ಕೋಲಾರದ ಬೆಟ್ಟಕ್ಕೆ ಸಂಬಂಧಿಸಿದ ಜನಪದ ಕತೆಯೊಂದನ್ನು ಅಜ್ಜಿಯ ಬಾಯಲ್ಲಿ ನಿರೂಪಿಸಿದ್ದೇನೆ. ಅದು ಬೆಟ್ಟದ ಮೇಲಿ ದುರ್ಗಿ ಕೋಟೆಯ ಕತೆ. ಕತೆಯ ತಿರುಳು ಹುರುಳಿ ಕಾಳು, ಯಾಕೆ ನಮ್ಮ ಜನಪದ ಕತೆಗಳಲ್ಲಿ ಇಂತಹ Flora N' Fauna ತಿರುಳಾಗಿರುತ್ತದೆ . ಕತೆಯೂ ದುಂಡಯ್ಯ ಕಲಿಸಿದ್ದಾ? ನರಸೇಗೌಡರಾ... ಗೊತ್ತಿಲ್ಲ... ನೆನೆಪು ಕೊರೆ. ಅಂತೂ ಆ ಜನಪದ ಕತೆಯಲ್ಲಿ ಮೊಮ್ಮಗನೊಬ್ಬ ಅಜ್ಜಿ ಕೊಟ್ಟ ದೋಸೆಗಳನ್ನು ನಾಯಿಗಳಿಗೆ ಸಾಲ ಕೊಡುತ್ತಾನೆ. ಬೆಟ್ಟದ ಕಳ್ಳರು ದೋಚಿ ತಂದ ನಿಧಿ ಹೊತ್ತು ತರುತ್ತಾನೆ. ಆಲಿಬಾಬ.. ಕಳ್ಳರ ಗುಹೆಯಿಂದ ಗುಟ್ಟು ಅರಿತು ಅಪಹರಿಸಿ ತರುವಂಥ ಮಾದರಿಯದಲ್ಲ ಇದು. ಅವನ ಮುಗ್ಧತೆಗೆ ಸಲ್ಲುವ ಸೆಲ್ಯೂಟ್, ಅದಕ್ಕೆಂದೇ ನಾನು ಮುಂದೆ 'ಮರ್ಜಿನಾ ಮತ್ತು 40 ಜನ ಕಳ್ಳರು' ಬರೆದು ಕಾವ್ಯನ್ಯಾಯ ದಕ್ಕಿಸಿದೆ. ಇದೀಗ 'ನಾಯಿತಿಪ್ಪ' ಹೆಸರು ಮತ್ತು ಚಹರೆ... ವಿಶ್ವ ನಿರ್ಗತಿಕ ತಿಪ್ಪ ಚಾಲ್ಲಿ ಚಾಪ್ಲಿನ್‌ನ ಒಂದಂಶ. ಈ ನೆಲದ ತಿರಸ್ಕೃತ (under dog) ತಿಪ್ಪ, ಅವನ ಮುಖಾಮುಖಿ ಅಥವಾ ಹಲವು ಮಜಲುಗಳ ಸಮರ ಆಧುನಿಕೋತ್ತರ ಸಂರಚನೆಗಳ ಜೊತೆಗೆ, ತಿಪ್ಪನನ್ನು Incubate ಮಾಡುವ ಇಂಥ ಅಂತಃಕರಣ ಕವಚವಾಗಿ ಅಜ್ಜಿ ಮತ್ತು ನ್ಯಾಯಾಧೀಶರ ಪಾತ್ರಗಳು ಮೂಡಿ ಬಂದಿವೆ. ನ್ಯಾಯಾಧೀಶನ ಪಾತ್ರದ ಸೂಲನ್ನು ನಾನು ಬ್ರೆಕ್ಟ್‌ನ 'ಕಕೇಷಿಯನ್ ಚಾಕ್ ಸರ್ಕಲ್'ನ ಅಜ್ಜಾಕ್ ಪಾತ್ರದಿಂದ ನೇರಾನೇರವೇ ಎತ್ತಿಕೊಂಡಿದ್ದೇನೆ. ಈ ಕುರಿತು ನನಗೆ ಯಾವ ನಾಚಿಕೆಯೂ ಇಲ್ಲ. ಅಂತೆಯೇ ಈ ನಾಟಕ ನಮ್ಮ ನೆಲದ ಇನ್ನೂ ಎರಡು ಜನಪದ ಕತೆಗಳ ಒಡಲನ್ನು ಒಳಗೊಂಡಿದೆ. ಜನಪದ ವಿವೇಕಕ್ಕಿಂತ ಜೀವಪರವಾದದ್ದು ಇನ್ನೊಂದಿಲ್ಲ. ಆ ಕಾರಣಕ್ಕಾಗಿಯೇ ಅಜ್ಜಿಯ ಪಾತ್ರ ಈ ನಾಟಕದ ಬೇರು. ತಿಪ್ಪ ಚಿಗುರು. ಆ ಬೇರು ಉಳಿಯಲೆಂಬ ಏಕೈಕ ಉದ್ದೇಶಕ್ಕಾಗಿ ಅಜ್ಜಿ ತನ್ನ ಮಾಂತ್ರಿಕ ಕ್ರಿಯಾ ಜಗತ್ತನ್ನು ಮರು ಸೃಷ್ಟಿಸುತ್ತಾಳೆ. ಇನ್ನುಳಿದಂತೆ ನಾಟಕವೇ ಮಾತಾಡುತ್ತದೆಯಾದ್ದರಿಂದ ಹಾಗೂ ಈ ನಾಟಕವನ್ನು ಮಕ್ಕಳ ಭಾಷಾ ಕಲಿಕೆ, ಸಾಮಾಜಿಕ ತಿಳುವಳಿಕೆ ಮತ್ತು ವಿವೇಕ ವಿಸ್ತಾರಕ್ಕೆಂದೇ ಬರೆದಿರುವೆನಾದ್ದರಿಂದ, ನನ್ನ ಉದ್ದೇಶದ ಈಡೇರಿಕೆ ಓದುವ ಯಾ ಆಡುವವವರ ಮೇಲೆ ಅವಲಂಬಿತ.
©2024 Book Brahma Private Limited.