ಭಾರತದ ಇತಿಹಾಸದಲ್ಲಿ ಮೂರು ಗಾಂಧೀಗಳ ಹತ್ಯೆ ಕರಾಳ ಘಟನೆಗಳಾಗಿ ದಾಖಲಿಸಲ್ಪಟ್ಟಿವೆ. ಮಹಾತ್ಮಾ ಗಾಂಧೀ, ಇಂದಿರಾ ಗಾಂಧೀ ಮತ್ತು ರಾಜೀವ್ ಗಾಂಧೀ, ಈ ಮೂವರು ಕೂಡ ನ್ಯಾಯಯುತ ಸಾವನ್ನಪ್ಪಲಿಲ್ಲ. ಮಹಾತ್ಮಾ ಗಾಂಧೀ, ನಾಥೂರಾಮ್ ಗೋಡ್ಸೆಯಿಂದ ಹಾರಿಸಲ್ಪಟ್ಟ ಕಾಡತೂಸಿಗೆ ಬಲಿಯಾದರೆ, ಇಂದಿರಾ ಗಾಂಧೀ ತಮ್ಮ ಅಂಗರಕ್ಷಕರಿಂದಲೇ ಹತರಾದರು. ಇನ್ನು ರಾಜೀವ್ ಗಾಂಧೀ ಎಲ್‍ಟಿಟಿಇ ಉಗ್ರರ ಮಾನವ ಬಾಂಬ್ ದಾಳಿಗೆ ಬಲಿಯಾದರು. ಈ ಮೂರೂ ಕರಾಳ ಘಟನೆಗಳ ಮೇಲೆ ಬೆಳಕು ಚೆಲ್ಲುವಂತಹ ಪುಸ್ತಕ ಗಾಂಧೀ ಹತ್ಯೆ ಮತ್ತು ಗೋಡ್ಸೆ. ಶೀರ್ಷಿಕೆಯಲ್ಲಿ ಇದು ಕೇವಲ ಮಹಾತ್ಮಾ ಗಾಂಧೀ ಹತ್ಯೆಯ ಕುರಿತು ಬರೆದಂತಹ ಪುಸ್ತಕವೆಂದು ಭಾಸವಾದರೂ, ಈ ಪುಸ್ತಕ ಹಲವು ಅಚ್ಚರಿ ಹುಟ್ಟಿಸುವ ಅಂಶಗಳ ಕುರಿತು ಬೆಳಕು ಚೆಲ್ಲುತ್ತದೆ. ಮೂರು ಹತ್ಯೆಗಳ ಹಿಂದಿರುವ ಕಾರಣ, ಕೊಲೆಯಾದವರು ಮತ್ತು ಕೊಲೆ ಮಾಡಿದವರ ಧೋರಣೆ ಈ ಎಲ್ಲಾ ಅಂಶಗಳ ಕುರಿತು ರವಿ ಬೆಳಗೆರೆಯವರು ಬರೆಯುತ್ತಾರೆ. ಕೇವಲ ಘಟನಾವಳಿಗಳನ್ನು ವಿವರಿಸದೆ ಘಟನೆಗಳ ಕೂಲಂಕುಶ ವಿಶ್ಲೇಷಣೆ ಹಾಗೂ ವಿವರಣೆಯನ್ನು ಈ ಪುಸ್ತಕದಲ್ಲಿ ಕಾಣಬಹುದು. ಅಪರೂಪದ ಛಾಯಾಚಿತ್ರಗಳನ್ನೊಳಗೊಂಡ ಈ ಪುಸ್ತಕ ಸುಲಭದಲ್ಲಿ ಅರ್ಥೈಸಬಹುದು.
©2024 Book Brahma Private Limited.