ ಮುಂತಾದೆಡೆ ಸಂಚರಿಸಿ ಮೂಲ ಧಾತು ಸಂಗ್ರಹಣೆ. 2012ರಲ್ಲಿ ‘ವಿಜಯವಾಣಿ’  ದಿನಪತ್ರಿಕೆ ಸೇರ್ಪಡೆಯಾಗಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಜನರಲ್​ ವರದಿಗಾರಿಕೆ ವಿಭಾಗದ ಉಪ ಮುಖ್ಯ ವರದಿಗಾರರು.  ರಾಜ್ಯ ರಾಜಕಾರಣದ ಒಂದು ದಶಕದ, ವಿಶಿಷ್ಠವಾಗಿ 2018ರ ...

READ MORE

Excerpt / E-Books

ರಾಜ್ಯ ರಾಜಕಾರಣ ಇತಿಹಾಸದ ಹಾಗೂ ಈಗಿರುವ ಕೆಲವೇ ಸೆಲ್ಫ್​ಸ್ಟೆೈಲ್ಡ್​ ರಾಜಕಾರಣಿಗಳ ಪೈಕಿ ಸಿದ್ದರಾಮಯ್ಯ ಒಬ್ಬರು. 2013ರಲ್ಲಿ ಸಿಎಂ ಆದ ಸಿದ್ದರಾಮಯ್ಯ ಐದು ವರ್ಷ ಪೂರ್ಣ ಆಡಳಿತ ನಡೆಸಿದರು. ದೇವರಾಜ ಅರಸು ನಂತರ ಕರ್ನಾಟಕದಲ್ಲಿ ಐದು ವರ್ಷ ಆಡಳಿತ ರ್ಪೂಣಗೊಳಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಯೂ ಸಿದ್ದರಾಮಯ್ಯಗೆ ಒಲಿಯಿತು. ಎಸ್​.ಎಂ. ಕೃಷ್ಣ ಅವರಿಗೂ ಐದು ವರ್ಷ ಅಧಿಕಾರಾವಧಿ ರ್ಪೂಣಗೊಳಿಸುವ ಅವಕಾಶ ಇತ್ತು. ಆದರೆ 2004ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಪ್ರಮೋದ್​ ಮಹಾಜನ್​ ಆಲೋಚನೆಯಲ್ಲಿ ರೂಪುಗೊಂಡಿದ್ದ ಇಂಡಿಯಾ ಶೈನಿಂಗ್​(ಭಾರತ್​ ಉದಯ್​) ಅಭಿಯಾನಯಾಗುವ ಆರು ತಿಂಗಳು ಮುನ್ನವೇ ಕೇಂದ್ರದ ಜತೆಗೇ ಚುನಾವಣೆ ಘೋಷಿಸಿಕೊಂಡಿದ್ದರಿಂದ ಕೃಷ್ಣ ಈ ಅವಕಾಶ ತಪ್ಪಿಸಿಕೊಂಡರು.

Reviews

ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ 'ಬಿಜೆಪಿ 25+1' ಕೃತಿ ದಾರಿದೀಪ!

ರಮೇಶ ದೊಡ್ಡಪುರರು ಬರೆದ BJP 25 + 1 ಪುಸ್ತಕವನ್ನು ಸುಮಾರು ಒಂದು ವಾರದ ಕೆಳಗೆ ಓದಿ ಕೆಳಗಿಟ್ಟಿದ್ದೆ. ನಿನ್ನೆಯ ದಿನ ಅವರ ಜೊತೆ ಮಾತನಾಡಿದ ನಂತರ ( ಆಫ್ ದಿ ರೆಕಾರ್ಡ್ !!)  ಪುಸ್ತಕದ ಬಗ್ಗೆ ಒಂದಷ್ಟು ಬರೆಯಬೇಕೆನಿಸಿತು.ಸಮಕಾಲೀನ ರಾಜಕೀಯ ಬೆಳವಣಿಗೆಗಳ ವಿಶ್ಲೇಷಣೆಯಿರುವ ಈ ಪುಸ್ತಕ ರಾಜ್ಯದ ಕಳೆದ ದಶಕದ ರಾಜಕೀಯ ಬೆಳವಣಿಗೆಗಳ ಅನೇಕ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಓದಿ ತಿಳಿಯುವ ಚಟವಿರುವ ನಾನು ಲೇಖಕರು  ಈ ಪುಸ್ತಕದಲ್ಲಿ ಸರಳ ರೀತಿಯಲ್ಲಿ ಅನೇಕ ಕುತೂಹಲಕಾರಿ ವಿಚಾರಗಳನ್ನು ಹೇಳಿದನ್ನು ಓದಿ ಅನುಭವಿಸಿದ್ದೇನೆ. ಸೋಜಿಗದ ಸಂಗತಿಯೆಂದರೆ ಅನೇಕ ಸೂಕ್ಷ್ಮ ವಿಚಾರಗಳನ್ನು ಅವರು ಬರೆಯದೆ ನಮ್ಮ ಗ್ರಹಿಕೆಗೆ ಬಿಟ್ಟುಬಿಟ್ಟಿದ್ದಾರೆ (ಉದಾಹರಣೆಗೆ - Why did not Bjp get a clear mandate in 2018 Vidhanasabha polls)

ಆ ವಿಷಯಕ್ಕೆ ಆಮೇಲೆ ಬರುತ್ತೇನೆ.. ಮೊದಲಿಗೆ ಲೇಖಕರಿಗೆ ಶುಭಾಶಯಗಳನ್ನು ತಿಳಿಸಬೇಕಿದೆ.ಈ ಮಾದರಿಯ ಪುಸ್ತಕಗಳ ಆಯಾ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳನ್ನು ದಾಖಲಿಸುವ ಮಹತ್ವದ ಕೆಲಸವನ್ನು ಮಾಡುತ್ತವೆ. ಕನ್ನಡದ ಪತ್ರಿಕೋದ್ಯಮ ವೈಬ್ರೆಂಟ್ ಮತ್ತು ಶಕ್ತಿಶಾಲಿಯಾಗಿದ್ದ ಕಾಲವೂ ಇತ್ತು. ಗುಂಡೂರಾಯರ ಸರಕಾರವನ್ನು ಅಲ್ಲಾಡಿಸುವಲ್ಲಿ ಲಂಕೇಶ್ ಪತ್ರಿಕೆ ಪ್ರಮುಖ ಪಾತ್ರವಹಿಸಿದಂತೆ. ಆದರೆ ಸಮಕಾಲೀನ ರಾಜಕೀಯ ವಿದ್ಯಮಾನಗಳ ಬಗೆಗೆ ಪುಸ್ತಕಗಳು ಕನ್ನಡದಲ್ಲಿ ಕಡಿಮೆ (ನನಗೆ ತಿಳಿದ ಮಟ್ಟಿಗೆ). ಹಾಗಾಗಿ ಈ ಪುಸ್ತಕ ಮುಂದಿನ ದಿನಗಳಲ್ಲಿ ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ ದಾರಿದೀಪ!!
ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ನಾನು ಈಗಿನ ತನಕ ಗ್ರಹಿಸಿಕೊಂಡದ್ದು ಆಗಿನ ಸಮಕಾಲೀನ‌ ನಾಯಕರ ಆತ್ಮಕಥೆಗಳ ಮೂಲಕ. ಆತ್ಮಕಥೆಗಳು ಅನೇಕ ಬಾರಿ ವಾಸ್ತವತೆಯಿಂದ ದೂರ ಸರಿದು ಸ್ವಪ್ರಶಂಸೆಗೆ ಸೀಮಿತವಾಗಿತ್ತದೆ ಮತ್ತು biased ಇರುವ ಸಂಭವವೂ ಇರುತ್ತದೆ. ಲೇಖಕರು Pro BJP ಪರವಾಗಿ / ಅಥವಾ ಬಲಪಂಥೀಯ ಸಿದ್ಧಾಂತದ ಪರವಾಗಿ  biased ಅಂತ ಅನಿಸದಿದ್ದರೂ ಒಂದಷ್ಟು ಸಾಫ್ಟನೆಸ್ ಇರುವುದಂತೂ ಸತ್ಯ.. After all we all are biased.. ನಮ್ಮ ನಮ್ಮ ಸ್ನೇಹಿತರೆಂದರೆ ಯಾರಿಗೆ ಇಷ್ವವಿರುವುದಿಲ್ಲ ಹೇಳಿ!! ಆದರೆ ಮೆಚ್ಚಬೇಕಾದ ಅಂಶವೆಂದರೆ ಲೇಖಕರು ಬಿಜೆಪಿಯ ಕಹಿಸತ್ಯಗಳ ಮೇಲೂ ಬೆಳಕು ಚೆಲ್ಲುವುದರ ಜೊತೆಗೆ ಬೇರೆ ನಾಯಕರ ಒಳ್ಳೆಯತನವನ್ನೂ ಗಮನಿಸಿದ್ದಾರೆ.

ಉದಾಹರಣೆಗೆ: ೧) ಬೆಂಗಳೂರಿನ‌ ರಾಜಕೀಯ ನಾಯಕರ ಪಕ್ಷಾತೀತ ಸ್ನೇಹಗಳು ಮತ್ತು "ತಾಳ ಮೇಳ"
೨) ಶ್ರೀಮತಿ ತೇಜಸ್ವಿ ಅನಂತಕುಮಾರರಿಗೆ ಟಿಕೆಟ್ ಕೊಡದಿರುವ ಹಿಂದಿದ್ದ ಪೊಲಿಟಿಕಲ್ ದೂರದೃಷ್ಟಿ!!
೩) ಚುನಾವಣಾ ಪ್ರಣಾಳಿಕೆಗಳನ್ನು ಗಂಭೀರವಾಗಿ ತಗೆದುಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ದಿಟ್ಟತನ.

ಈ ಪುಸ್ತಕದಲ್ಲಿ ಎರಡು ಪ್ರಮುಖ ವಿಷಯಗಳಿವೆ: ಪುಸ್ತಕದ ಹೆಸರೇ ಹೇಳುವಂತೆ "ಬಿಜೆಪಿ 25+1" ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಮಾಡಿದ ಅದ್ಭುತವಾದ ಸ್ಟ್ರಾಟಜಿಗಳು. ರಾಜಕೀಯ ಭಾಷೆಯಲ್ಲಿ ಹೇಳಬೇಕೆಂದರೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಮಾಡಿದ ಸ್ಥಳೀಯ "ವರ್ಕೌಟುಗಳು"
ಉದಾಹರಣೆಗೆ - ಖರ್ಗೆಸಂತ್ರಸ್ತರನ್ನು ಒಗ್ಗೂಡಿಸಿದ್ದು.. ಸುಮ್ಮನೆ ಸುಮಕ್ಕನ ಬೆನ್ನಿಗೆ ನಿಂತದ್ದು ಇತ್ಯಾದಿ..
ಮೇಲಿನ ವಿಷಯಗಳು ಈ ಪುಸ್ತಕದಲ್ಲಿ ಬಹಳ ಸ್ವಷ್ಟವಾಗಿ ಮೂಡಿಬಂದಿದೆ..

ಪುಸ್ತಕದ ಮೊದಲ  ಅರ್ಧ ಭಾಗದಲ್ಲಿ  ಕರ್ನಾಟಕದ 2018ರ ವಿಧಾನಸಭೆ ಚುನಾವಣೆಗಳ ಆಸುಪಾಸಿನ ಬೆಳವಣಿಗೆಗಳ ಬಗ್ಗೆ ಬರೆದಿದ್ದಾರೆ. ಆಡಳಿತಾರೂಢ ಸರಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಓಲೈಸುವದರ ಆಪಾದನೆಯ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯಿತ ವಿರೋಧಿ ಸರಕಾರವೆಂಬ ಬಲವಾದ #perception ಸೃಷ್ಟಿಯಾಗಿದ್ದರೂ ಬಿಜೆಪಿಗೆ ಯಾಕೆ ಸ್ಪಷ್ಟವಾದ ಬಹುಮತ ಬರಲಿಲ್ಲವೆಂಬ ಕಹಿ ಸತ್ಯಗಳನ್ನು ಅವರು ಹೇಳದೇ ಉಳಿಸಿದ್ದಾರೆ.
ಆ ಚುನಾವಣೆಯಲ್ಲಿ ಪವರ್ ಸೆಂಟರ್ ಗಳಾದ ಯಡಿಯೂರಪ್ಪ , ಬಿ.ಎಲ್ ಸಂತೋಷ್ ಮತ್ತು ದೆಹಲಿಯಿಂದ ಬಂದು ಹೆಡ್ ಮಾಸ್ಟರ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಶಾ ಈ ಮೂವರೂ ಶಕ್ತಿ ಮೀರಿ ದುಡಿದರೂ ಬಹುಮತದ ಗುರಿಮುಟ್ಟದ ಬಗ್ಗೆ ಇನ್ನೂ ಆಳವಾಗಿ ಬರೆಯಬಹುದಿತ್ತು. ಅವರ individual brilliance ಅದರೆ collective failure ಬಗ್ಗೆ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿರುವ ಲೇಖಕರು ಕುಟುಕಬೇಕಿತ್ತು. ಹೊಗಳಲು ಅವರ ಅಭಿಮಾನಿಗಳು ಇದ್ದಾರೆ, ಪತ್ರಕರ್ತರ ಪೆನ್ನು ಇರುವುದೇ ತಿವಿಯಲು..

ರಾಜಕೀಯ ವಿದ್ಯಮಾನಗಳ ಸೂಕ್ಷ್ಮತೆಯನ್ನು‌ ಅರಿಯುವ ಮತ್ತು ಬರೆಯುವ ಎರಡೂ ಕಲೆ ಲೇಖಕರಿಗೆ ಸಿದ್ದಿಸಿದೆ. ಕನ್ನಡದಲ್ಲಿ ಅವರಿಂದ ಈ ಮಾದರಿಯ ಅನೇಕ ಪುಸ್ತಕಗಳು ಬರಲಿ ಎಂಬ ಹಾರೈಕೆಯೊಂದಿಗೆ..

- ಮೇಜರ್ ಡಾ. ಕುಶ್ವಂತ್ ಕೋಳಿಬೈಲು

Related Books